Advertisement

ಹು-ಧಾ ಮಹಾನಗರ ಪಾಲಿಕೆ ಚುನಾವಣೆ |ಜಾಣರ ಮೌನಕ್ಕೆ ಫಲಿತಾಂಶವೇ ಉತ್ತರ

03:29 PM Sep 02, 2021 | Team Udayavani |

ವರದಿ: ಡಾ|ಬಸವರಾಜ ಹೊಂಗಲ್‌

Advertisement

ಧಾರವಾಡ: ಅಲ್ಲೇನಿದ್ದರೂ (1-10ನೇ ವಾರ್ಡ್‌ )ಮಕ್ಕಿ ಕಾ ಮಕ್ಕಿ, ನೀವು ಚೆನ್ನಾಗಿ ಕೆಲಸ ಮಾಡಿದರೆ ಸ್ವಾಗತ, ಇಲ್ಲದಿದ್ದರೆ ಫಲಿತಾಂಶದ ದಿನವೇ ಮತದಾರರು ಕೊಟ್ಟ ಏಟು ಗೊತ್ತಾಗುವುದು. (10-25ನೇ ವಾರ್ಡ್‌) ಈ ವಾರ್ಡ್‌ಗಳಲ್ಲಿ ಸುಸಂಸ್ಕೃತರ ಜಾಣಮೌನದ ಫಲಿತ ಗೊತ್ತಾಗುವುದು ಕೊನೆಯಲ್ಲಿ.

ಹೌದು. ವಿಶ್ವ ವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ ಎನಿಸಿಕೊಂಡ ಧಾರಾನಗರಿ ಧಾರವಾಡದ ಸಿರಿವಂತರು ಮತ್ತು ಸಾಕಷ್ಟು ಓದಿದ ವಿದ್ವಾಂಸರು, ಸಾಹಿತಿಗಳು, ಸಂಗೀತಗಾರರ ನೆಲೆಯಾಗಿದೆ. 10-25 ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ. ರಾಷ್ಟ್ರೀಯ ಹೆದ್ದಾರಿ 4ರ ಪಶ್ಚಿಮ ಭಾಗದಲ್ಲಿ ಬರುವ ಧಾರವಾಡದ15 ವಾರ್ಡ್‌ಗಳಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಸರ್ಕಾರಿ ನೌಕರರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ವ್ಯಾಪಾರಸ್ಥರು ವಾಸವಾಗಿದ್ದು, ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೈ-ಕಮಲದ ಮಧ್ಯೆ ಬಿರುಸಿನ ಸೆಣಸಾಟ ಏರ್ಪಟ್ಟಿದೆ.

ಕಳೆದ ಪಾಲಿಕೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದರೂ, ಕಾಂಗ್ರೆಸ್‌ ಸಮಬಲದ ಹೋರಾಟ ಮಾಡಿತ್ತು. ಜೆಡಿಎಸ್‌ ಮಾತ್ರ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದು, ಈಗಲೂ ಇದರ ಸ್ಥಿತಿ ಬದಲಾಗಿಲ್ಲ.

ಪಕ್ಷೇತರರ ಪ್ರಾಬಲ್ಯ: ಇನ್ನು 10-25 ನೇ ವಾರ್ಡ್‌ಗಳ ಪೈಕಿ ಅರ್ಧಕ್ಕಿಂತ ಹೆಚ್ಚು ವಾರ್ಡ್‌ಗಳಲ್ಲಿ ಪಕ್ಷೇತರ ಸ್ಪರ್ಧಿಗಳು ಕೈ-ಕಮಲ-ದಳ ಪಕ್ಷದ ಅಭ್ಯರ್ಥಿಗಳನ್ನೆ ನಿದ್ದೆಗೆಡಿಸುತ್ತಿದ್ದಾರೆ. ಕೆಲವರು ಕಾಂಗ್ರೆಸ್‌ ಮತ್ತು ಕೆಲವರು ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದು, ಇನ್ನು ಕೆಲವರು ಟಿಕೇಟ್‌ ಆಕಾಂಕ್ಷಿ ಇದ್ದರೂ ತಮ್ಮನ್ನು ಪರಿಗಣಿಸಿಲ್ಲವೆಂದು ಆರೋಪಿಸಿ ಕಣದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

