Advertisement

ನಗರಸಭೆ ಅಧ್ಯಕ್ಷೆ-ಪೌರಾಯುಕ್ತರ ವಿರುದ್ಧ ಸದಸ್ಯರ ಆಕ್ರೋಶ 

07:29 AM Feb 20, 2019 | Team Udayavani |

ಕೋಲಾರ: ಕೋಲಾರವನ್ನು ಬರ ಪೀಡಿತ ಜಿಲ್ಲೆಯನ್ನಾಗಿ ರಾಜ್ಯ ಸರ್ಕಾರ ಘೋಷಿಸಿದ್ದರೂ ನಗರದ ಜನತೆಗೆ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಗರಸಭೆ ಅಧ್ಯಕ್ಷೆ -ಪೌರಾಯುಕ್ತರು ವಿಫಲವಾಗಿದ್ದಾರೆ ಎಂದು ಆರೋಪಿಸಿ ಕೆಲ ನಗರಸಭೆ ಸದಸ್ಯರು ಧರಣಿ ನಡೆಸಿದರು.

Advertisement

ಕ್ರಮ ಕೈಗೊಂಡಿಲ್ಲ: ಮಂಗಳವಾರ ನಗರಸಭೆ ಮುಂದೆ ಜಮಾಯಿಸಿದ ವಿವಿಧ ಪಕ್ಷಗಳ ನಗರಸಭೆ ಸದಸ್ಯರು, ಬರಗಾಲದಿಂದ ನಗರದ ಬಹುತೇಕ ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಿದೆ. ಜೊತೆಗೆ ಒಳಚರಂಡಿ ವ್ಯವಸ್ಥೆ ನಗರದಲ್ಲಿ ಹದಗೆಟ್ಟಿದೆ. ರಸ್ತೆಗಳಲ್ಲಿ ವಿದ್ಯುತ್‌ ದೀಪಗಳ ಸಮಸ್ಯೆಗಳಿದ್ದರೂ ನಗರಸಭೆಯಿಂದ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ದೂರಿದರು.

ಸಮರ್ಪಕ ನೀರಿಲ್ಲ: ಸದಸ್ಯ ಕಾಶಿ ವಿಶ್ವನಾಥ ಮಾತನಾಡಿ, ತನ್ನ ವಾರ್ಡ್‌ನಲ್ಲಿ 10 ಬೋರ್‌ವೆಲ್‌ಗ‌ಳಿದ್ದು ಅದರಲ್ಲಿ 5 ಚಾಲ್ತಿಯಲ್ಲಿವೆ. ಅದರಲ್ಲಿ 3 ಬೋರ್‌ವೆಲ್‌ನಲ್ಲಿ ಮಾತ್ರ ನೀರು ಬರುತ್ತಿದೆ. ತನ್ನ ವಾರ್ಡ್‌ನ ಒಟ್ಟು 7 ಸಾವಿರ ಜನರಿಗೆ ಹೇಗೆ ನೀರು ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮನವಿಗೆ ಸ್ಪಂದಿಸಿಲ್ಲ: ಮತ್ತೂಬ್ಬ ಸದಸ್ಯ ಸೋಮಶೇಖರ್‌, 5ನೇ ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದರೂ ಮನೆಗಳಲ್ಲಿ ವಾಸಮಾಡಲು ತೊಂದರೆಯಾಗುವ ಮಟ್ಟಿಗೆ ಸಮಸ್ಯೆ ಉಂಟಾಗಿದೆ. ಈ ಕುರಿತು ಅಧ್ಯಕ್ಷರಿಗೆ ಸುಮಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ತಾರತಮ್ಯ: 1ನೇ ವಾರ್ಡ್‌ ಸದಸ್ಯ ವೆಂಕಟೇಶ್‌ ಮಾತನಾಡಿ, ನಗರದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಆತಂಕಕ್ಕೆ ಒಳಗಾಗಿದ್ದು, ನಗರದಲ್ಲಿ ಇರುವ ಟ್ಯಾಂಕರ್‌ಗಳು ನಗರಸಭೆ ಸದಸ್ಯರ ವ್ಯಾಪ್ತಿಯಲ್ಲಿ ನೀರು ಕೊಡದೆ ಅಧ್ಯಕ್ಷರ ಅಣತಿಯಂತೆ ಅವರ ಪರವಾಗಿರುವ ಸದಸ್ಯರ ವಾರ್ಡ್‌ಗೆ ಮಾತ್ರ ಕಳುಹಿಸುತ್ತಿದ್ದಾರೆಂದು ದೂರಿದರು.

Advertisement

ಕೆರೆಗಳಲ್ಲಿ ಬೋರ್‌ವೆಲ್‌ಗ‌ಳ ರಿಪೇರಿ ಮಾಡಿ ನಮಗೆ ಹಸ್ತಾಂತರ ಮಾಡಿ ಎಂದು ಸುಮಾರು 6 ತಿಂಗಳಿಂದ ಮನವಿ ಮಾಡಿದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಕೂಡಲೇ ನಗರಸಭೆ ಅಧ್ಯಕ್ಷೆ -ಪೌರಾಯುಕ್ತರು ಕ್ರಮ ತೆಗೆದುಕೊಳ್ಳದೆ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಸದಸ್ಯರ, ಅಧ್ಯಕ್ಷರ ಪತಿ ಮಧ್ಯೆ ಮಾತಿನ ಚಕಮಕಿ: ಈ ವೇಳೆ ಅಧ್ಯಕ್ಷರ ಪತಿ ಹಾಗೂ ನಗರಸಭೆ ಸದಸ್ಯ ಪ್ರಸಾದ್‌ಬಾಬು ಮತ್ತು ಇತರೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಗರಸಭೆ ಸದಸ್ಯ ಪ್ರಸಾದ್‌ ಬಾಬು ಮಾತನಾಡಿ, ಸಮಸ್ಯೆಗಳು ಇಲ್ಲದಿದ್ದರೂ ಸುಮ್ಮನೆ ಅಪಪ್ರಚಾರ ಸರಿಯಲ್ಲ. ತನ್ನ ವಾರ್ಡ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ.

ವಿನಾಕಾರಣ ಏಕೆ ಅಧ್ಯಕ್ಷರ ಮೇಲೆ ಆರೋಪ ಮಾಡುತ್ತೀರಾ ಎಂದಾಗ, ಸದಸ್ಯರು ನೀವು ಇಲ್ಲಿ ಕೂತು ಹೋರಾಟ ಮಾಡಿ ನಮ್ಮ ಕಷ್ಟ ನಿಮಗೆ ಅರ್ಥವಾಗುತ್ತದೆ ಎಂದಾಗ ಅವರು ಅಧ್ಯಕ್ಷರ ಪತಿ ಅಲ್ಲಿಂದ ಜಾಗ ಖಾಲಿ ಮಾಡಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಮೋಹನ್‌ ಪ್ರಸಾದ್‌, ಅಫೊಜ್‌ಪಾಷಾ, ಎ.ಪಿ.ರವೀಂದ್ರ, ಎಲ್‌.ನವಾಜ್‌, ನಾರಾಯಣಮ್ಮ, ಲಕ್ಷಮ್ಮ, ನದೀಮ್‌, ಹರ್ಷಿತಾಸುಲ್ತಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next