Advertisement

ಕೊನೆಗೂ ಪುರಸಭೆ ಮೀಸಲಾತಿ ಪ್ರಕಟ

10:36 PM Mar 12, 2020 | Sriram |

ಪುರಸಭೆಯ 23 ವಾರ್ಡ್‌ಗಳಲ್ಲಿ 14 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 8 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಹಾಗೂ 1 ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ.

Advertisement

ವಿಶೇಷ ವರದಿಕುಂದಾಪುರ: ಅಧ್ಯಕ್ಷ -ಉಪಾಧ್ಯಕ್ಷ ಗಾದಿಗೆ 2018 ಸೆಪ್ಟಂಬರ್‌ನಿಂದ ಬಾಕಿಯಾಗಿದ್ದ ನಿರೀಕ್ಷೆ, ಗೊಂದಲ, ಕಾತರಕ್ಕೆ ತೆರೆ ಬಿದ್ದಿದೆ. ಅಧ್ಯಕ್ಷತೆ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷತೆ ಹಿಂದುಳಿದ ವರ್ಗ “ಎ’ಗೆ ನಿಗದಿಯಾಗಿ ಗಜೆಟ್‌ನಲ್ಲಿ ಪ್ರಕಟವಾಗಿದೆ.

ಚುನಾವಣೆ ಫ‌ಲಿತಾಂಶ ಘೋಷಣೆಗೊಂಡಾಗಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಅದಾದ ಬಳಿಕ ಅಧ್ಯಕ್ಷಗಾದಿಯ ಮೀಸಲಾತಿ ಹಿಂದುಳಿದ ವರ್ಗ “ಬಿ’ ಮಹಿಳೆಗೆ ಬದಲಾಗಿ ಆದೇಶವಾಗಿತ್ತು. ಇಂತಹ ಬದಲಾವಣೆಗೆ ಅನೇಕ ಕಡೆ ಆಯ್ಕೆಯಾದ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಏಕೆಂದರೆ ಇಲ್ಲಿ ಬದಲಾದ ಮೀಸಲಾತಿ ಪ್ರಕಾರ ಅರ್ಹತೆ ಇದ್ದುದು ಕಡಿಮೆ ಸಂಖ್ಯಾಬಲದ ಕಾಂಗ್ರೆಸ್‌ಗೆ ಮಾತ್ರ. ಕೊನೆಗೂ ಕಾನೂನು ಸಂಘರ್ಷದ ಬಳಿಕ ಮೀಸಲಾತಿ ಬದಲಾಗಿದೆ. ಅಧ್ಯಕ್ಷತೆ ಮೊದಲಿನದ್ದೇ ಇದ್ದರೂ ಉಪಾಧ್ಯಕ್ಷತೆ ಮೀಸಲಾತಿ ಬದಲಾಗಿದೆ. ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಚುನಾವಣ ದಿನಾಂಕ ನಿಗದಿಯಾಗಿಲ್ಲ.

ಅಧ್ಯಕ್ಷತೆಗೆ ಆರು ಮಂದಿಗೆ ಅವಕಾಶ
ಬಿಜೆಪಿಯಿಂದ ಗೆದ್ದಿರುವ ವೆಸ್ಟ್‌ಬ್ಲಾಕ್‌ ವಾರ್ಡಿನ ಅಶ್ವಿ‌ನಿ ಪ್ರದೀಪ್‌, ಮಂಗಳೂರು ಟೈಲ್ಸ್‌ ಫ್ಯಾಕ್ಟರಿ ವಾರ್ಡಿನ ಶ್ವೇತಾ ಸಂತೋಷ್‌, ಟಿ.ಟಿ. ವಾರ್ಡಿನ ವೀಣಾ ಭಾಸ್ಕರ್‌ ಮೆಂಡನ್‌, ಶಾಂತಿನಿಕೇತನ ವಾರ್ಡಿನ ವನಿತಾ ಎಸ್‌. ಬಿಲ್ಲವ, ಪ್ರೇಮಲತಾ ರಮೇಶ್‌ ಪೂಜಾರಿ, ಹಿಂದುಳಿದ ವರ್ಗ (ಎ) ಮಹಿಳೆ ಸ್ಥಾನದಲ್ಲಿ ಗೆದ್ದ ರೋಹಿಣಿ ಉದಯ ಕುಮಾರ್‌ ಅವರಿಗೆ ಅಧ್ಯಕ್ಷರಾಗಲು ಅವಕಾಶವಿದೆ.