Advertisement

11ನೇ ವಾರ್ಡ್‌ನಲ್ಲಿ ಹಿರಿಯ ರಂಗಕರ್ಮಿ ಬಾಬುರಾವ್‌ ಇಳಿಗೇರ ಅವರು ಸಿಪಿಐ(ಎಂ)ನಿಂದ ಕಣಕ್ಕಿಳಿದು ಗಮನ ಸೆಳೆದಿದ್ದರೆ, 12 ವಾರ್ಡ್‌ನಲ್ಲಿ ಜೆಡಿಎಸ್‌ ಜಾನಪದ ಕಲಾವಿದೆ ವಿಶ್ವೇಶ್ವರಿ ಹಿರೇಮಠ ಅವರಿಗೆ ಟಿಕೇಟ್‌ ನೀಡಿ ಕಣಕ್ಕಿಳಿಸಿ ಬಿರುಸಿನ ಪ್ರಚಾರದಲ್ಲಿ ತೊಡಗಿದೆ. 13ವಾರ್ಡ್‌ನಲ್ಲಿ ಕಮಲ ಪಾಳೆಯ ಈ ಬಾರಿ ಸುರೇಶ ಬೇದರೆ ಅವರನ್ನು ಕಣಕ್ಕಿಳಿಸಿದ್ದರೆ, 14ನೇ ವಾರ್ಡ್‌ನಲ್ಲಿ ಕೈ ಬಿಟ್ಟು ಕಮಲ ಹಿಡಿದ ಸುಭಾಷ ಶಿಂಧೆ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 15ನೇ ವಾರ್ಡ್‌ನಲ್ಲಿ ಕೈ ಪಕ್ಷದ ಪ್ರಬಲ ಸ್ಥಳೀಯ ನಾಯಕ ದೀಪಕ ಚಿಂಚೋರೆ ಈ ಬಾರಿ ತಮ್ಮ ಪುತ್ರ ಅನಿರುದ್ಧ ಚಿಂಚೋರೆ ಅವರನ್ನು ಕಣಕ್ಕಿಳಿಸಿದ್ದಾರೆ. 16ನೇ ವಾರ್ಡ್‌ನಲ್ಲಿ ಪರವೀನ ದೇಸಾಯಿ ಕೈ ಹಿಡಿದು ಕಣಕ್ಕಿಳಿದರೆ, 17 ನೇ ವಾರ್ಡ್‍ನಲ್ಲಿ ಅಮಿತ್‌ ವಾಲೀಕಾರ್‌ ಪೊರಕೆ ಹಿಡಿದು ಆಮ್‌ ಆದ್ಮಿ ಪಕ್ಷಕ್ಕೆ ಮತ ನೀಡುವಂತೆ ಕೇಳುತ್ತಿದ್ದಾರೆ.

18ನೇ ವಾರ್ಡ್‌ನಲ್ಲಿ ಶಿವು ಹಿರೇಮಠ ಕಮಲ ಹಿಡಿದುಕೊಂಡು ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, 19ನೇ ವಾರ್ಡ್‍ನಲ್ಲಿ ಜ್ಯೋತಿ ಪಾಟೀಲ (ಕಮಲ)ಮತ್ತು ರೂಪಾ ಒಡ್ಡಿನ(ಕೈ)ಮುಖಾಮುಖೀಯಾಗಿದ್ದಾರೆ. 20ನೇ ವಾರ್ಡ್‍ನಲ್ಲಿ ಕವಿತಾ ದಾನಪ್ಪ ಕಬ್ಬೇರ, 21ನೇ ವಾರ್ಡ್‌ನಲ್ಲಿ ಬಾಣವಿ ಸಂದೀಪ್‌ ಕೈ ಪಕ್ಷದಿಂದ ಅದೃಷ್ಟಕ್ಕಿಳಿದಿದ್ದಾರೆ.

22ನೇವಾರ್ಡ್‌ನಲ್ಲಿಒಟ್ಟು9 ಜನರುಕಣದಲ್ಲಿದ್ದು,ಇಲ್ಲಿ ತುರುಸಿನ ಚುನಾವಣೆ ನಡೆಯಲಿದೆ. 23ನೇ ವಾರ್ಡ್‌ನಲ್ಲಿ ಸಂಜಯ್‌ ಕಪಟಕರ್‌ ಕಮಲ ಹಿಡಿದು ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದರೆ, 24ನೇ ವಾರ್ಡ್‍ನಲ್ಲಿ8ಜನ ಕಣದಲ್ಲಿದ್ದು ಚುನಾವಣೆ ಕಣ ರಂಗೇರಿದೆ. ಇನ್ನು 25ನೇ ವಾರ್ಡ್‌ನಲ್ಲಿ ಕೈ-ಕಮಲ ತೀವ್ರ ಪೈಪೋಟಿಗೆ ಇಳಿದಿದ್ದು, ಗೆಲುವು ಯಾರದು ಎಂದು ಕಾದು ನೋಡಬೇಕಿದೆ.

