Advertisement

ಹೆಸರಿನಲ್ಲಿ ಎಲ್ಲಾ ಇದೆ

12:30 AM Feb 15, 2019 | |

ಹೆಸರು ಕಾಳು ಆರೋಗ್ಯಕ್ಕೆ ಒಳ್ಳೆಯದು ಅಂತ ಗೊತ್ತಿದ್ದರೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾರೂ ತಿನ್ನಲು ಇಷ್ಟಪಡುದಿಲ್ಲ. ಹೆಸರು ಕಾಳಿನಿಂದ ದಿನನಿತ್ಯದ ಚಟುವಟಿಕೆಗಳಿಗೆ ಬೇಕಾದ ಪ್ರೊಟೀನ್‌ ದೊರೆಯುತ್ತದೆ. ಬೆಳಗ್ಗೆಯ ಉಪಹಾರದಿಂದ ಹಿಡಿದು ರಾತ್ರಿಯ ಊಟದವರೆಗೂ ನಾವು ಚೈತನ್ಯದಿಂದ ಇರಲು ಇದು ಸಹಕಾರಿ. ಹೆಸರು ಕಾಳು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ, ತೂಕ ಇಳಿಸಲು ಸಹಕರಿಸುತ್ತದೆ- ಹೀಗೆ ಹಲವಾರು ಲಾಭದಾಯಕ ಅಂಶಗಳನ್ನು ಹೆಸರುಕಾಳು ಹೊಂದಿರುವುದರಿಂದ ಇದನ್ನು ನಿತ್ಯದ ಅಡುಗೆಯಲ್ಲಿ ನಾನಾ ಬಗೆಗಳಲ್ಲಿ ಉಪಯೋಗಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

Advertisement

ಹೆಸರುಕಾಳು ಕ್ಯಾರೆಟ್‌ ರೈಸ್‌
ಬೇಕಾಗುವ ಸಾಮಗ್ರಿ:
ಕ್ಯಾರೆಟ್‌, ಹೆಸರುಕಾಳು ಮೊಳಕೆ ಬರಿಸಿದ್ದು, ಹಸಿಮೆಣಸು, ಕಾಳುಮೆಣಸು ಪುಡಿ, ಲಿಂಬೆರಸ, ಅಕ್ಕಿ, ಸಾಸಿವೆ, ಎಣ್ಣೆ, ಕರಿಬೇವು, ಅರಸಿನ.

ತಯಾರಿಸುವ ವಿಧಾನ: ಒಂದು ಲೋಟ ಅಕ್ಕಿಯನ್ನು ಉದುರಾಗಿ ಬೇಯಿಸಿ. ಹೆಸರುಕಾಳನ್ನು ಕುಕ್ಕರ್‌ನಲ್ಲಿ ಒಂದು ವಿಷಲ್‌ ಕೂಗಿಸಿ . ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಆದ ಮೇಲೆ ಸಾಸಿವೆ-ಕರಿಬೇವು-ಹಸಿಮೆಣಸು ಹಾಕಿ ಅದು ಚಟಪಟಿಸಿದ ನಂತರ ತುರಿದ ಕ್ಯಾರೆಟ್‌ ಜೊತೆಗೆ ಉಪ್ಪು ಹಾಕಿ ಹುರಿಯಿರಿ. ಕ್ಯಾರೆಟ್‌ ಬೆಂದ ಮೇಲೆ ಅದಕ್ಕೆ ಬೇಯಿಸಿದ ಹೆಸರುಕಾಳನ್ನು ಹಾಕಿ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ 2 ನಿಮಿಷ ಹುರಿಯಿರಿ. ಉರಿಯನ್ನು ಆರಿಸಿ ಅನ್ನ ಹಾಕಿ ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ. ಲಿಂಬೆರಸ ಸೇರಿಸಿ ಸವಿಯಲು ನೀಡಿ.

ಹೆಸರುಕಾಳು ಬರ್ಫಿ
ಬೇಕಾಗುವ ಸಾಮಗ್ರಿ:
ಮೊಳಕೆ ಬರಿಸಿದ ಹೆಸರುಕಾಳು, ಸಕ್ಕರೆ, ಖೋವಾ, ಏಲಕ್ಕಿ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಹಾಲು.