ಕಳೆದ ಬಾರಿ
ಕಳೆದ ಅವಧಿಯಲ್ಲಿ ಬಿಜೆಪಿ 12, ಕಾಂಗ್ರೆಸ್‌ 9 ಹಾಗೂ ಸಿಪಿಐಎಂ 2 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಆಗಿನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ನ 4 ಮಂದಿ ಬಂಡಾಯ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆಯೇರಿತ್ತು. ಬಂಡಾಯವೆದ್ದ ಸದಸ್ಯರ ಪೈಕಿ ವಸಂತಿ ಮೋಹನ ಸಾರಂಗ ಅವರು ಅಧ್ಯಕ್ಷರಾಗಿ, ಆಗ ಬಿಜೆಪಿಯಲ್ಲಿದ್ದ ರಾಜೇಶ್‌ ಕಾವೇರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Advertisement

ಉಪಾಧ್ಯಕ್ಷತೆಗೆ 10 ಮಂದಿ
ಉಪಾಧ್ಯಕ್ಷ ಸ್ಥಾನಕ್ಕೆ ಸಂದೀಪ್‌ ಖಾರ್ವಿ, ರಾಘವೇಂದ್ರ ಖಾರ್ವಿ, ಶೇಖರ ಪೂಜಾರಿ, ಗಿರೀಶ್‌ ದೇವಾಡಿಗ ಹಾಗೂ ಅಧ್ಯಕ್ಷತೆಗೆ ಅರ್ಹರಿರುವ 6 ಮಂದಿಗೆ ಆವಕಾಶ ಇದೆ. ಮಹಿಳೆಗೆ ಅಧ್ಯಕ್ಷ ಸ್ಥಾನ ದೊರೆಯುವ ಕಾರಣ ಉಪಾಧ್ಯಕ್ಷತೆ ಪುರುಷರಿಗೆ ನೀಡುವ ಸಾಧ್ಯತೆಯಿದೆ.

ನಾಲ್ವರಿಗಿಲ್ಲ ಮೀಸಲಾತಿ
ಚರ್ಚ್‌ರೋಡ್‌ ವಾರ್ಡಿನ ಪ್ರಭಾಕರ ವಿ., ಜೆಎಲ್‌ಬಿ ವಾರ್ಡಿನ ಶ್ರೀಕಾಂತ್‌, ಚಿಕ್ಕನ್‌ಸಾಲ್‌ ವಾರ್ಡಿನ ಸಂತೋಷ್‌ ಶೆಟ್ಟಿ, ಸೆಂಟ್ರಲ್‌ ವಾರ್ಡ್‌ನ ಮೋಹನದಾಸ ಶೆಣೈ ಅವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯ ಯಾವುದೇ ಪ್ರಯೋಜನ ಇರುವುದಿಲ್ಲ.

ಗರಿಗೆದರಿದ ಚಟುವಟಿಕೆ
ಅಧ್ಯಕ್ಷ, ಉಪಾಧ್ಯಕ್ಷತೆಗೆ ಹೊಸ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಸದಸ್ಯ ಪಾಳಯದಲ್ಲಿ ಚಟುವಟಿಕೆ ಗರಿಗೆದರಿದೆ. ಸಾರ್ವಜನಿಕರಿಗೂ ಸದಸ್ಯ ರಿಗೂ ಹುದ್ದೆ ಯಾರ ಪಾಲಾಗಬಹುದು ಎಂಬ ಕುತೂಹಲ ಮೂಡಿದೆ. ಸದ್ಯ ಶಾಸಕರು ಬೆಂಗಳೂರಿನಲ್ಲಿ ಇದ್ದು ಅವರು ಊರಿಗೆ ಆಗಮಿಸಿದ ಬಳಿಕ ಸಮಾಲೋಚನೆ ನಡೆಯಲಿದೆ.