ಹುಬ್ಬಳ್ಳಿಯಲ್ಲೂ ಕೈ-ಕಮಲ ಸಮಬಲ: ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಬ್ಬಳ್ಳಿ ನಗರದ 10 ವಾರ್ಡ್‍ಗಳಲ್ಲಿ ಕೂಡ ಕಾಂಗ್ರೆಸ್‌ -ಬಿಜೆಪಿ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ.ಕಳೆದ ಬಾರಿಹುಬ್ಬಳ್ಳಿ ನಗರದಲ್ಲಿಯೇ ಅತೀ ಹೆಚ್ಚು ಬಿಜೆಪಿ ಸೀಟುಗಳು ಗೆದ್ದಿದ್ದವು. ಉಣಕಲ್‌ ಭಾಗದಲ್ಲಿ ಈ ಹಿಂದೆ ಜೆಡಿಎಸ್‌ನ ಪ್ರಭಾವವಿತ್ತು. ಆದರೆ ಈ ಬಾರಿ ರಾಜಣ್ಣ ಕೊರವಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದು, ಉಣಕಲ್‌, ಬೈರಿದೇವರಕೊಪ್ಪ, ಈಶ್ವರ ನಗರ ಬಸವೇಶ್ವರ ನಗರ, ಮಂಜುನಾಥ ನಗರ ಭಾಗದಲ್ಲಿ ‌ ಬಿಜೆಪಿ ಬೇರುಗಳು ಗಟ್ಟಿಯಾಗಿವೆ.

ಬೆಲ್ಲದ್‌ಗೆ ಸವಾಲು: ಶಾಸಕ ಅರವಿಂದ ಬೆಲ್ಲದ ಅವರು ಸತತ ಎರಡು ಬಾರಿ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿರುವ ಧಾರವಾಡ‌ ದ ವಾರ್ಡ್‌ಗಳಲ್ಲಿ ತಕ್ಕಮಟ್ಟಿನ ಅಭಿವೃದ್ಧಿ ಕಾರ್ಯ ನಡೆದಿದ್ದು, ಇದರ ಆಧಾರದ ಮೇಲೆಯೇ ಮತ ಕೇಳುತ್ತಿದ್ದಾರೆ. ಅಷ್ಟೇಯಲ್ಲ, ಸ್ವತಃ ಅವರೇ ಮಹಾನಗರ ಬಿಜೆಪಿ ಅಧ್ಯಕ್ಷರಾಗಿದ್ದು ಟಿಕೇಟ್‌ ಹಂಚಿಕೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ತಮ್ಮ ಕಟ್ಟಾ ಬೆಂಬಲಿಗರಿಗೆ ಟಿಕೇಟ್‌ ಕೂಡ ಕೊಡಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಶಾಸಕ ಬೆಲ್ಲದ ಅವರಿಗೆ ಕೊನೆಗೆ ಸಚಿವ ಸ್ಥಾನ ಕೂಡ ಲಭಿಸದೆ ಹೋಗಿದ್ದು, ತೀವ್ರ ಬೇಸರವನ್ನುಂಟು ಮಾಡಿದೆ. ಅವರ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ತಂದು ಅಭಿವೃದ್ದಿಗೆ ಯತ್ನಿಸಿದ್ದು, ಇದೀಗ ರಾಜಕೀಯವಾಗಿ ಕೊಂಚ ಹಿನ್ನಡೆ ಅನುಭಿಸಿದ್ದಾರೆ. ಇದರಿಂದ ಕೊಸರೆದ್ದು ಬರಲು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಬಿಜೆಪಿ ಸೀಟುಗಳನ್ನು ಅವರು ಗೆಲ್ಲಿಸಿ ತೋರಿಸುವ ಅಗತ್ಯವಿದ್ದು, ಇದನ್ನು ಅವರು ಸವಾಲಾಗಿ ಸ್ವೀಕರಿಸಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next