Advertisement

ಮುಂಡ್ಕೂರು: ಕಸ ವಿಲೇವಾರಿ ಜತೆ ಆದಾಯ ತರಬಲ್ಲ ವಿಶೇಷ ಯೋಜನೆ

09:22 PM Nov 26, 2019 | mahesh |

ಬೆಳ್ಮಣ್‌: ವರ್ಷದ ಹನ್ನೆರಡು ತಿಂಗಳೂ ಇಡೀ ಗ್ರಾ.ಪಂ.ಗೆ ಕುಡಿಯುವ ನೀರು ಪೂರೈಸಿ ಭೇಷ್‌ ಎನಿಸಿರುವ ಮುಂಡ್ಕೂರು ಗ್ರಾ.ಪಂ. ಆಡಳಿತ ಕಸ ವಿಲೇವಾರಿಯಲ್ಲಿಯೂ ಒಂದು ಹೆಜ್ಜೆ ಮುಂದೆ ಹೋಗಿದೆ. ಸ್ವಚ್ಛ ಭಾರತ ಪರಿಕಲ್ಪನೆಯ ಕೂಗು ರಾಷ್ಟ್ರ ವ್ಯಾಪಿಯಾಗಿ ಕೇಳಿ ಬರುತ್ತಿದ್ದು ಕೆಲವೆಡೆ ಈ ಆಂದೋಲನ ಕೇವಲ ಘೋಷಣೆ, ಪ್ರಚಾರಗಳಿಗೆ ಸೀಮಿತವಾಗಿದ್ದರೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದಲ್ಲಿ ಈ ಕ್ರಾಂತಿಯನ್ನು ಅಕ್ಷರಶಃ ನಿಜ ವಾಗಿಸುವ‌ತ್ತ ಮುನ್ನುಡಿ ಬರೆಯಲಾಗಿದೆ.

Advertisement

ಇಲ್ಲಿನ ಗ್ರಾ.ಪಂ. ನೇತೃತ್ವದ ಸ್ವಚ್ಛತಾ ಆಂದೋಲನದ ಬಗ್ಗೆ ವಿಶೇಷ ತರಬೇತಿ ಹೊಂದಿದ 4 ಮಹಿಳೆ ಹಾಗೂ ಓರ್ವ ಪುರುಷರ‌ನ್ನೊಳಗೊಂಡ ತಂಡವೊಂದು ಇಡೀ ಗ್ರಾ.ಪಂ. ವ್ಯಾಪ್ತಿಯ ತ್ಯಾಜ್ಯಗಳನ್ನು ಕಲೆ ಹಾಕಿ ಒಣ ಕಸ, ಹಸಿಕಸಗಳೆಂದು ಬೇರ್ಪಡಿಸಿ ವಿಲೇವಾರಿಗೊಳಿಸುವ ಜತೆಗೆ ಮಾರಾಟ ಮಾಡಿ ಪಂಚಾಯತ್‌ಗೆ ಆದಾಯ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ.

ಯೋಚನೆ ಹುಟ್ಟಿಕೊಂಡ ರೀತಿ
ಪಂಚಾಯತ್‌ನ ಹಿಂದಿನ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಅವರು ತಮ್ಮ ಅವಧಿಯಲ್ಲಿ ಈ ಕ್ರಾಂತಿಕಾರಿ ಆಂದೋಲನಕ್ಕೆ ಮುನ್ನುಡಿ ಬರೆದಿದ್ದು ಅಂದು ಪಂಚಾಯತ್‌ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಹಾಲು ಸೊಸೈಟಿ, ಯುವಕ ಮಂಡಲ, ಮಹಿಳಾ ಮಂಡಲಗಳ ಪ್ರತಿನಿಧಿಗಳಿಗೆ ಕಸ ವಿಲೇವಾರಿ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಕಸ ಕಾಪಾಡಲು ತೊಟ್ಟಿಯನ್ನೂ ನೀಡಿದ್ದರು. ಇದರಲ್ಲಿ ಸಂಗ್ರಹವಾದ ಕಸವನ್ನು ಪಂಚಾಯತ್‌ ಮೂಲಕ ವಿಲೇವಾರಿಗೊಳಿಸಿದ್ದರು. ಆದರೆ ಈ ಬಾರಿ ಹಾಲಿ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ಇನ್ನೂ ಒಂದು ಹೆಜ್ಜೆ ಮುಂದುವರಿದು ಪಂಚಾಯತ್‌ ಸದಸ್ಯರು, ಅಭಿವೃದ್ಧಿ ಆಧಿಕಾರಿಗಳ ಸಹಕಾರದಿಂದ ಪಂಚಾಯತ್‌ ವ್ಯಾಪ್ತಿಯ ಕಸ ವಿಲೇವಾರಿಗೆ ಹೊಸ ಸ್ಪರ್ಶ ಕೊಟ್ಟು ಇತರ ಪಂಚಾಯತ್‌ಗಳಿಗೆ ಮಾದರಿಯೆನಿಸುವ ರೀತಿಯಲ್ಲಿ ಗಮನ ಸೆಳೆದಿದ್ದಾರೆ.

