ಚನ್ನರಾಯಪಟ್ಟಣ: ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಪುರಸಭೆ ಸಿಬ್ಬಂದಿ ಮುಂದಾದರೆ ಪುರಸಭೆ ಮೇಲಧಿಕಾರಿಗಳು ಪ್ಲಾಸ್ಟಿಕ್ ಸಂಗ್ರಹಣೆಗಾರರೊಂದಿಗೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡಿರುವುದರಿಂದ ಸಿಬ್ಬಂದಿಯ ಕೆಲಸವೆಲ್ಲಾ ವ್ಯರ್ಥವಾಗುತ್ತಿದೆ.
ಗೋದಾಮಿನಲ್ಲಿ ಶೇಖರಣೆ: ಪಟ್ಟಣದ ಗಣೇಶನಗರ ಸ್ಲಂ, ಚನ್ನಿಗರಾಯ ಬಡಾವಣೆ, ಕೋಟೆ ಬಡಾವಣೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್ ಕೈಚೀಲ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಟೇಬಲ್ ಕವರ್ ಸೇರಿದಂತೆ ಅನೇಕ ಪ್ಲಾಸ್ಟಿಕ್ ಉತ್ಪನ್ನಗಳನ್ನು ಶೇಖರಣೆ ಮಾಡಿ ಇಟ್ಟಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೆ ಅಧಿಕಾರಿಗಳು ಗೋದಾಮು ಮಾಲೀಕ ರೊಂದಿಗೆ ಮಾತುಕತೆ ಮಾಡಿ ಸಮ್ಮನಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆಪಾದನೆ ಮಾಡುತ್ತಿದ್ದಾರೆ.
ಗೋದಾಮುದಾರರೊಂದಿಗೆ ಅಧಿಕಾರಿಗಳ ನಂಟು: ಪಟ್ಟಣದಲ್ಲಿನ ವಾಣಿಜ್ಯ ಅಂಗಡಿಗಳು ಹಾಗೂ ತಾಲೂಕಿನ ನುಗ್ಗೇಹಳ್ಳಿ, ಹಿರೀಸಾವೆ, ಶ್ರವಣಬೆಳಗೊಳ, ಬಾಗೂರು ಹೋಬಳಿ ಸೇರಿದಂತೆ ಹೆಚ್ಚು ವಾಣಿಜ್ಯ ಸಂಕೀರ್ಣಗಳು ಹೊಂದಿರುವೆಡೆಗೆ ಪಟ್ಟಣದಲ್ಲಿ ಗೋದಾಮು ಮಾಡಿಕೊಂಡು ಲಾರಿಗಟ್ಟಲೇ ಪ್ಲಾಸ್ಟಿಕ್ ಸಂಗ್ರಹ ಮಾಡಿರುವವರು ಸರಬರಾಜು ಮಾಡುತ್ತಿ ದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡು ಅನುಸರಿಸುವುದು ಹಾಗೂ ರಾತ್ರಿ ವೇಳೆ ಗೋದಾಮುದಾರರ ಭೇಟಿ ಮಾಡುವುದು ಇವರ ನಿತ್ಯದ ಕಾಯಕವಾಗಿದೆ.
ಅಂಗಡಿ ಮೇಲೆ ಮಾತ್ರ ದಾಳಿ: ಪುರಸಭೆ ವ್ಯಾಪ್ತಿ ಯಲ್ಲಿ ನೂರಾರು ಟನ್‌ಗಳಷ್ಟು ಪ್ಲಾಸ್ಟಿಕ್ ಸಂಗ್ರಹ ಮಾಡಿರುವ ಗೋದಾಮಿನ ಮೇಲೆ ಪುರಸಭೆ ಸಿಬ್ಬಂದಿ ದಾಳಿ ಮಾಡಿದರೆ ದಾಸ್ತಾನು ವಶ ಪಡಿಸಿ ಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುವ ಮೂಲಕ ಪರೋಕ್ಷವಾಗಿ ಪ್ಲಾಸ್ಟಿಕ್ ಬಳಕೆಗೆ ಬೆಂಬಲ ನೀಡುತ್ತಿ ದ್ದಾರೆ. ದಿನಸಿ ಅಂಗಡಿ, ತರಕಾರಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈ ಚೀಲವನ್ನು ವಶಪಡಿಸಿ ಕೊಂಡು ಅದರ ಭಾವ ಚಿತ್ರ ತೆಗೆದು ಜಿಲ್ಲಾಡಳಿತಕ್ಕೆ ರವಾನೆ ಮಾಡುವ ಮೂಲಕ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮುಂದಾಗುತ್ತಿದ್ದೇವೆ ಎಂದು ದಿಕ್ಕು ತಪ್ಪಿಸುತ್ತಿದ್ದಾರೆ.
ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ: ಉಪವಿಭಾಗಾ ಧಿಕಾರಿ ಡಾ. ಎಚ್.ಎಲ್.ನಾಗರಾಜು ಪುರಸಭೆಯಲ್ಲಿ ಎರಡು ಸಭೆ ಮಾಡಿ ತಾಲೂಕಿನಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಯಂತ್ರಣ ಮಾಡಲು ಏಳು ತಂಡ ರಚಿಸಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿ ಎಂ.ಕುಮಾರ್, ತಹಶೀಲ್ದಾರ್ ಜೆ.ಬಿ.ಮಾರುತಿ, ತಾಪಂ ಇಒ ಚಂದ್ರಶೇಖರ್, ಸಿಡಿಪಿಒ ಶಾರದ, ಟಿಎಚ್ಒ ಡಾ.ಕಿರಣಕುಮಾರ್, ಅಬಕಾರಿ ಅಧಿಕಾರಿ ರಘು, ಆಹಾರ ನಿರೀಕ್ಷಕ ಸೇರಿದಂತೆ ಏಳು ತಂಡವಿದೆ. ಆದರೂ ಗೋದಾಮುಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಕ್ಕೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಮಾಹಿತಿ ನೀಡಿದ್ದರೂ ಪ್ರಯೋಜನವಿಲ್ಲ: ಪಟ್ಟಣದ ಗಣೇಶನಗರ ಗೋದಾಮಿಗೆ ಆಟೋದಲ್ಲಿ ಪ್ಲಾಸ್ಟಿಕ್ ಲೋಟ ಹಾಗೂ ಕೈಚೀಲವನ್ನು ತಂದು ಸಂಗ್ರಹಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪುರಸಭೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ತೆರಳಿದ ಪರಿಸರ ಅಭಿಯಂತರ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ಉಮಾದೇವಿ, ಪುಟ್ಟಸ್ವಾಮಿ, ಕಂದಾಯ ಅಧಿಕಾರಿ ಶಿವಕುಮಾರ್ ತೆರಳಿದರು ಈ ವೇಳೆ ಆಟೋನಲ್ಲಿ 9 ಬಾಕ್ಸ್ ಪ್ಲಾಸ್ಟಿಕ್ ಲೋಟಗಳು ಇದ್ದವು ಅವುಗಳನ್ನು ಪರಿಶೀಲಿಸುವ ವೇಳೆ ಗೋದಾಮು ಬೀಗ ಹಾಕಿಕೊಂಡು ಮಾಲೀಕ ಅಲ್ಲಿಂದ ಪರಾರಿಯಾದ.ಗೋದಾಮಿಗೆ ಬೀಗಮುದ್ರೆ ಹಾಕಲಿಲ್ಲ: ಸಿಬ್ಬಂದಿ ಗೋದಾಮಿನಲ್ಲಿ ಪ್ಲಾಸ್ಟಿಕ್ ಇರುವ ಬಗ್ಗೆ ದೂರವಾಣಿ ಮೂಲಕ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದರೂ, ಬೀಗ ಮುದ್ರೆ ಹಾಕಲು ಹೊಸ ಬೀಗ ತರಿಸಲಾಗಿದೆ ಎಂದು ತಿಳಿಸಿದರು, ಸ್ವಲ್ಪ ಹೊತ್ತಿನ ನಂತರ ಸ್ಥಳದಿಂದ ಒಬ್ಬರರಾಗಿ ತೆರಳಿ ಪುರಸಭೆ ತೆರಳಿದರು.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