ಶಾಸಕರ ನೇತೃತ್ವದಲ್ಲಿ ಸಭೆ ನಡೆದು ಸದಸ್ಯರ ನಡುವೆ ಸಹಮತ ಮೂಡಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಸದ್ಯದ ಮಟ್ಟಿಗೆ ಅವರೋ, ಇವರೋ ಎಂಬ ಚರ್ಚೆಗಷ್ಟೇ ಸೀಮಿತವಾಗಿದೆ. ದಿನಾಂಕ ಪ್ರಕಟವಾದ ಬಳಿಕವಷ್ಟೇ ಚಟುವಟಕೆ ತೀವ್ರಗೊಂಡು ನಿರ್ಧಾರ ಹೊರಬರಲಿದೆ.

ಹೆಚ್ಚು ಅಂತರದ ಗೆಲುವು
ನಾನಾ ಸಾಹೇಬ್‌ ವಾರ್ಡಿನಲ್ಲಿ ಬಿಜೆಪಿಯ ರೋಹಿಣಿ ಉದಯ ಕುಮಾರ್‌(431) ಅವರು 285 ಮತಗಳ ಅಂತರದಿಂದ ಗೆದ್ದಿದ್ದು, ಗೆದ್ದ ಬಿಜೆಪಿ ಮಹಿಳಾ ಸದಸ್ಯರ ಪೈಕಿ ವೀಣಾ ಭಾಸ್ಕರ್‌ ಅವರು ಅತಿಹೆಚ್ಚು ಮತ 443 ಗಳಿಸಿದ್ದಾರೆ.

ಹೆಸರಿಗಷ್ಟೇ ಅರ್ಹತೆ
ಕಾಂಗ್ರೆಸ್‌ನಲ್ಲಿ ಕೋಡಿ ಉತ್ತರ ವಾರ್ಡ್‌ನಿಂದ ಗೆದ್ದಿರುವ ಲಕ್ಷ್ಮೀ ಬಾಯಿ, ಈಸ್ಟ್‌ ಬ್ಲಾಕ್‌ನ ಪ್ರಭಾವತಿ ಶೆಟ್ಟಿ, ಸರಕಾರಿ ಆಸ್ಪತ್ರೆ ವಾರ್ಡಿನ ದೇವಕಿ ಸಣ್ಣಯ್ಯ ಅವರು ಅಧ್ಯಕ್ಷಗಾದಿಗೆ ಅರ್ಹರಾಗಿದ್ದರೂ ಕಾಂಗ್ರೆಸ್‌ಗೆ ಬಹುಮತವಿಲ್ಲದ ಕಾರಣ ಹೆಸರಿಗಷ್ಟೇ ಅರ್ಹತೆ ಪಡೆದು ಅಧ್ಯಕ್ಷತೆಯಿಂದ ಅವಕಾಶ ವಂಚಿತರಾಗಿದ್ದಾರೆ. ಕೋಡಿ ವಾರ್ಡಿನ ಪಕ್ಷೇತರ ಸದಸ್ಯೆ ಕಮಲಾ ಮಂಜುನಾಥ ಪೂಜಾರಿ ಕೂಡ ಅರ್ಹರಾಗಿದ್ದರೂ ಏಕೈಕ ಅಭ್ಯರ್ಥಿಯಾಗಿ ಬೆಂಬಲಿಗ ಸದಸ್ಯರಿಲ್ಲದೆ ಬಾಕಿಯಾಗಿದ್ದಾರೆ.

ಸರ್ವಸಮ್ಮತ ಆಯ್ಕೆ
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತು ಮಾ.14ರಂದು ಶಾಸಕರ ನೇತೃತ್ವದಲ್ಲಿ ಸದಸ್ಯರ, ಮುಖಂಡರ ಸಭೆ ನಡೆಯಲಿದೆ. ಸಮಾಲೋಚನೆ ಬಳಿಕ ಸರ್ವಸಮ್ಮತ ಅಭ್ಯರ್ಥಿಯ ಆಯ್ಕೆ ನಡೆಯಲಿದೆ.
-ಶಂಕರ ಅಂಕದಕಟ್ಟೆ
ಅಧ್ಯಕ್ಷರು, ಬಿಜೆಪಿ ಕುಂದಾಪುರ ಮಂಡಲ

Advertisement

Udayavani is now on Telegram. Click here to join our channel and stay updated with the latest news.

Next