Advertisement

ವಿಶೇಷ ವರದಿ: ಹಾದಿ ತಪ್ಪುತ್ತಿದೆ ನಗರಸಭೆಯ ಕಸ ಸಂಗ್ರಹ ಕಾರ್ಯ

10:07 PM Sep 07, 2020 | mahesh |

ಉಡುಪಿ: ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆ ನಗರ ನಿವಾಸಿಗಳಿಗೆ ಯಾತನೆ ಯಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ಮನೆಯ ಕಸ ವಿಲೇವಾರಿಯಾಗದೆ ಇರುವುದರಿಂದ ಮನೆಯ ಪರಿಸರ ದುರ್ನಾತ ಬೀರುತ್ತಿದ್ದು, ರೋಗ ಹರಡಲು ಕಾರಣವಾಗುತ್ತಿದೆ. 35 ವಾರ್ಡ್‌ಗಳಿಗೆ ಕಸ ವಿಂಗಡಣೆ ಮಾಡಿ ನೀಡುವಂತೆ ನಗರಸಭೆ ಆದೇಶ ನೀಡಿದ್ದು, ಅಂತೆಯೇ ನಗರ ನಿವಾಸಿಗಳು ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡುತ್ತಿದ್ದಾರೆ.  ಜತೆಗೆ ಕಸ ಸಂಗ್ರಹಕ್ಕೆ ನಿರ್ದಿಷ್ಟ ಶುಲ್ಕವನ್ನು ಸಹ ವಿಧಿಸುತ್ತಿದ್ದು, ಸಾರ್ವಜನಿಕರು ಯಾವುದೇ ಮರುಮಾತನಾಡದೆ ಮಾಸಿಕ ಶುಲ್ಕ ಪಾವತಿ ಮಾಡುತ್ತಿದ್ದಾರೆ.

Advertisement

ಏನೂ ಹೇಳಬೇಡಿ!
ಕಸವನ್ನು ಸಮರ್ಪಕವಾಗಿ ತೆಗೆದುಕೊಂಡು ಹೋಗದ ಕಾರಣಕ್ಕೆ ಕಾರ್ಮಿಕರನ್ನು ಕೇಳಿದರೆ, ಗುತ್ತಿಗೆದಾರರು ಅವರಿಗೆ ಏನೂ ಹೇಳ ಬೇಡಿ ಅವರು ಬಿಟ್ಟು ಹೋದರೆ ಮತ್ತು ಕೆಲಸಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂದು ಮನವಿ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಮನೆ ತೆರಿಗೆ ಸಂಗ್ರಹ ಯಾವುದಕ್ಕಾಗಿ?
ನಗರದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಮನೆ ತೆರಿಗೆಯನ್ನು ಕಟ್ಟಲಾಗುತ್ತದೆ. ಇದರಲ್ಲಿ ರಸ್ತೆ ನಿರ್ವಹಣೆ, ದಾರಿದೀಪ, ಶುಚಿತ್ವ ಸೇರಿಕೊಂಡಿದೆ. ಆದರೂ ಮನೆಗಳಿಂದ ಪ್ರತಿ ತಿಂಗಳು 30 ರೂ. ಸಂಗ್ರಹಿಸಲಾಗುತ್ತದೆ. ಹೆಚ್ಚುವರಿಯಾಗಿ ಕೇಳಿದಾಗಲೂ ಚಕಾರವೆತ್ತದೆ ನಾಗರಿಕರು ಸಹಕರಿಸುತ್ತಿರುವಾಗ ಸೇವೆಯ ಗುಣಮಟ್ಟವೂ ವೃದ್ಧಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ವಾರದಲ್ಲಿ 2 ಬಾರಿ ಸಂಗ್ರಹ
ವಾರಕ್ಕೆ ಎರಡು ಬಾರಿ ಕಸ ಸಂಗ್ರಹಕ್ಕೆ ದಿನ ನಿಗದಿ ಮಾಡಲಾಗಿದೆ. ಮನೆಯಲ್ಲಿ ಮಹಿಳೆಯರು, ವಯಸ್ಕರ, ಮಕ್ಕಳು ಬಳಸುವ ಪ್ಯಾಡ್‌, ರೋಗಿಗಳಿದ್ದರೆ ಅವರ ತ್ಯಾಜ್ಯಗಳು ಮೂರು ದಿನಕ್ಕೊಮ್ಮೆ ವಿಲೇವಾರಿಯಾಗುತ್ತವೆ. ಕಾರ್ಮಿಕರು ಮಾಡಿರುವ ನಿಯಮದಂತೆ ಪ್ಯಾಡ್‌ಗಳನ್ನು ಸಮರ್ಪಕವಾಗಿ ಮುಚ್ಚಿ ಅದರ ಮೇಲೆ ಕೆಂಪು ಶಾಯಿಯಿಂದ ಗುರುತು ಹಾಕಿ ನೀಡಲಾಗುತ್ತದೆ. ಇಷ್ಟಾದರೂ ಕಸ ಸಂಗ್ರಹಣೆ ಸಮರ್ಪಕವಾಗಿಲ್ಲ.

