ಮುಂಬೈ:ಬಿಹಾರದಲ್ಲಿ ದುರ್ಗಾ ದೇವಿಯ ವಿಸರ್ಜನೆ ವೇಳೆ ಮುಂಗೇರ್ ನಲ್ಲಿ ನಡೆದಿರುವ ಗುಂಡಿನ ದಾಳಿ ಘಟನೆ ಹಿಂದುತ್ವದ ಮೇಲಿನ ಹಲ್ಲೆಯಾಗಿದ್ದು, ಭಾರತೀಯ ಜನತಾ ಪಕ್ಷ ಮೌನವಾಗಿರುವುದಕ್ಕೆ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ ಟೀಕಿಸಿದೆ.
ಬಿಹಾರದ ಮುಂಗೇರ್ ನಲ್ಲಿ ದುರ್ಗಾ ದೇವಿಯ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಹಾರಿಸಿದ್ದ ಗುಂಡಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಈ ಘಟನೆ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಮುಂಗೇರ್ ಫೈರಿಂಗ್ ಘಟನೆ ಹಿಂದುತ್ವದ ಮೇಲಿನ ದಾಳಿಯಾಗಿದೆ ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ತಿಳಿಸಿದ್ದು, ಒಂದು ವೇಳೆ ಇಂತಹ ಘಟನೆ ಮಹಾರಾಷ್ಟ್ರ, ಪಶ್ಚಿಮಬಂಗಾಳ ಅಥವಾ ರಾಜಸ್ಥಾನದಲ್ಲಿ ನಡೆದಿದ್ದರೆ ರಾಜ್ಯಪಾಲರು ಹಾಗೂ ಬಿಜೆಪಿ ಮುಖಂಡರು ರಾಷ್ಟ್ರಪತಿ ಆಡಳಿತ ಹೇರುವಂತೆ ಒತ್ತಾಯಿಸುತ್ತಿದ್ದರು. ಆದರೆ ಬಿಹಾರ ರಾಜ್ಯದ ಗವರ್ನರ್ ಮತ್ತು ಬಿಜೆಪಿ ಮುಖಂಡರು ಯಾಕೆ ಈವರೆಗೂ ಈ ಪ್ರಶ್ನೆಯನ್ನು ಎತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಪಕ್ಷ ನೋಡಿ ಅಲ್ಲ ವ್ಯಕ್ತಿ ನೋಡಿ ಪ್ರಚಾರ; ಮುನಿರತ್ನ ದೊಡ್ಡತನ ನೋಡಿ ಬಂದಿದ್ದೇನೆ: ದರ್ಶನ್
ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಲೇಖನದಲ್ಲಿ, ನೋಡಿ ಬಿಹಾರ, ಉತ್ತರಪ್ರದೇಶ ಮತ್ತು ಹರ್ಯಾಣದಲ್ಲಿ ಏನು ನಡೆಯಿತು ಎಂದು? ಬಿಜೆಪಿ ಆಡಳಿತಾವಿರುವ ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆ ಹೇಗಿದೆ? ಅಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿಯಾಗಿದೆ. ಆದರೆ ಬಿಜೆಪಿ ಮಾತ್ರ ಈ ರಾಜ್ಯಗಳಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಮಹಾರಾಷ್ಟ್ರ, ಪಂಜಾಬ್, ಪಶ್ಚಿಮಬಂಗಾಳ ಮತ್ತು ರಾಜಸ್ಥಾನದಲ್ಲಿ ಮಾತ್ರ ಸಮಸ್ಯೆಗಳಿವೆ ಎಂದು ಹೇಳುತ್ತಿರುವುದಾಗಿ ತಿಳಿಸಿದೆ.