Advertisement

ಹೊಸ ತಾ|ಕೇಂದ್ರಗಳಲ್ಲಿ ನಗರಾಡಳಿತ ಸಂಸ್ಥೆ

01:32 AM Mar 05, 2020 | mahesh |

ಉಡುಪಿ: ನೂತನವಾಗಿ ನಿರ್ಮಾಣಗೊಂಡ ತಾಲೂಕಿನ ಕೇಂದ್ರ ಪ್ರದೇಶವನ್ನು ಪಟ್ಟಣ ಪಂಚಾಯತ್‌ ಅಥವಾ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾಡಳಿತಗಳು ಅಗತ್ಯ ಕಡತ ತಯಾರಿಯಲ್ಲಿ ತೊಡಗಿವೆ. ನಗರ ಸಂಸ್ಥೆಗಳನ್ನು ರೂಪಿಸುವಾಗ ಒಂದುಗೂಡಿಸುವ ಗ್ರಾ.ಪಂ.ಗಳ ಒಟ್ಟು ಜನಸಂಖ್ಯೆ 20,000ಕ್ಕಿಂತ ಕಡಿಮೆ ಇದ್ದರೆ ಅದನ್ನು ಪಟ್ಟಣ ಪಂಚಾಯತ್‌ ಆಗಿಯೂ ಅದಕ್ಕಿಂತ ಹೆಚ್ಚಿಗೆ ಇದ್ದರೆ ಪುರಸಭೆಯನ್ನಾಗಿಯೂ ರಚಿಸಲಾಗುತ್ತಿದೆ. ಇದರಂತೆ ಬೈಂದೂರು ಮತ್ತು ಹೆಬ್ರಿಯನ್ನು ಪ.ಪಂ., ಬ್ರಹ್ಮಾವರ ವನ್ನು ಪುರಸಭೆಯಾಗಿ ಮಾರ್ಪಡಿಸುವ ಪ್ರಸ್ತಾವವಿದೆ.

Advertisement

ಬೈಂದೂರು ತಾಲೂಕಿನ ಬೈಂದೂರಿನ ಆಸುಪಾಸಿನಲ್ಲಿ ಬೈಂದೂರು- ತಗ್ಗರ್ಸೆ ಗ್ರಾಮಗಳು ಸೇರಿ ಬೈಂದೂರು ಗ್ರಾ.ಪಂ., ಯಡ್ತರೆ ಗ್ರಾ.ಪಂ., ಪಡುವರಿ ಗ್ರಾ.ಪಂ.ಗಳಿದ್ದವು. ಈಗ ಇವು ಮೂರನ್ನೂ ಸೇರಿಸಿ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಸರಕಾರದ ಅಧಿಸೂಚನೆ ಹೊರಟಿದ್ದು ಆಕ್ಷೇಪಣೆ ಕೋರಿದ ಅವಧಿಯೂ ಮುಗಿದಿದೆ. 1997ರಲ್ಲಿ ಬೈಂದೂರು ಪ.ಪಂ. ಆಗಿತ್ತು, ಬಳಿಕ ಗ್ರಾ.ಪಂ.ಗಳಾದವು. ಈಗ ಮತ್ತೆ ಪ.ಪಂ. ಆಗುತ್ತಿದೆ.