ಕಸದ ಸಮಸ್ಯೆ ಉಲ್ಬಣ
ಉಡುಪಿ ನಗರಸಭೆಯ 35 ವಾರ್ಡ್‌ ಗಳಲ್ಲಿ ಕಸದ ಸಮಸ್ಯೆ ಉಲ್ಬಣಿಸಿದೆ. ಸ್ಥಳೀಯ ಪೌರಕಾರ್ಮಿಕರು ನಗರವನ್ನು ಸ್ವತ್ಛಗೊಳಿಸುವಲ್ಲಿ ನಿರತರಾಗಿದ್ದಾರೆ. ಸಾಕಷ್ಟು ಸಿಬಂದಿ ಕೊರತೆಯನ್ನು ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ$ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಕೆಲವು ಸಂಘದ ಸದಸ್ಯರು ಹಾಗೂ ಹೊರ ಗುತ್ತಿಗೆಯ ಕಾರ್ಮಿಕರನ್ನು (ಹೊರ ಜಿಲ್ಲೆಯವರು) ಬಳಸಿಕೊಳ್ಳಲಾಗುತ್ತಿದೆ. ಇವರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವಾಗ ಸ್ವಲ್ಪ ಕಸದ ಹೊರೆ ಜಾಸ್ತಿಯಾದರೆ ಮನೆಯ ಮಾಲೀಕರನ್ನು ದಬಾಯಿಸುತ್ತಾರೆ ಎಂಬ ಆರೋಪವಿದೆ. ಕೆಲವೊಮ್ಮೆ ಕಸವನ್ನು ಅಲ್ಲಿಯೇ ಬಿಟ್ಟು ಹೋಗಿರುವ ಘಟನೆಗಳು ಅಜ್ಜರಕಾಡು, ಒಳಕಾಡು, ಕಡಿಯಾಳಿ ಪರಿಸರದಿಂದ ವರದಿಯಾಗಿದೆ.

Advertisement

ಶೀಘ್ರ ಪರಿಹಾರ
ನಗರದ 35 ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮಸ್ಯೆಗಳು ಬಂದರೆ ನೇರವಾಗಿ ಪರಿಸರ ಎಂಜಿನಿಯರ್‌ ಅಥವಾ ನಗರಸಭೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೂರುಗಳ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಪರಿಹರಿಸಲಾಗುತ್ತದೆ.
-ಆನಂದ ಸಿ. ಕಲ್ಲೋಳಿಕರ್‌, ಪೌರಾಯುಕ್ತರು. ನಗರಸಭೆ ಉಡುಪಿ.

ಕಸ ಮನೆಯಲ್ಲೇ ಬಾಕಿ
ಮನೆಯ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಇದರಿಂದಾಗಿ ಮನೆಯ ಪರಿಸರ ದುರ್ನಾತ ಬೀರುತ್ತಿದೆ. ಮಾಸಿಕ ಶುಲ್ಕ ನೀಡಿಯೂ ಮನೆಯಲ್ಲಿ ಕಸವನ್ನು ಇಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ನಗರ ಸಭೆ ತುರ್ತು ಸ್ಪಂದಿಸಬೇಕು.
– ಅಜ್ಜರಕಾಡು ನಿವಾಸಿ

02 ಕಸ ಸಂಗ್ರಹಕ್ಕೆ ವಾರದಲ್ಲಿ ನಿಗದಿಯಾದ ದಿನಗಳು
30 ರೂ. ಪ್ರತಿ ತಿಂಗಳು ಪ್ರತಿ ಮನೆಯಿಂದ ಸಂಗ್ರಹಿಸುವ ತೆರಿಗೆ

Advertisement

Udayavani is now on Telegram. Click here to join our channel and stay updated with the latest news.

Next