ರಾಮನಗರ: ಕೆಂಗಲ್ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ನಗರಸಭಾ ಎಇ ರಾಜೇಗೌಡ, ನಗರದ ವಾರ್ಡ್ ಸಂಖ್ಯೆ 27 ಜೀಗೇನಹಳ್ಳಿಯಲ್ಲಿ ಕೆಂಗಲ್ ಹನು ಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರವಿದ್ದು, ಸದರಿ ಜಾಗ ಸರ್ಕಾರಿ ರಸ್ತೆ ಮತ್ತು ಉದ್ಯಾನವನದ ಜಾಗ ಎಂದು ನಗರಸಭೆಯ ದಾಖಲೆಗಳು ಹೇಳುತ್ತಿವೆ. ಇಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದದ್ದನ್ನು ಗಮನಿಸಿ ನಾಲ್ಕು ದಿನಗಳ ಹಿಂದೆಯೇ ನೋಟಿಸ್ ನೀಡಿ ಯಾರು ಕಾಮಗಾರಿ ಕೈಗೊಳ್ಳದಿರುವಂತೆ ಸೂಚಿಸಲಾಗಿತ್ತು. ನಗರಸಭೆಯ ನೋಟಿಸನ್ನು ಧಿಕ್ಕರಿಸಿ ಕಾಮಗಾರಿ ಮುಂದುವರೆಸಿದ್ದರಿಂದ ತಾವು ಕ್ರಮ ಕೈಗೊಳ್ಳಬೇಕಾಯಿತು ಎಂದು ಮಾಹಿತಿ ನೀಡಿದರು.
ನಗರಸಭೆ ವಾದ: ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಲು ನಗರ ಸಭೆಯಿಂದ ಉಚಿತ ನಿವೇಶನ ಕೊಡವಂತೆ 1997ರಲ್ಲೇ ಅರ್ಜಿ ಬಂದಿದೆ. 80/120 ಸ್ಥಳವನ್ನು ಕೊಡಲು ಸರ್ಕಾರದ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಬಹುದು ಎಂದು ನಗರಸಭೆಯಲ್ಲಿ ನಿರ್ಣಯವಾಗಿದೆ. ನಂತರ 2013ರ ಸೆಪ್ಟೆಂಬರ್‌ನಲ್ಲಿ ಕೇಂದ್ರದ ಕಾರ್ಯದರ್ಶಿಗಳು ನಗರದ ಯುವಕರಿಗೆ ಅನುಕೂಲವಾಗುವಂತೆಸಾಂಸ್ಕೃತಿಕ ಚಟುವಟಿಕೆ ನಡೆಸುವ ಉದ್ದೇಶಕ್ಕೆ ಜೀಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 31/01 ಮತ್ತು 31/02ರಲ್ಲಿ ಸೈಟ್ ನಂಬರ್ 41 ಮತ್ತು 64 ಹಾಗೂ ಅಕ್ಕಪಕ್ಕದ ಜಾಗ ಸೇರಿ ಒಟ್ಟು 160/160 ಜಾಗವನ್ನು ಕೊಡುವಂತೆ ಯಾವುದೇ ಶುಲ್ಕವಿಲ್ಲದೇ ಮಂಜೂರು ಮಾಡಲು ಕೋರಿರುವ ವಿಚಾರ ಚರ್ಚೆಗೆ ಬಂದಿತು. ಈ ಸ್ಥಳದ ಬಗ್ಗೆಯೂ ಸರ್ಕಾರದ ಅನುಮೋದನೆಗೆ ಕಳುಹಿಸಹುದು ಎಂದು ನಿರ್ಣಯವಾಗಿದೆ. ಆದರೆ ಈ ವಿಚಾರದಲ್ಲಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆದಿರುವ ಬಗ್ಗೆ ನಗರಸಭೆಯಲ್ಲಿ ದಾಖಲೆಗಳು ಇಲ್ಲ. ಹೀಗಾಗಿ ಇದು ಅಕ್ರಮ ನಿರ್ಮಾಣ ಎಂದು ವಿವರಿಸಿದರು.