ಹೊಸ ತಾಲೂಕುಗಳಲ್ಲಿ ಒಂದಾದ ಬ್ರಹ್ಮಾವರದ ಆಸುಪಾಸಿನ ವಾರಂಬಳ್ಳಿ, ಚಾಂತಾರು (ಚಾಂತಾರು- ಹೇರೂರು ಗ್ರಾಮ), ಹಂದಾಡಿ (ಹಂದಾಡಿ, ಮಟಪಾಡಿ, ಕುಮ್ರಗೋಡು ಗ್ರಾಮ), ಹಾರಾಡಿ (ಹಾರಾಡಿ, ಬೈಕಾಡಿ ಗ್ರಾಮ) ಗ್ರಾ.ಪಂ.ಗಳನ್ನು ಸೇರಿಸಿ ಪುರಸಭೆ ಯಾಗಿ ಸೃಜಿಸುವ ಪ್ರಸ್ತಾವವಿದೆ. ಈ ಮುನ್ನ ಇದಕ್ಕೆ ಆರೂರು ಮತ್ತು ನೀಲಾವರ ಗ್ರಾಮಗಳನ್ನು ಸೇರಿಸುವ ಪ್ರಸ್ತಾವವಿದ್ದರೂ ತೀರಾ ಗ್ರಾಮಾಂತರ ಮತ್ತು ಬ್ರಹ್ಮಾವರಕ್ಕೆ ದೂರ ಇರುವ ಕಾರಣ ಇದನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಕಳದಿಂದ ಬೇರ್ಪಟ್ಟ ತಾಲೂಕು ಹೆಬ್ರಿ. ಇಲ್ಲಿ ಹೆಬ್ರಿ ಮತ್ತು ಚಾರ ಗ್ರಾ.ಪಂ.ಗಳನ್ನು ಒಂದು ಸೇರಿಸಿ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಇದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾಪು ಪುರಸಭೆಗೆ ಬಡಾ ಗ್ರಾ.ಪಂ.ನ್ನು ಸೇರಿಸುವ ಬೇಡಿಕೆಯೂ ಪ್ರಸ್ತಾವನೆಯಲ್ಲಿದೆ.

ದ.ಕ. ಜಿಲ್ಲೆಯ ಸೋಮೇಶ್ವರದಲ್ಲಿ ಈಗಾಗಲೇ ಪ.ಪಂ. ಆಗಿ ಅಧಿಸೂಚನೆ ಹೊರಡಿಸಲಾಗಿದೆ. ಕಡಬ ಗ್ರಾ.ಪಂ.ನ ಕಡಬ ಮತ್ತು ಕೋಡಿಂಬಾಳ ಗ್ರಾಮಗಳನ್ನು ಸೇರಿಸಿ ಪ.ಪಂ. ಆಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿದೆ.

Advertisement

ಹೀಗಾಗಿ ಎಪ್ರಿಲ್‌ ತಿಂಗಳಲ್ಲಿ ಬರುವ ಗ್ರಾ.ಪಂ. ಚುನಾವಣೆಯಲ್ಲಿ ಇದುವರೆಗೆ ಅಧಿಸೂಚನೆ ಹೊರಟ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯು ತ್ತಿಲ್ಲ. ಪ್ರಸ್ತಾವವಿರುವ ಪ.ಪಂ./ ಪುರಸಭೆ ಗಳನ್ನು ಘೋಷಿಸಿದಲ್ಲಿ ಈ ಗ್ರಾ.ಪಂ.ಗಳಲ್ಲಿಯೂ ಚುನಾವಣೆ ನಡೆಸುವುದಿಲ್ಲ. ಗ್ರಾ.ಪಂ. ಚುನಾವಣೆ ಬಳಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇಲ್ಲಿ ನಡೆಸಲಾಗುವುದು. ಜನಸಂಖ್ಯೆ, ಜನಸಾಂದ್ರತೆ, ಸರ್ವೇ ನಂಬರ್‌, ಭೂನಕಾಶೆ ಇತ್ಯಾದಿ ಮಾಹಿತಿಗಳನ್ನು ಆಯಾ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸಂಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ.

ಹೊಸ ತಾಲೂಕು ಕೇಂದ್ರಗಳ ಕೇಂದ್ರ ಸ್ಥಾನಗಳನ್ನು ನಗರ ಸ್ಥಳೀಯ ಸಂಸ್ಥೆಯಾಗಿ ಮೇಲ್ದರ್ಜೆ ಗೇರಿಸುವ ಪ್ರಸ್ತಾವ ಸರಕಾರದ ಮುಂದಿದ್ದು ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ.
– ನಾರಾಯಣ ಗೌಡ, ಪೌರಾಡಳಿತ ಸಚಿವರು

–  ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next