Advertisement

ಅಧಿಕಾರಿಗಳ ಕಾರ್ಯವೈಖರಿಗೆ ಪುರಸಭೆ ಸದಸ್ಯರ ಗರಂ

12:08 PM Jan 18, 2022 | Team Udayavani |

ಚಿತ್ತಾಪುರ: ಪುರಸಭೆ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ಲಕ್ಷ್ಯ ವಹಿಸುತ್ತಿದ್ದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ ಆಗ್ರಹಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿ ಒಬ್ಬರು ಅವರಿಗೆ 10 ಜನ ಸಹಾಯಕರು ಇದ್ದಾರೆ. ಅಧಿಕಾರಿ ಬದಲು ಅವರ ಸಹಾಯಕರೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪುರಸಭೆ ಅಡಳಿತ ಹದಗೆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಜವಾಬ್ದಾರಿಯಲ್ಲಿದ್ದ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ನಿಮಗೆ ಇಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಇಲ್ಲದಿದ್ದರೆ ಇಲ್ಲಿಂದ ವರ್ಗಾವಣೆ ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾಮಾನ್ಯ ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಅಥವಾ ಸಮಸ್ಯೆಗಳ ಬಗ್ಗೆ ಕೇಳಿದಾಗ ಅಧಿಕಾರಿಗಳು ನಿಗದಿತ ಸಮಯದಲ್ಲಿ ಉತ್ತರ ಅಥವಾ ಕೈಗೊಂಡ ಪರಿಹಾರ ಕುರಿತು ಮಾಹಿತಿ ನೀಡುವುದಿಲ್ಲ ಎಂದು ಸದಸ್ಯರಾದ ಶ್ರೀನಿವಾಸರೆಡ್ಡಿ ಪಾಲಪ್‌, ರಸೂಲ್‌ ಮುಸ್ತಫಾ ಕಿಡಿಕಾರಿದಾಗ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಒಂದು ವಾರದೋಳಗೆ ಲಿಖೀತ ರೂಪದಲ್ಲಿ ವರದಿ ನೀಡಬೇಕು ಸಮಸ್ಯೆಗಳಿಗೆ ಪರಿಹಾರಕ್ಕೆ ಕೈಗೊಂಡ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಬಸ್‌ ನಿಲ್ದಾಣ ಹಿಂದುಗಡೆ ಇರುವ ಪೊಲೀಸ್‌ ಕ್ವಾರ್ಟರ್ನಲ್ಲಿ ಗಿಡಗಂಟಿ ಬೆಳೆದು ವಾತಾರವಣ ಕಲುಷಿತಗೊಂಡಿದೆ ಸ್ವಚ್ಛತೆ ಕಾಪಾಡಿ ಎಂದು ಸದಸ್ಯರಾದ ವಿನೋದ ಗುತ್ತೇದಾರ, ಶೀಲಾ ಕಾಶಿ ಜೊತೆಗೆ ಉಪಾಧ್ಯಕ್ಷೆ ಶ್ರುತಿ ಪೂಜಾರಿ ತಮ್ಮ ವ್ಯಾಪ್ತಿಯ ಅಂಗನವಾಡಿ ಸುತ್ತ ಸ್ವಚ್ಛತೆ ಕಾಪಾಡಿ ಎಂದು ಹೇಳಿದರೂ ಇಲ್ಲಿವರೆಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ ಅಧ್ಯಕ್ಷರು ಮದ್ಯಪ್ರವೇಶಿಸಿ ಸದಸ್ಯರು ಹೇಳಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಹಾರ ಕಾರ್ಯಕ್ಕೆ ಮುಂದಾಗಬೇಕು ವಿಳಂಬಕ್ಕೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

ವಿವಿಧ ಕೆಲಸ ಕಾಯಗಳಿಗಾಗಿ ಖರ್ಚು ಮಾಡಿದ ಪಟ್ಟಿಯನ್ನು ವ್ಯವಸ್ಥಾಪಕ ಲೋಹಿತ ಕಟ್ಟಿಮನಿ ಓದುತ್ತಿರುವಾಗ ಪಟ್ಟಿಯಲ್ಲಿ ಅನೇಕ ತಪ್ಪುಗಳು ಇರುವುದನ್ನು ಗಮನಿಸಿದ ಸದಸ್ಯರು ಈ ಕುರಿತು ಪ್ರಶ್ನಿಸಿದಾಗ ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಟೈಪಿಂಗ್‌ ಮಿಸ್ಟಿಕ್‌ ಆಗಿದೆ ಎಂದು ಸಮಾಜಯಿಸಿ ನೀಡಿದರು.

