ಕಾರವಾರ: ನಗರದ ರಸ್ತೆಗಳಿಗೆ ಕನ್ನಡ ನಾಮಫಲಕದ ಜೊತೆಗೆ ಕೊಂಕಣಿ ಭಾಷೆಗೆ ಹಿಂದಿ ಲಿಪಿ ಬಳಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಕಾರವಾರ ನಗರಸಭೆ ಕನ್ನಡ ಸಂಘಟನೆಗಳ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದೆ.
ರಾತ್ರೋರಾತ್ರಿ ಕೊಂಕಣಿ ಭಾಷೆಯ ಹಿಂದಿ ಲಿಪಿಗೆ ಹಳದಿ ಬಣ್ಣ ಹಚ್ಚಿ ಕನ್ನಡದ ಹೆಸರುಗಳನ್ನು ಮಾತ್ರ ಉಳಿಸಿದೆ.
ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಮಾರ್ಗಸೂಚಿ ಗಮನಿಸಿದ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ನಗರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ನಾಮಫಲಕಗಳಿಗೆ ಬಣ್ಣ ಹಚ್ಚಿಸಿ ತನ್ನ ಗೌರವ ಉಳಿಸಿಕೊಂಡಿದೆ. ಹಾಗೂ ಸರ್ಕಾರದ ಮೇಲಾಧಿಕಾರಿಗಳಿಂದ ಬೀಸಲಿದ್ದ ದೊಣ್ಣೆಯನ್ನು ತಪ್ಪಿಸಿಕೊಂಡಿದೆ.
ಕನ್ನಡ ಭಾಷೆ ಮೇಲೆ ಸವಾರಿ ಮಾಡಲು ಹೊರಟರೆ ಸ್ಥಳೀಯ ಶಾಸಕಿ ಹಾಗೂ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. ಅಲ್ಲದೆ ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಸರ್ಕಾರಿ ನೌಕರರ ಸಂಘ, ಕನ್ನಡ ಸಂಘ ಸಂಸ್ಥೆಗಳು ತಿರುಗಿಬೀಳಲಿವೆ ಎಂಬ ಸುಳಿವು ಸಿಗುತ್ತಿದ್ದಂತೆ, ತನ್ನ ಖುರ್ಚಿಗೂ ಸಂಚಕಾರ ಬರಲಿದೆ ಎಂದು ಅರಿತ ಪೌರಾಯುಕ್ತರು ರಾತ್ರೋರಾತ್ರಿ ನಗರದ ಎಲ್ಲಾ ರಸ್ತೆ ಸೂಚಿ ನಾಮಫಲಕಗಳಿಗೆ ಹಳದಿ ಬಣ್ಣ ಹಚ್ಚಿ ಕನ್ನಡ ಪ್ರೀತಿಯನ್ನು ತೋರಿದ್ದಾರೆ.
ಸರ್ಕಾರ ಮೊದಲೇ ಕನ್ನಡ ಸಮಾಜ ಪಠ್ಯಗಳನ್ನು ಪಕ್ಷದ ಕಾರ್ಯಸೂಚಿಯಂತೆ ತಿದ್ದಿ, ಅಪಹಾಸ್ಯಕ್ಕೆ ಈಡಾಗಿರುವಾಗ, ಒಂದು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನ ಕಳೆದುಕೊಳ್ಳಲಿದೆ ಎಂಬ ಅರಿವು ಸಹ ಮೂಡುತ್ತಿದ್ದಂತೆ, ಕೊಂಕಣಿ ಭಾಷೆಯ ಹಿಂದಿ ಲಿಪಿಯನ್ನು ಅಳಿಸಿ ಹಾಕಿದೆ.
ಅನಗತ್ಯವಾಗಿ ಕೊಂಕಣಿ ಮತ್ತು ಹಿಂದಿ ಮೇಲೆ ಪ್ರೀತಿ ತೋರಿಸಲು ಹೋಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಕಾರವಾರದಲ್ಲಿ ಕನ್ನಡಿಗರು ಸೇರಿದಂತೆ ಎಲ್ಲರೂ ಸೌಹಾರ್ದವಾಗಿ ಬದುಕುತ್ತಿರುವಾಗ ಇಲ್ಲದ ಭಾಷಾ ವಿವಾದವನ್ನು ಹುಟ್ಟಿ ಹಾಕಲು ಅಧಿಕಾರಿಗಳು ಮತ್ತು ಕೆಲ ಸ್ಥಳೀಯರು ಯತ್ನಿಸಿದ್ದರು.
ಸರ್ಕಾರದ ಕನ್ನಡ ಧೋರಣೆ ವಿರುದ್ಧ ಸರ್ಕಾರಿ ನೌಕರರಾಗಿದ್ದ ಪೌರಾಯುಕ್ತರು ತನ್ನ ಮನೆ ಭಾಷಾ ಪ್ರೀತಿ ತೋರಲು ಹೋಗಿ ಕನ್ನಡದ ವಿರುದ್ಧ ನಿಂತಿದ್ದರು. ಕನ್ನಡದ ವಿರುದ್ಧ ಹೋದರೆ ಅಮಾನತ್ ಅಥವಾ ವರ್ಗಾವಣೆ ಶಿಕ್ಷೆ ಖಚಿತ ಎಂಬ ಸುಳಿವು ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡು ಹಿಂದಿ ಲಿಪಿಗೆ ಬಣ್ಣ ಹಚ್ಚಿಸಿ ಬಚಾವ್ ಆಗಿದ್ದಾರೆ.