Advertisement

ಮುಂಡ್ಲಿ: ಬಿರುಕು ಬಿಟ್ಟ ಮುಂಡ್ಲಿ ಸೇತುವೆ, ಸಂಪರ್ಕ ಕಡಿತದ ಭೀತಿ

06:00 AM Jul 23, 2018 | Team Udayavani |

ಅಜೆಕಾರು:  ಕಾರ್ಕಳ ದಿಂದ ತೆಳ್ಳಾರು ಮಾರ್ಗವಾಗಿ ಮುಂಡ್ಲಿ,ಶಿರ್ಲಾಲು, ಕೆರ್ವಾಶೆ ಗ್ರಾಮ ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮುಂಡ್ಲಿ ಸೇತುವೆಯ ಕಾಂಕ್ರೀಟ್‌ ಹಾಗೂ ತಳ ಭಾಗದ ಆಧಾರಸ್ತಂಭಗಳು ಬಿರುಕು ಬಿಟ್ಟಿದ್ದು  ಸಂಪರ್ಕ ಕಡಿತದ ಭೀತಿ ಸೃಷ್ಟಿಯಾಗಿದೆ. 
 
ಸುಮಾರು 35 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಸೇತುವೆ  ಬಹಳಷ್ಟು  ವಿಶಾಲವಾಗಿದ್ದು   ಸೇತುವೆಯ ತಳಭಾಗದಲ್ಲಿದ್ದ 7 ಆಧಾರ ಸ್ತಂಭಗಳಲ್ಲಿ  4 ಆಧಾರ ಸ್ತಂಭಗಳು ಬಿರುಕು ಬಿಟ್ಟಿದ್ದು ತಳಭಾಗದಿಂದ ಮೇಲ್ಭಾಗದವರೆಗೂ ಸಿಮೆಂಟ್‌ ಕಾಂಕ್ರೀಟ್‌ ಕೊಚ್ಚಿಹೋಗಿ  ಇದಕ್ಕೆ  ಅಳವಡಿಸಲಾದ ಕಬ್ಬಿಣದ ಸಲಾಕೆಗಳು ಹೊರಬಂದಿವೆ.ಸೇತುವೆಯ ಕೆಲವೇ ಮೀಟರ್‌ ದೂರದಲ್ಲಿ ಕಾರ್ಕಳ ನಗರಕ್ಕೆ ಕುಡಿ ಯುವ ನೀರು ಒದಗಿಸುವ ಕಿಂಡಿ ಅಣೆಕಟ್ಟು ಇದೆ. ಕೆಲ ವರ್ಷಗಳ ಹಿಂದೆ ಈ ಭಾಗದಲ್ಲಿ ಜಲವಿದ್ಯುತ್‌ ಘಟಕ ನಿರ್ಮಾಣಗೊಂಡಿದ್ದು ಇದಕ್ಕಾಗಿ ಹೆಚ್ಚಿನ ನೀರನ್ನು ಶೇಖರಿಸಿಡಲಾಗಿದೆ. 

Advertisement

ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಬಿದ್ದ ಸಂದರ್ಭ ಕಿಂಡಿ ಅಣೆಕಟ್ಟುವಿನ ಸ್ವಯಂಚಾಲಿತ ಗೇಟನ್ನು ತೆರೆ ಯುವುದರಿಂದ ರಭಸವಾಗಿ ನೀರು ಆಧಾರಸ್ತಂಭಗಳಿಗೆ ಅಪ್ಪಳಿಸುವ ಜತೆಗೆ ಅರಣ್ಯ ಪ್ರದೇಶದಿಂದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮರದ ದಿಮ್ಮಿಗಳು ಆಧಾರಸ್ತಂಭಗಳಿಗೆ ಅಪ್ಪಳಿಸುತ್ತಿರುವುದರಿಂದ ಅಪಾಯ ಎದುರಾಗಿದೆ. ಸೇತುವೆಯ ಮೇಲ್ಭಾಗದ ಕಾಂಕ್ರೀಟ್‌ ಕಿತ್ತುಹೋಗಿ ಕಬ್ಬಿಣದ ಸಲಾಕೆಗಳಗೆ ತುಕ್ಕು ಹಿಡಿದು ರಂದ್ರ ಉಂಟಾಗಿದೆ. ಸೇತುವೆಯ ಮೇಲಿಂದ ವಾಹನಗಳು ಸಂಚರಿಸುವಾಗ ಸೇತುವೆಯು ಕಂಪಿಸುತ್ತಿದ್ದು ಪ್ರಯಾಣಿಕರಲ್ಲಿ  ಭೀತಿ  ಉಂಟಾಗಿದೆ.

ಕುಸಿಯುತ್ತಿರುವ ತಡೆಗೋಡೆ
ಸೇತುವೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ತಡೆಗೋಡೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು  ಕುಸಿಯುತ್ತಿದೆ. ತಡೆ ಗೋಡೆಯ ಸಿಮೆಂಟ್‌ ತುಂಡಾಗಿ ಕುಸಿದು ಬೀಳುತ್ತಿದ್ದು ಕೆಲವೆಡೆ ಕೇವಲ ಕಬ್ಬಿಣದ ಸಲಾಕೆಗಳು ಮಾತ್ರ ತೋರುತ್ತಿವೆ.

