Advertisement

ಪಾಲಿಕೆ ಆರೋಗ್ಯ ನಿರೀಕ್ಷಕರಿಬ್ಬರು ಎಸಿಬಿ ಬಲೆಗ

04:03 PM Jul 04, 2021 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಇಬ್ಬರು ಆರೋಗ್ಯ ನಿರೀಕ್ಷಕರು ಶನಿವಾರ ಸ್ವತ್ಛತಾ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

Advertisement

ಇಲ್ಲಿನ ವಲಯ ಕಚೇರಿ ನಂ.10ರ ಆರೋಗ್ಯ ನಿರೀಕ್ಷಕರಾದ ಹಳೇಹುಬ್ಬಳ್ಳಿಯ ನೂರಂದಪ್ಪ ಭಜಂತ್ರಿ ಹಾಗೂ ತಜಮಿಲ್‌ ಶಿರ್ಸಿ ಸಿಕ್ಕಿ ಬಿದ್ದವರು. ಇವರಿಬ್ಬರು ಸ್ವತ್ಛತಾ ಪೌರಕಾರ್ಮಿಕರಿಗೆ ವೇತನ ಕೊಡುವ ಸಲುವಾಗಿ ಹಳೇಹುಬ್ಬಳ್ಳಿಯ ಪಾಲಿಕೆಯ ಸ್ವತ್ಛತಾ ಗುತ್ತಿಗೆದಾರ ಅಲ್ಲಾಭಕ್ಷ ಸಾಹೇಬ ಕಿತ್ತೂರ ಎಂಬುವರಿಂದ ಪ್ರತಿ ತಿಂಗಳು ಬಿಲ್‌ ಮಂಜೂರು ಮಾಡಲು ಕಮಿಷನ್‌ ರೂಪದಲ್ಲಿ ಒತ್ತಡ ಹಾಕುತ್ತಿದ್ದರು. ಅದರಂತೆ ಮೇ-ಜೂನ್‌ ತಿಂಗಳದ ಬಿಲ್‌ ಮಂಜೂರಿಗಾಗಿ ನೂರಂದಪ್ಪ 12 ಸಾವಿರ ರೂ. ಹಾಗೂ ತಜಮಿಲ್‌ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಅದರಲ್ಲಿ ತಜಮಿಲ್‌ ಮುಂಗಡವಾಗಿ 4 ಸಾವಿರ ರೂ. ಇಸಿದುಕೊಂಡಿದ್ದ. ಈ ಕುರಿತು ಅಲ್ಲಾಭಕ್ಷ ಧಾರವಾಡ ಎಸಿಬಿ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರು.

ಗುತ್ತಿಗೆದಾರ ಅಲ್ಲಾಭಕ್ಷರಿಂದ ಶನಿವಾರ ಹಳೇಹುಬ್ಬಳ್ಳಿ ಗಣೇಶ ನಗರದ ಹೊಟೇಲ್‌ವೊಂದರಲ್ಲಿ ನೂರಂದಪ್ಪ 12 ಸಾವಿರ ರೂ. ಹಾಗೂ ತಜಮಿಲ್‌ 6 ಸಾವಿರ ರೂ. ಇಸಿದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಎಸಿಬಿ ಉತ್ತರ ವಲಯ ಬೆಳಗಾವಿಯ ಪೊಲೀಸ್‌ ಅಧೀಕ್ಷಕ ಬಿ.ಎಸ್‌. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಎಲ್‌. ವೇಣುಗೋಪಾಲ, ಇನ್ಸ್‌ಪೆಕ್ಟರ್‌ಗಳಾದ ಅಲಿ ಎ. ಶೇಖ, ವಿ.ಎನ್‌. ಕಡಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಹಣದ ಸಮೇತ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಎಸಿಬಿ ಸಿಬ್ಬಂದಿಗಳಾದ ಶ್ರೀಶೈಲ ಕಾಜಗಾರ, ಗಿರೀಶ ಮನ್ಸೂರ, ಶ್ರೀಶೈಲ ಬೀಳಗಿ, ಲೋಕೇಶ ಬೆಂಡಿಕಾಯಿ, ಶಿವಾನಂದ ಕೆಲವಡಿ, ಕಾರ್ತಿಕ ಹುಯಿಲಗೋಳ, ವಿ.ಎಸ್‌. ದೇಸಾಯಿಗೌಡರ, ರವಿ ಯರಗಟ್ಟಿ, ಎಸ್‌. ಎಸ್‌. ನರಗುಂದ, ಎಸ್‌. ವೀರೇಶ ದಾಳಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next