Advertisement

ಬ್ರಹ್ಮಾವರದ ಭವಿಷ್ಯಕ್ಕೆ ಪುರಸಭೆ ಅನಿವಾರ್ಯ

10:37 PM Jan 14, 2020 | mahesh |

ಬ್ರಹ್ಮಾವರ: ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಾವರ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ಸಂಪರ್ಕ ರಸ್ತೆಗಳು ಸಮಸ್ಯೆಯಾಗಿ ಕಾಡುತ್ತಿವೆ. ಸಕಾರಾತ್ಮಕ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರುವುದು ಅನಿವಾರ್ಯವಾಗಿದೆ.

Advertisement

ಬಹು ಬೇಡಿಕೆ
ಚಾಂತಾರು, ವಾರಂಬಳ್ಳಿ, ಹಂದಾಡಿ ಗ್ರಾ.ಪಂ.ಗಳ ಜತೆಗೆ ಪರಿಸರದ ಹಾರಾಡಿ, ಆರೂರು, ನೀಲಾವರ ಪಂಚಾಯತ್‌ಗಳನ್ನು ಸೇರಿಸಿ ಪುರಸಭೆ ರಚಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರಿಂದ ಉಡುಪಿ-ಬ್ರಹ್ಮಾವರ ಅವಳಿ ನಗರಗಳಾಗಲಿವೆ ಎಂಬ ಮಾತುಗಳೂ ಇವೆ.

ಕಾಡುವ ಸಮಸ್ಯೆಗಳು
ಬ್ರಹ್ಮಾವರ ಅಭಿವೃದ್ಧಿಯ ನಾಗಾಲೋಟದಲ್ಲಿ ಇರುವಂತೆ ಹಲವು ಸಮಸ್ಯೆಗಳೂ ಬಾಯ್ದೆರೆದಿವೆ. ಪೇಟೆಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಘನ ತಾಜ್ಯ ನಿರ್ವಹಣೆ, ಸಂಪರ್ಕ ರಸ್ತೆಗಳ ಅಭಿವೃದ್ಧಿ ಆಗಿಲ್ಲ. ಬ್ರಹ್ಮಾವರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯ. ಆರೂರು, ನೀಲಾವರ ಪಂಚಾಯತ್‌ಗಳನ್ನು ಸೇರಿಸಿಕೊಳ್ಳುವುದರಿಂದ ಇದಕ್ಕೆ ಪೂರಕವಾಗಲಿದೆ. ವಾರಾಹಿ ಯೋಜನೆಯೂ ಇಲ್ಲಿಗೆ ತಲುಪಬೇಕಿದೆ.

ಶೈಕ್ಷಣಿಕ ನಗರಿ
ಈಗಾಗಲೇ ಶೈಕ್ಷಣಿಕ ನಗರಿಯಾಗಿ ಗುರುತಿಸಿಕೊಂಡಿದ್ದು, ಆಂಗ್ಲ ಮಾಧ್ಯಮ ಶಾಲೆಗಳು, 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರಕಾರಿ ಬೋರ್ಡ್‌ ಶಾಲೆ ಹೃದಯ ಭಾಗದಲ್ಲಿದೆ.

ಸರಕಾರಿ ಕಚೇರಿಗಳ ತಾಣ
ಮುಖ್ಯವಾಗಿ ವಾರ್ಷಿಕ 12 ಕೋಟಿ ರೂ. ಮಿಕ್ಕಿ ಆದಾಯ ತರುವ ಉಪ ನೋಂದವಣಾಧಿಕಾರಿ ಕಚೇರಿ, ತಹಶೀಲ್ದಾರ್‌ ಕಚೇರಿ, ಉಪ ಖಜಾನೆ ಕಚೇರಿ, ಪೊಲೀಸ್‌ ವೃತ್ತ ನಿರೀಕ್ಷಕರು, ಉಪನಿರೀಕ್ಷಕರ ಕಚೇರಿ, ಮೆಸ್ಕಾಂ, ಪಾಸ್‌ಪೋರ್ಟ್‌ ಕೇಂದ್ರ, ಶಿಕ್ಷಣಾಧಿಕಾರಿ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು, 20ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿದೆ. ಗಾಂಧಿ ಮೈದಾನ ಕ್ರೀಡಾಂಗಣ ಅಭಿವೃದ್ಧಿ ಹಂತದಲ್ಲಿದೆ. ಮಿನಿ ವಿಧಾನ ಸೌಧಕ್ಕೆ ಶಂಕುಸ್ಥಾಪನೆ ನೆರವೇರಿದ್ದು, ತಾಲೂಕಿಗೆ ಇನ್ನಷ್ಟು ಇಲಾಖೆಗಳು ಬರಲಿವೆ. ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಡಿಪ್ಲೊಮಾ ಕಾಲೇಜು ಕಾರ್ಯಾಚರಿಸುತ್ತಿದ್ದು, ಕೃಷಿ ಕಾಲೇಜಿಗೆ, ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಬೇಡಿಕೆ ಇದೆ. ಆಡಳಿತಾತ್ಮಕ ಬೆಳವಣಿಗೆಯಾಗಿ ಪುರಸಭೆ ಅವಶ್ಯ.