ನಿಯಮ ಬಾಹಿರ ಅನುಮತಿ
ಸುಮಾರು 35 ವರ್ಷಗಳ ಹಿಂದೆ ಕಾರ್ಕಳ ನಗರಕ್ಕೆ ಕುಡಿಯುವ ನೀರಿಗಾಗಿ ಮುಂಡ್ಲಿ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಆದರೆ ಕೆಲ ವರ್ಷಗಳ ಹಿಂದೆ ಜಿಲ್ಲಾಡಳಿತ ಹಾಗೂ ಕಾರ್ಕಳ ಪುರಸಭೆ ನಿಯಮಬಾಹಿರವಾಗಿ ಈ ಪ್ರದೇಶದಲ್ಲಿ ಪವರ್‌ ಪ್ರಾಜೆಕ್ಟ್  ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರಿಂದಾಗಿ ಸೇತುವೆ,  ರಸ್ತೆಗೆ ಭಾರೀ ಹಾನಿ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪವರ್‌ ಪ್ರಾಜೆಕ್ಟ್ಗೆ ಅನುಮತಿ ನೀಡಿರುವುದರಿಂದ ಅಪಾಯಕಾರಿಯಾಗಿ ನೀರು ಸಂಗ್ರಹ ಮಾಡಲಾಗುತ್ತಿದ್ದು ಇದರಿಂದಾಗಿ ಸಂಪರ್ಕ ರಸ್ತೆ ಪ್ರತೀ ವರ್ಷ ಕುಸಿಯುವಂತಾಗಿದೆ ಎಂಬುದು ಸ್ಥಳೀಯರ ಆರೋಪ.

ಘನವಾಹನ ಸಂಚಾರ
ಮುಂಡ್ಲಿ ಸೇತುವೆ ಶಿಲಾಲು ಗ್ರಾ. ಪಂ.ಹಾಗೂ ದುರ್ಗಾ ಗ್ರಾ. ಪಂ.ನಡುವೆ ಬರುತ್ತಿದ್ದು  ಇದರ ಎರಡೂ ಕಡೆ ಎಚ್ಚರಿಕೆಯ ನೋಟಿಸ್‌ ಹಾಕಿ ಘನ ವಾಹನ ಸಂಚಾರ ನಿಷೇಧಿಸಿವೆ. ಆದರೆ ಈ ದುರ್ಬಲ ಸೇತುವೆ ಹಾಗೂ ಕುಸಿದ ರಸ್ತೆಯ ಪಕ್ಕವೇ ಘನ ವಾಹನ, ಶಾಲಾ ವಿದ್ಯಾರ್ಥಿಗಳ ವಾಹನಗಳು ನಿತ್ಯ ಸಂಚರಿಸುತ್ತಿವೆ.

Advertisement

 ಅಂದಾಜು ಪಟ್ಟಿ ತಯಾರಿಕೆ 
ಭಾರೀ ಪ್ರವಾಹದಿಂದ ಮುಂಡ್ಲಿ  ಸಂಪರ್ಕ ರಸ್ತೆ ಕುಸಿದಿದ್ದು ಇದಕ್ಕೆ ಶಾಶ್ವತ ಪರಿಹಾರದದ ನಿಟ್ಟಿನಲ್ಲಿ ತಡೆಗೋಡೆ ನಿರ್ಮಿಸಲು ಸುಮಾರು  22.50 ಲ.ರೂ.  ಅಂದಾಜು ಪಟ್ಟಿ ತಯಾರಿಸಿ  ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಡ್ಲಿ  ಸೇತುವೆಯನ್ನು ತಜ್ಞರಿಂದ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
-ಶ್ರೀಧರ ನಾಯಕ್‌,
ಸಹಾಯಕ ಕಾರ್ಯನಿರ್ವಾಹಕ  ಎಂಜಿನಿಯರ್‌, ಕಾರ್ಕಳ

 ಮತ್ತೆ ಕುಸಿದ ರಸ್ತೆ
ಸೇತುವೆಯ ಒಂದು ಪಾರ್ಶ್ವದ ಸಂಪರ್ಕ ರಸ್ತೆಯು ಕುಸಿಯುತ್ತಿದ್ದು ಅಪಾಯಕಾರಿ ಯಾಗಿದೆ.  ತಾತ್ಕಾಲಿಕವಾಗಿ ಅರ್ಧ ಭಾಗಕ್ಕೆ ಮರಳಿನ ಚೀಲ ಇಡಲಾಗಿದೆ. ಆದರೆ ಉಳಿದ ಅರ್ಧ ಭಾಗ ಹಾಗೇ ಇರುವುದರಿಂದ ಮತ್ತೇ ಭಾರೀ ಮಳೆ ಬಂದಲ್ಲಿ ರಸ್ತೆ ಸಂಪೂರ್ಣ ಕುಸಿಯುವ ಸಂಭವವಿದೆ. ರಸ್ತೆ ಕುಸಿದ ಭಾಗದಲ್ಲಿಯೇ ವಿದ್ಯುತ್‌ ಕಂಬಗಳು ಇದ್ದು ಮತ್ತೆ ಮಣ್ಣು ಕುಸಿತಗೊಂಡಲ್ಲಿ ವಿದ್ಯುತ್‌ ಕಂಬ ಉರುಳುವ ಸಾಧ್ಯತೆ ಇದೆ. ರಸ್ತೆ ಕುಸಿದ ಸಂದರ್ಭ ಜಲ್ಲಿ,  ಕಲ್ಲುಗಳನ್ನು ಹಾಕಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ  ಮಾಡಿಕೊಟ್ಟಿದ್ದರು. ಜಿಲ್ಲಾಡಳಿತ 1 ಕೋ. ರೂ. ವೆಚ್ಚದಲ್ಲಿ ಸೇತುವೆ,  ರಸ್ತೆ ದುರಸ್ತಿ  ಮಾಡಿ ಕೊಡುವಂತೆ ಪವರ್‌ ಪ್ರಾಜೆಕ್ಟ್ಗೆ ಆದೇಶ ನೀಡಿದ್ದರೂ ಇದುವರಗೆ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. 
– ಸುಜಿತ್‌ ಕುಮಾರ್‌ , ಮಾಜಿ ತಾ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next