ಕಟ್ಟಡ ತೆರವು ಎಚ್ಚರಿಕೆ: ಸದರಿ ಕಾಮಗಾರಿಯನ್ನು ಕೇಂದ್ರದವರ ಸ್ಥಗಿತಗೊಳಿಸಬೇಕಾಗಿದೆ. ಅವರ ಬಳಿ ಇರುವ ದಾಖಲೆಗಳನ್ನು ನಗರಸಭೆಗೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಹಾಗೊಮ್ಮೆ ನಗರಸಭೆಯ ಸೂಚನೆಯನ್ನು ಧಿಕ್ಕರಿಸಿದರೆ ಪೊಲೀಸರ ರಕ್ಷಣೆಯಲ್ಲಿ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಎಇಇ ರಾಜೇಗೌಡ ಎಚ್ಚರಿಸಿದ್ದಾರೆ. ಕ್ರೀಡಾ ಕೇಂದ್ರದ ಪದಾಧಿಕಾರಿಗಳ ವಾದವೇನು? ನಗರಸಭೆಯ ಕ್ರಮವನ್ನು ಖಂಡಿಸಿರುವ ಕೆಂಗಲ್ ಹನುಮಂತಯ್ಯ ಮತ್ತು ಕ್ರೀಡಾ ಕೇಂದ್ರದ ಪದಾಧಿಕಾರಿಗಳಾದ ಸತೀಶ್, ರಘು ಮುಂತಾದವರು ಪ್ರತಿಕ್ರಿಯಿಸಿ, ತಾವು ಕಾನೂನು ಬದ್ಧವಾಗಿಯೇ ಕೇಂದ್ರ ನಿರ್ಮಿಸುತ್ತಿದ್ದು, ಮುಖ್ಯ ಕಟ್ಟಡ ನಿರ್ಮಾಣಕ್ಕೆ ಬೇಕಾದ ನಕ್ಷೆಗೆ ನಗರಸಭೆಯ ಅಧಿಕಾರಿಗಳೇ ಅನುಮತಿ ನೀಡಿದ್ದಾರೆ. ಪಾರ್ಕಿಂಗ್ ಮತ್ತು ಯೋಗಾಭ್ಯಾಸಕ್ಕೆ ಹೆಚ್ಚುವರಿ ಸ್ಥಳ ಬೇಕಾದ್ದರಿಂದ ನಗರಸಭೆಯ ಅಧಿಕಾರಿಗಳ ಗಮನ ಸೆಳೆದೆ ಕಾಮಗಾರಿ ಆರಂಭಿಸಲಾಗಿದೆ. ಏಕಾ ಏಕಿ ನಿರ್ಮಾಣ ಕಾಮಗಾರಿಯನ್ನು ಧ್ವಂಸಗೊಳಿಸಿದ್ದು ಸರಿಯಲ್ಲ ಎಂದರು.
ಕೇಂದ್ರದಲ್ಲಿ ಟೆನ್ನಿಸ್, ಬ್ಯಾಡ್ಮಿಂಟನ್, ಯೋಗ ತರಬೇತಿ ನಡೆಯುತ್ತಿದೆ. ಉತ್ತಮ ದರ್ಜೆಯ ಬ್ಯಾಡ್ಮಿಂಟನ್ ಕೋರ್ಟ್ ಇಲ್ಲಿದೆ. ಸರ್ಕಾರದ ವಿವಿಧ ಇಲಾಖೆಗಳು ಇಲ್ಲಿ ಕ್ರೀಡಾ ಕೂಟಗಳನ್ನು ಆಯೋಜಿಸಿವೆ ಎಂದು ಅವರು ತಿಳಿಸಿದ್ದಾರೆ.