ಯೋಜನೆಯ ಸ್ವರೂಪ
ಘನ, ದ್ರವ ಸಂಪನ್ಮೂಲ ನಿರ್ವಹಣೆಯ ಹೆಸರಿನ ಈ ವಿನೂತನ ಯೋಜನೆ ಕಸ ವಿಲೇವಾರಿಗೆಂದೇ ಆರಂಭಗೊಡಿದೆ. ಈ ಯೋಜನೆಗೆ ಪಂಚಾಯತ್‌ ವತಿಯಿಂದ 4 ಮಂದಿಯನ್ನು ಮಣಿಪಾಲ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡಲಾಗಿದ್ದು ತರಬೇತಿ ಪಡೆದವರಿಗೆ ಪಂಚಾಯತ್‌ ಬಳಿಯ ಕಟ್ಟಡದಲ್ಲಿ ಕಸ ಸಂಗ್ರಹಕ್ಕಾಗಿ ಕಟ್ಟಡ ನೀಡಲಾಗಿದೆ. ಗ್ರಾಮದ ಪ್ರತೀ ಮನೆ, ವಾಣಿಜ್ಯ ಸಂಕೀರ್ಣ, ಅಂಗಡಿಗಳಿಗೆ ಒಣಕಸ, ಹಸಿಕಸಗಳ ಪ್ರತ್ಯೇಕ ಸಂಗ್ರಹಕ್ಕಾಗಿ ಬಕೆಟ್‌ ನೀಡಲಾಗಿದ್ದು ಪಂಚಾಯತ್‌ನ ವತಿಯಿಂದ ಖರೀದಿಸಲಾದ ಟೆಂಪೋ ಮೂಲಕ ಬೆಳಗ್ಗೆ, ಮಧ್ಯಾಹ್ನ ಕಸಗಳ ಸಂಗ್ರಹ ನಡೆಸಲಾಗುತ್ತಿದೆ. ಹಾಲು, ಎಣ್ಣೆ ಮತ್ತಿನ್ನಿತರ ಸಂಗ್ರಹದ ಪ್ಲಾಸ್ಟಿಕ್‌ ತೊಟ್ಟೆಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಲಾಗುತ್ತಿದೆ. ಈ ತಟ್ಟೆಗಳು ಡೀಸೆಲ್‌ ತಯಾರಿಕೆಗೆ ಪೂರಕವೆಂದು ತರಬೇತಿ ಹೊಂದಿದವರು ತಿಳಿಸಿದರು. ಉಳಿದಂತೆ ಮೊಟ್ಟೆಯ ಚಿಪ್ಪು, ನಿಂಬೆಯ ತ್ಯಾಜ್ಯ, ಗೆರಟೆಯಂತಹ 36 ವಸ್ತುಗಳನ್ನು ಮತ್ತೆ ಬಳಸುವ ವಸ್ತುಗಳಿಗೆ ಕರಗಿಸಿ ಹಾಕಲಾಗುತ್ತದೆ. ಆದ್ದರಿಂದ ಇಲ್ಲಿ ಎಲ್ಲವೂ “ಕಸದಿಂದ ರಸ’ ಎಂಬಂತಿದೆ. ಇಲ್ಲಿ ಶೇಖರಿಸಿ ಸ್ವಚ್ಛಗೊಳಿಸಿದ ತ್ಯಾಜ್ಯಗಳನ್ನು ಮುಂಡ್ಕೂರು ಕಜೆಯ ಖಾಲಿ ಶಾಲೆಯ ಕೋಣೆಗಳಲ್ಲಿ ಸಂಗ್ರಹಿಸಲಾಗಿದೆ. ಈ ಯೋಜನೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸ್ವರೂಪ ಪಡೆಯಲಿದ್ದು ಪಂಚಾಯತ್‌ಗೆ ಆದಾಯವೂ ಲಭ್ಯವಾಗಲಿದೆ.