Advertisement

ಪಟ್ಟಣವಾಗಿ ಬೆಳವಣಿಗೆ
ಚಾಂತಾರು ಗ್ರಾಮವೊಂದರಲ್ಲೇ 10ಕ್ಕೂ ಹೆಚ್ಚು ವಸತಿ ಸಮುಚ್ಚಯಗಳಿವೆ. ವಾರಂಬಳ್ಳಿ, ಹಂದಾಡಿಯಲ್ಲಿಯೂ ಹಲವು ವಸತಿ ಕಟ್ಟಡಗಳಿವೆ. ಇದರ ಜತೆಗೆ ವಾಣಿಜ್ಯ ಸಂಕೀರ್ಣಗಳು, ಸಿಟಿ ಸೆಂಟರ್‌, ಹತ್ತಾರು ವಸತಿ ಲೇಔಟ್‌, ಧಾರ್ಮಿಕ ಕೇಂದ್ರಗಳಿವೆ. ಹೃದಯ ಭಾಗದ ಇಂದಿರಾನಗರದಲ್ಲಿ 600ಕ್ಕೂ ಮಿಕ್ಕಿ ಮನೆಗಳಿವೆ. ಘನ, ದ್ರವ ತ್ಯಾಜ್ಯ ವಿಲೇವಾರಿ ನಿಟ್ಟಿನಲ್ಲಿ ಪುರಸಭೆ ರಚನೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಅಲ್ಲದೆ ಬ್ರಹ್ಮಾವರ ಪೇಟೆಯನ್ನು ಮೂರು ಪಂಚಾಯತ್‌ಗಳು ಹಂಚಿಕೊಂಡಿದ್ದು, ಪುರಸಭೆಯಿಂದ ಗಡಿ ಸಮಸ್ಯೆಯೂ ನಿವಾರಣೆಯಾಗಲಿದೆ.

ವಿಶೇಷ ಪ್ರಯತ್ನ
ಪುರಸಭೆ ರಚಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ ಈಗಾಗಲೇ ಮನವಿ ನೀಡಿದ್ದೇವೆ. ಜ. 24ರಂದು ಬ್ರಹ್ಮಾವರದ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿನಂತಿ ಮಾಡಲಿದ್ದೇವೆ. ಈ ಕುರಿತು ವಿಶೇಷ ಪ್ರಯತ್ನದಲ್ಲಿದ್ದೇವೆ.
-ಕೆ. ರಘುಪತಿ ಭಟ್‌, ಶಾಸಕರು, ಉಡುಪಿ

ಅನಿವಾರ್ಯವಿದೆ
ಎಲ್ಲಾ ರೀತಿಯಲ್ಲಿ ಅರ್ಹತೆ ಇದ್ದರೂ ಕಳೆದ ಬಾರಿ ಪುರಸಭೆ ಕೈತಪ್ಪಿತ್ತು. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಈಗ ಪುರಸಭೆ ಅನಿವಾರ್ಯ. ಎಲ್ಲ ಜನಪ್ರತಿನಿಧಿಗಳನ್ನು, ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಪ್ರಯತ್ನದಲ್ಲಿದ್ದೇವೆ.
– ಬಾರಕೂರು ಸತೀಶ್‌ ಪೂಜಾರಿ, ಅಧ್ಯಕ್ಷರು, ತಾಲೂಕು ಹೋರಾಟ ಸಮಿತಿ

ಮೇಲ್ದರ್ಜೆಗೇರಬೇಕು
ಸುಮಾರು 25 ವರ್ಷಗಳಿಂದ, ಅದರಲ್ಲೂ 10 ವರ್ಷಗಳಿಂದ ಬ್ರಹ್ಮಾವರ ಆಮೂಲಾಗ್ರ ಬದಲಾವಣೆ ಕಂಡಿದೆ. ಹೊಸ ಕಟ್ಟಡ, ವ್ಯವಸ್ಥೆಗಳು ಬಂದಂತೆ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಎಲ್ಲ ದೃಷ್ಟಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಬೇಕು.
-ಎಚ್‌. ಸುದರ್ಶನ ಹೆಗ್ಡೆ, ಉದ್ಯಮಿ ಬ್ರಹ್ಮಾವರ

ಎಲ್ಲ ಅರ್ಹತೆಗಳಿವೆ
ತಾಲೂಕು ಕೇಂದ್ರವಾದ ಬ್ರಹ್ಮಾವರವು ಪುರಸಭೆಯಾಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆಗಳಿವೆ. ನಾಲ್ಕು ಪಂಚಾಯತ್‌ಗಳ ಸಂಖ್ಯೆಯೇ ಜನಸಂಖ್ಯೆಯೇ 31,203 ಮೀರಿರುವುದರಿಂದ ಈ ಆಧಾರದಲ್ಲಿಯೂ ಪುರಸಭೆಗೆ ಸೂಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next