ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ವಿಷಯಾಧಾರಿತ ಚುನಾವಣೆ ವಿಧಾನಸಭೆ-ಲೋಕಸಭೆ ಚುನಾವಣೆಗಳಲ್ಲೇ ಮಾಯವಾದ ಸ್ಥಿತಿ ಇದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದನ್ನು ನಿರೀಕ್ಷಿಸುವುದು ಹುಚ್ಚು ಸಾಹಸ ಎಂಬಂತೆ ಭಾಸವಾಗುತ್ತಿದೆ.
ವಿಷಯಾಧಾರಿತ ಚುನಾವಣೆ ಎಂದರೇನು ಎಂದು ಕೇಳುವ ಅದೆಷ್ಟೋ ಸ್ಪರ್ಧಿಗಳು ಚುನಾವಣಾ ಕಣದಲ್ಲಿರುತ್ತಾರೆ. ಚುನಾವಣೆ ವೇಳೆ ಬಹುತೇಕ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳುತ್ತವೆಯೇ ವಿನಃ ಯಾವ ವಿಷಯಗಳ ಮೇಲೆ ಪಕ್ಷ ಒತ್ತು ನೀಡುತ್ತಿದೆ, ಯಾವ ದೃಷ್ಟಿಕೋನದೊಂದಿಗೆ ಪ್ರಣಾಳಿಕೆ ರೂಪಿಸಲಾಗಿದೆ ಎಂಬ ಅಂಶಗಳನ್ನು ಪ್ರಚಾರದಲ್ಲಿ ಪ್ರಸ್ತಾಪಿಸುವುದಕ್ಕೆ ಬಹುತೇಕ ಪಕ್ಷ-ಅಭ್ಯರ್ಥಿಗಳು ಮುತುವರ್ಜಿ ವಹಿಸುವುದೇ ಇಲ್ಲ.
ಮುದ್ರಿತ ಪ್ರಣಾಳಿಕೆಗಳು ಅದೆಷ್ಟೋ ಪ್ರತಿಗಳ ಪಕ್ಷಗಳ ಕಚೇರಿಯ ಮೂಲೆಯಲ್ಲಿಯೇ ಬಿದ್ದಿರುವ ಸ್ಥಿತಿ ಇದೆ. ಆರೋಪ-ಪ್ರತ್ಯಾರೋಪ, ವ್ಯಕ್ತಿಗತ ಟೀಕೆ-ನಿಂದನೆಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಪಾಲಿಕೆ ಚುನಾವಣೆಯಲ್ಲಿ ವಿಷಯಗಳ ಆಧಾರದಲ್ಲಿ ಚುನಾವಣೆಯ ಪ್ರಯೋಗ ಅನ್ನುವುದಕ್ಕಿಂತ ಪುನರುತ್ಥಾನಕ್ಕೆ ರಾಜಕೀಯ ಪಕ್ಷಗಳು ಮಹತ್ವದ ಹೆಜ್ಜೆ ಇರಿಸಬೇಕಾಗಿದೆ. ಪ್ರಣಾಳಿಕೆ ಎಂಬುದು ಹಿಂದಿನ ವರ್ಷದ ಪ್ರಣಾಳಿಕೆಯ ಅಷ್ಟು ಇಷ್ಟು ಬದಲಾವಣೆಯ ನಕಲು ಪ್ರತಿಯಂತಹ ರೂಪದ್ದಾಗಲಿ, ಸ್ವರ್ಗವನ್ನೇ ಸೃಷ್ಟಿಸುತ್ತೇವೆಂಬ ಭಾವನಾತ್ಮಕ ವಿಚಾರಗಳನ್ನು ಬಿಂಬಿಸುವ ಕಾರ್ಯವಾಗದೆ, ಇರುವ ಸಮಸ್ಯೆ-ಬೇಡಿಕೆ, ಅಭಿವೃದ್ಧಿ ನಿಟ್ಟಿನಲ್ಲಿ ವಾಸ್ತವಿಕ ನೆಲೆಗಟ್ಟಿನ ಪರಿಹಾರ ಕ್ರಮ, ಈಡೇರಿಕೆಯ ವಾಗ್ಧಾನ ಆಗಬೇಕಾಗಿದೆ. ಹಿಂದಿನ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಪ್ರಣಾಳಿಕೆಯಲ್ಲಿ ಏನಿತ್ತು ಎಂಬುದು ಬಹುತೇಕ ಪಕ್ಷದವರಿಗೂ ನೆನಪಿರುವುದಿಲ್ಲ.
ಆಯ್ಕೆಯಾಗಿದ್ದ ಅದೆಷ್ಟೋ ಸದಸ್ಯರೇ ಅದನ್ನು ಓದಿರುವುದಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ, ಈಡೇರಿಕೆ ಶೇಕಡಾವಾರು ಪ್ರಮಾಣ ಕುರಿತಾಗಿ ಮತದಾರರು ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರಶ್ನಿಸುವ ಗೋಜಿಗೂ ಹೋಗುವುದಿಲ್ಲ. ಚುನಾವಣೆಗೊಮ್ಮೆ ಹೊಸ ಪ್ರಣಾಳಿಕೆ ಮುದ್ರಿತ ಗೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.