ಧ್ವನಿವರ್ಧಕದ ಮೂಲಕ ಘೋಷಣೆ
ಬೆಳಗ್ಗೆ ಸಾರ್ವಜನಿಕರು ತಮ್ಮ ಕರ್ತವ್ಯಗಳಿಗೆ ತೆರಳುವ ಹೊತ್ತಿಗೆ ಟೆಂಪೋ ಚಾಲಕ ಚಂದ್ರಶೇಖರ್‌ ಅವರು ತಮ್ಮ ತಂಡದ ಇತರರಾದ ಕುಶಲ, ಪ್ರಜ್ವಲ, ಪ್ರಪುಲ್ಲಾ ಅವರ ಜತೆ ಟೆಂಪೋದಲ್ಲಿ ಅಳವಡಿಸಲಾದ ಧ್ವನಿವರ್ಧಕದ ಮೂಲಕ ಸ್ವಚ್ಛ ಭಾರತದ ಘೋಷಣೆಗಳೊಂದಿಗೆ ಕಸಾನ್ವೇಷಣೆಯಲ್ಲಿ ತೊಡಗುತ್ತಾರೆ. ಬೆಳಗ್ಗೆ ಮತ್ತು ಮಧ್ಯಾಹ್ನ ಟೆಂಪೋ ಮೂಲಕ ಕಸ ಸಂಗ್ರಹಿಸುವ ತಂಡದಲ್ಲಿನ ಧ್ವನಿವರ್ಧಕದ ಘೋಷಣೆ “ನಮ್ಮ ಕಸ, ನಮ್ಮ ಜವಾಬ್ದಾರಿ’.

Advertisement

ಉತ್ತಮ ಸ್ವರೂಪ ನೀಡುವ ಯೋಚನೆ
ಈ ಯೋಜನೆಗೆ ಇನ್ನಷ್ಟು ಉತ್ತಮ ಸ್ವರೂಪ ನೀಡುವ ಅಗತ್ಯ ಮತ್ತು ಯೋಚನೆ ಇದೆ.
-ಶಶಿಧರ ಆಚಾರ್ಯ, ಪಿಡಿಒ, ಮುಂಡ್ಕೂರು ಗ್ರಾ.ಪಂ.

ಮುಖ್ಯ ಗುರಿ
ಮುಂಡ್ಕೂರು ಗ್ರಾಮವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸುವುದರ ಜತೆಗೆ ಭಾರತದ ಪ್ರಧಾನಿಯವರ ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳಿಸುವುದು ನಮ್ಮ ಮುಖ್ಯ ಗುರಿ.
-ಉಷಾ ಎಸ್‌.ಕುಲಾಲ್‌ , ತರಬೇತಿ ಹೊಂದಿದ ತಂಡದ ಸದಸ್ಯೆ

ಸಹಕಾರದ ಅಗತ್ಯ
ಈ ಆಂದೋಲನಕ್ಕೆ ಮುಂದಿನ ದಿನಗಳಲ್ಲಿ ಇಲಾಖೆ ಕೋಟಿಗಟ್ಟಲೆ ಅನುದಾನ ನೀಡಲಿದ್ದು ಯೋಜನೆಯ ಯಶಸ್ವಿಗೆ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಸ್ವಚ್ಛತೆ ಕೇವಲ ಪಂಚಾಯತ್‌ನ ಜವಾಬ್ದಾರಿಯಲ್ಲ, ಅಲ್ಲದೆ ಕಸ ನಿರ್ವಹಣೆಯೂ ತಂಡದ ಜವಾಬ್ದಾರಿಯಲ್ಲ, ಬದಲಾಗಿ ಇಡೀ ಸಮಾಜದ ಜವಾಬ್ದಾರಿ.
-ಶುಭಾ ಪಿ.ಶೆಟ್ಟಿ , ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ

ಇತರರಿಗೆ ಆದರ್ಶ
ಈಗಾಗಲೇ ನೀರು ಪೂರೈಕೆಯಲ್ಲಿ ತಾಲೂಕಿನಲ್ಲಿಯೇ ಉತ್ತಮ ಪಂಚಾಯತ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪಂಚಾಯತ್‌ನ ಕಸ ವಿಲೇವಾರಿಯ ಯೋಜನೆ ಇತರ ಪಂಚಾಯತ್‌ಗಳಿಗೆ ಆದರ್ಶ. ತ್ಯಾಜ್ಯಮುಕ್ತ ಗ್ರಾಮವನ್ನಾಗಿಸುವ ಜವಾಬ್ದಾರಿ ಹೊತ್ತ ಪಂಚಾಯತ್‌ಗೆ ಹಾಗೂ ಒಂದಿಷ್ಟೂ ಅಳುಕು ಹೇಸಿಗೆಗಳಿಲ್ಲದೆ ಕಸ ಸಂಗ್ರಹಿಸುತ್ತಿರುವ 5 ಮಂದಿಯ ತಂಡಕ್ಕೆ ಶಹಬ್ಟಾಸ್‌ ಎನ್ನಲೇ ಬೇಕು.
-ಗಿರಿಧರ ಪ್ರಭು, ಗ್ರಾಮಸ್ಥ

- ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next