ತಯಾರಿಸುವ ವಿಧಾನ: ಮೊದಲಿಗೆ ಹೆಸರುಕಾಳನ್ನು ಹಬೆಯಲ್ಲಿ ಬೇಯಿಸಿ ನಂತರ ಅದನ್ನು ತರಿತರಿಯಾಗಿ ರುಬ್ಬಿರಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ರುಬ್ಬಿದ ಹೆಸರುಕಾಳು ಸೇರಿಸಿ ನಂತರ ಇದಕ್ಕೆ ಹಾಲು, ಸಕ್ಕರೆ, ಖೋವಾ, ಏಲಕ್ಕಿ ಪುಡಿ ಹಾಕಿ. ನಡು ನಡುವೆ ತುಪ್ಪವನ್ನು ಸೇರಿಸುತ್ತ ಕಲಸುತ್ತಿರಿ. ತಳಬಿಡುವವರೆಗೆ ಮಗುಚುತ್ತ ತಟ್ಟೆಗೆ ತುಪ್ಪವನ್ನು ಸವರಿ ಬಾಣಲೆಯಿಂದ ತಟ್ಟೆಗೆ ಸುರಿಯಿರಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಅದರ ಮೇಲೆ ಗೋಡಂಬಿ, ಬಾದಾಮಿ, ದ್ರಾಕ್ಷಿಯಿಂದ ಅಲಂಕರಿಸಿ.

Advertisement

ಹೆಸರುಕಾಳು ಸಾರು
ಬೇಕಾಗುವ ಸಾಮಗ್ರಿ:
ನೆನೆ ಹಾಕಿದ ಹೆಸರುಕಾಳು, ಟೊಮೆಟೊ, ಸಾಸಿವೆ, ಜೀರಿಗೆ, ಉಪ್ಪು, ಬೆಳ್ಳುಳ್ಳಿ , ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಕರಿಬೇವು, ಎಣ್ಣೆ, ಸಾರು ಪುಡಿ.

ತಯಾರಿಸುವ ವಿಧಾನ: ಮೊದಲಿಗೆ ನೆನೆಯಲು ಹಾಕಿದ ಹೆಸರುಕಾಳನ್ನು ಕುಕ್ಕರ್‌ನಲ್ಲಿ ಮೂರು ವಿಷಲ್‌ ಕೂಗಿಸಿಕೊಳ್ಳಿ. ನಂತರ ಬೆಂದ ಹೆಸರುಕಾಳನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಜೀರಿಗೆ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ‌ ಇದಕ್ಕೆ ಟೊಮೆಟೋ ಹಾಕಿ ಬಾಡಿಸಿಕೊಳ್ಳಿ. ಟೊಮೆಟೋ ಬಾಡಿದ ನಂತರ ರುಬ್ಬಿದ ಹೆಸರುಕಾಳು ಸೇರಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಕುದಿಯಲು ಬಿಡಿ. ಕುದಿ ಬಂದ ನಂತರ ಇದಕ್ಕೆ ಉಪ್ಪು, ಮೆಣಸಿನ ಪುಡಿ, ಸಾರಿನ ಪುಡಿ, ಉಪ್ಪು$ ಸೇರಿಸಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು$ ಹಾಕಿ ಅಲಂಕರಿಸಿ. 

ಹೆಸರುಕಾಳು ದೋಸೆ
ಬೇಕಾಗುವ ಸಾಮಗ್ರಿ:
ನೆನೆ ಹಾಕಿದ ಹೆಸರು ಕಾಳು, ಉಪ್ಪು , ಜೀರಿಗೆ, ಹಸಿಮೆಣಸು, ಶುಂಠಿ, ಈರುಳ್ಳಿ.

ತಯಾರಿಸುವ ವಿಧಾನ: ಹೆಸರುಕಾಳು, ಉಪ್ಪು, ಜೀರಿಗೆ, ಹಸಿಮೆಣಸು, ಶುಂಠಿ ಎಲ್ಲವನ್ನು ಒಟ್ಟಿಗೆ  ನುಣ್ಣಗೆ ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ ನೀರು ಸೇರಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. ತವಾ ಬಿಸಿಯಾದ ಮೇಲೆ ದೋಸೆ ತೆಗಿಯಿರಿ.

ಸುಲಭಾ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next