Advertisement

ಒಂದೇಡೆ ಝರಾಕ್ಸ್‌ ಪ್ರತಿಗಳು ಸರಿಯಾಗಿ ಕಾಣದೆ ಇರುವುದು ಇನ್ನೊಂದೆಡೇ ವಿದ್ಯುತ್‌ ಕೈಕೊಟ್ಟಿದ್ದರಿಂದ ಸದಸ್ಯರಿಗೆ ಪ್ರತಿಗಳು ಸರಿಯಾಗಿ ಕಾಣದೇ ಇರುವುದರಿಂದ ಸದಸ್ಯರು ಹುಡುಕುವಂತಾಯಿತು. ನಂತರ ಅಧ್ಯಕ್ಷರು ಜೆಸ್ಕಾಂಗೆ ಫೋನ್‌ ಮಾಡಿದಾಗ ಕತ್ತಲೆಯಲ್ಲಿದ್ದ ಸಭಾಂಗಣದಲ್ಲಿ ಬೆಳಕು ಬಂತು. ಪುರಸಭೆ ಅನುದಾನದಲ್ಲಿ ವಿವಿಧ ಜಯಂತಿಗಳಿಗೆ ಮತ್ತು ಕೆಲಸ ಕಾರ್ಯಗಳಿಗೆ ಸಿಕ್ಕಾಪಟ್ಟಿ ಮತ್ತು ಜಿಎಸ್‌ಟಿ ಕೇಳದೆ ಹಣ ಖರ್ಚು ಮಾಡುವ ಅಧಿಕಾರಿಗಳು ಬಸವ ಜಯಂತಿ ದಿನದಂದು ಬಸವೇಶ್ವರ ವೃತ್ತದಲ್ಲಿ ಸಿರಿಯಲ್‌ ಬೆಳಕಿನ ವ್ಯವಸ್ಥೆಗೆ 12 ಸಾವಿರ ಹಣ ನೀಡಲು ಜಿಎಸ್‌ಟಿ ಕೇಳುತ್ತಿರಾ ಎಂದು ವಿಪಕ್ಷ ನಾಯಕ ನಾಗರಾಜ ಭಂಕಲಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬಸವ ಜಯಂತಿ ಆಚರಿಸಿ ಒಂದು ವರ್ಷ ಸಮೀಪಿಸುತ್ತಿದ್ದರೂ ಹಣ ನೀಡಿಲ್ಲ, ತಾರತಮ್ಯ ಮಾಡಬೇಡಿ ಪುರಸಭೆಯಲ್ಲಿ ಚಹಾ ತಿಂಡಿಗೆ 50 ಸಾವಿರ ಖರ್ಚು ಹಾಕುತ್ತಿರಾ ಅದಕ್ಕೆ ಜಿಎಸ್‌ಟಿ ಅನ್ವಯಿಸುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಾಗ ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಿಸುವೇ ಎಂದು ಅಧ್ಯಕ್ಷರು ಹೇಳಿದಾಗ ನಮಗೆ ಹಣ ಬೇಕಾಗಿಲ್ಲ ಮತ್ತು ಬಸವೇಶ್ವರ ವೃತ್ತಕ್ಕೆ ಯಾವುದೇ ಅನುದಾನ ಬೇಕಾಗಿಲ್ಲ ಎಂದು ನೇರವಾಗಿ ಹೇಳಿದರು.

ಪಟ್ಟಣದಲ್ಲಿ ಯುಜಿಡಿಯಿಂದ ಬಹಳ ಸಮಸ್ಯೆಯಾಗಿದೆ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ ಕೂಡಲೇ ಸರಿಪಡಿಸಿ ಎಂದು ಸದಸ್ಯರಾದ ಪಾಶಾಮಿಯ್ನಾ ಖುರೇಷಿ, ಶೀಲಾ ಕಾಶಿ, ರಮೇಶ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಕಾಳಗಿ ಹೇಳಿದಾಗ ಅಧ್ಯಕ್ಷರು ಮಾತನಾಡಿ, ಈಗಾಗಲೇ ಯುಜಿಡಿ ಸರ್ವೇ ಮಾಡಲು ಸೂಚಿಸಲಾಗಿದೆ. ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಸರಿಪಡಿಸಲಾಗುವುದು ಎಂದರು.

ಪಟ್ಟಣದಲ್ಲಿ ನಾಯಿಗಳ ಮತ್ತು ಹಂದಿಗಳ ಕಾಟ ಹೆಚ್ಚಾಗಿದೆ ಕೂಡಲೇ ನಿಯಂತ್ರಣ ಮಾಡಿ ಎಂದು ಸದಸ್ಯರು ಆಗ್ರಹಿಸಿದಾಗ ಮುಖ್ಯಾಧಿಕಾರಿ ಮಾತನಾಡಿ ಇದಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಉಪಾಧ್ಯಕ್ಷೆ ಶ್ರುತಿ ಪೂಜಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಗೋವಿಂದ ನಾಯಕ, ಸದಸ್ಯರಾದ ಸುಮಂಗಲಾ ಅಣ್ಣಾರಾವ, ವಿನೋದ ಗುತ್ತೇದಾರ, ಸಂತೋಷ ಚೌದರಿ, ಶ್ಯಾಮ ಮೇದಾ, ಶಹನಾಜಬೇಗಂ ಮಹ್ಮದ ಎಕ್ಬಾಲ, ಖಾಜಾಬೀ ಗುಲಾಮ ರಸೂಲ್‌, ಶಿವರಾಜ ಪಾಳೇದ್‌, ಸುಶೀಲಾ ದೇವಸುಂದರ, ಯಮನಪ್ಪ ಬೋಸಗಿ, ಶಶಿಕಾಂತ ಭಂಡಾರಿ, ಹನುಮಾನ ವ್ಯಾಸ್‌, ಕೋಟೇಶ್ವರ ರೇಷ್ಮಿ, ಅಧಿಕಾರಿಗಳಾದ ಶಿವಶರಣಪ್ಪ ವಾಗ್ಮೋರೆ, ಲೋಹಿತ್‌ ಕಟ್ಟಿಮನಿ, ಜಯ ಭಾರತಿ, ಸಾಬಣ್ಣ ಸುಂಗಲಕರ್‌, ರಾಹುಲ್‌ ಕಾಂಬಳೆ, ವೆಂಕಟೇಶ, ರೇವಣಸಿದ್ದಪ್ಪ, ಸಿದ್ದಪ್ಪ ಸೋಮಪುರ್‌, ಕ್ರಾಂತಿದೇವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next