Advertisement

ನೇಪಥ್ಯಕ್ಕೆ ಸರಿದ ಮುಂಡ್ಕೂರು-ಉಳೆಪಾಡಿ ಅಣೆಕಟ್ಟು ಸೇತುವೆ

12:54 AM May 22, 2019 | sudhir |

ಬೆಳ್ಮಣ್‌: ಕಾರ್ಕಳ ತಾಲೂಕಿನ ಮುಂಡ್ಕೂರಿನಿಂದ ಮಂಗಳೂರು ತಾಲೂಕಿನ ಉಳೆಪಾಡಿಯನ್ನು ಸಂಪರ್ಕಿಸುವ ಶಾಂಭವೀ ನದಿಗೆ ಅಡ್ಡಲಾಗಿ ನಿರ್ಮಾಣವಾದ ಕಿರು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ.

Advertisement

ಸೇತುವೆಯ ಅವಶೇಷವೊಂದು ಉಳಿದಿದ್ದು ಇದರ ಮೂಲಕ ಜನ ಮುಂಡ್ಕೂರಿನಿಂದ ಉಳೆಪಾಡಿ ಕಡೆಗೆ ಸರ್ಕಸ್‌ ಮಾಡುತ್ತ ಸಾಗುತ್ತಿದ್ದಾರೆ. ಇಲ್ಲಿ ಯಾವುದೇ ವಾಹನ ಓಡಾಟ ಅಸಾಧ್ಯ. ಕಾಲ್ನಡಿಗೆಯಲ್ಲೇ ಗ್ರಾಮಸ್ಥರು ಸಂಚರಿಸಬೇಕಾಗಿದೆ.

ಎರಡು ಪುಣ್ಯ ಕ್ಷೇತ್ರಗಳಿಗೆ ಕೊಂಡಿ

ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ ಮತ್ತು ಮಂಗಳೂರು ತಾಲೂಕಿನ ಉಳೆಪಾಡಿ ಶ್ರೀ ಉಮಾಮಹೇಶ್ವರೀ ದೇಗುಲ ಮತ್ತು ಬಳ್ಕುಂಜೆಗೆ ಸೇತುವೆ ಇದ್ದರೆ ಹತ್ತಿರದ ಸಂಪರ್ಕ. ಇಲಾಖೆ ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಿದಲ್ಲಿ ಸುತ್ತು ಬಳಸಿ ಹೋಗುವ ಎರಡೂ ಗ್ರಾಮಗಳ ಜನರಿಗೆ ಅನುಕೂಲ.

ಸೇತುವೆಯಿಲ್ಲದೆ ರಸ್ತೆಯೂ ಪ್ರಯೋಜನಕ್ಕಿಲ್ಲ

Advertisement

ಹಿಂದೆ ಇಲ್ಲಿನ ಕೃಷಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಶಾಂಭವೀ ನದಿ ಅಣೆಕಟ್ಟು ನೇಪಥ್ಯಕ್ಕೆ ಸೇರಿದ ಪರಿಣಾಮ ಈ ರಸ್ತೆಯೂ ಪ್ರಾಮುಖ್ಯ ಕಳೆದುಕೊಂಡಿದೆ. ಇದೀಗ ಪಲಿಮಾರು ಮತ್ತು ಸಂಕಲಕರಿಯದ ಅಣೆಕಟ್ಟುಗಳು ಸುವ್ಯವಸ್ಥಿತವಾಗಿವೆ. ಆದ್ದರಿಂದ ಇಲ್ಲಿ ಸೇತುವೆ ನಿರ್ಮಿಸಿ ಮುಂಡ್ಕೂರು ಉಳೆಪಾಡಿಗೆ ಸಂಪರ್ಕ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗ ಇರುವ ಸೇತುವೆ ಬರೀ ಕಾಲ್ನಡಿಗೆಗೆ ಮಾತ್ರ ಉಪಯೋಗವಾಗುತ್ತಿದ್ದು ಸಂಪರ್ಕ ರಸ್ತೆ, ವಾಹನಗಳ ವ್ಯವಸ್ಥೆಯೂ ಇಲ್ಲದೆ ಎರಡು ಗ್ರಾಮಗಳ ಜನ ಪರದಾಟ ನಡೆಸುತ್ತಿದ್ದಾರೆ.

ಸುತ್ತು ಬಳಸಿ ಉಳೆಪಾಡಿ ಸೇರಬೇಕು

ರಸ್ತೆಯ ವ್ಯವಸ್ಥೆ ಇಲ್ಲದ ಪರಿಣಾಮ ಮುಂಡ್ಕೂರು-ಉಳೆಪಾಡಿಗೆ ಪ್ರಯಾಣಿಸುವ ಮಂದಿ ಸುಮಾರು 4ರಿಂದ 5 ಕಿಮೀ ಜನ ಕಾಲ್ನಡಿಗೆ ಮಾಡಬೇಕಾಗಿದೆ.

ಉಳೆಪಾಡಿಯ ಮಂದಿ ಮುಂಡ್ಕೂರಿಗೆ ಬರಲು ಏಳಿಂಜೆ, ಸಂಕಲಕರಿಯ ಮೂಲಕ ಸುತ್ತು ಬಳಸಿ ಹಣದ ಜತೆ ಶ್ರಮ ಖರ್ಚು ಮಾಡಬೇಕಾಗಿದೆ. ಆದ್ದರಿಂದ ಸೇತುವೆ-ರಸ್ತೆ ನಿರ್ಮಾಣ ಅನಿವಾರ್ಯವಾಗಿದೆ.

ಶಾಸಕದ್ವಯರತ್ತ ಜನರ ಚಿತ್ತ

ಈ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಲು ಮೂಡುಬಿದಿರೆ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕದ್ವಯರು ಮನಸ್ಸು ಮಾಡಬೇಕಾಗಿದೆ.

ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್‌ ಹಾಗೂ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್‌ ಯೋಜನೆ ರೂಪಿಸಿ, ಅನುದಾನ ಬಿಡುಗಡೆಗೆ ಶ್ರಮಿಸಬೇಕಾಗಿದೆ. ಅಣೆಕಟ್ಟಿನ ಅಗತ್ಯ ಇದೀಗ ಇಲ್ಲವಾದ್ದರಿಂದ ಭದ್ರವಾದ ಸೇತುವೆ ನಿರ್ಮಿಸಿದಲ್ಲಿ ಸಹಸ್ರಾರು ಮಂದಿಗೆ ಪ್ರಯೋಜನವಾದೀತು ಎಂಬುದು ಗ್ರಾಮಸ್ಥರ ಆಶಯ.

– ಶರತ್ ಶೆಟ್ಟಿ ಮುಂಡ್ಕೂರ್

Advertisement

Udayavani is now on Telegram. Click here to join our channel and stay updated with the latest news.

Next