Advertisement

ಬ್ರಿಟಿಷರನ್ನು ನಡುಗಿಸಿದ್ದ ಮುಂಡರಗಿ ಭೀಮರಾವ್‌

10:38 PM Aug 10, 2021 | Team Udayavani |

1857, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸ್ಮರಣೀಯ ವರುಷ. ಲಕ್ಷಾಂತರ ಜನ ತಮ್ಮೆಲ್ಲ ಭೇದ ಭಾವ ತೊರೆದು, ದಾಸ್ಯದ ನೊಗವನ್ನು ಕಿತ್ತೂಗೆಯಲು ಮೈ ಕೊಡವಿ ನಿಂತ ವರ್ಷ. ಈ ಹೋರಾಟದಲ್ಲಿ ರಾಜ – ಮಹಾ­ರಾಜರು ಮಾತ್ರವಲ್ಲ, ಸಾಮಾನ್ಯ ವ್ಯಕ್ತಿಗಳೂ ಬಲಿದಾನ ಮಾಡಿದರು. ಅಂಥವರಲ್ಲಿ ಮುಂಡರಗಿ ಭೀಮರಾಯ (ಮುಂಡರಗಿ ಭೀಮರಾವ್‌) ಕೂಡ ಒಬ್ಬ.

Advertisement

ಈ ಭೀಮರಾವ್‌ ಅವರ ತಾತನ ಹೆಸರು ಮೊಂಡಗೈ ಭೀಮರಾಯ. ಈತ ಡಂಬಳದ ದೇಸಾಯಿಯವರ ಸಂಸ್ಥಾನದಲ್ಲಿ ಸಚಿವನಾಗಿದ್ದ. ಭೀಮರಾಯನ ತಂದೆ ರಂಗರಾಯ, ಪೇಶ್ವೆಯ ಕೈಕೆಳಗೆ ಅಧಿಕಾರಿ ಯಾಗಿದ್ದ. ಇಂಥ ಕುಟುಂಬದ ಕುಡಿಯಾದ ಭೀಮರಾಯ, ಶೂರ, ಸಾಹಸಿ, ಅಪ್ರತಿಮ ಬೇಟೆಗಾರ ಎಂದೆಲ್ಲ ಹೆಸರಾಗಿದ್ದ. ಕನ್ನಡ, ಮರಾಠಿ ಹಾಗೂ ಇಂಗ್ಲಿಷ್‌ನಲ್ಲಿ ವ್ಯವಹರಿಸಲೂ ತಿಳಿದಿದ್ದ.

ಅದೊಮ್ಮೆ ಬೇಟೆಯ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕಲೆಕ್ಟರ್‌ ಆಗಿದ್ದ ಬ್ರಿಟಿಷ್‌ ಅಧಿಕಾರಿಯ ಜೀವ ಉಳಿಸಿದ. ಇದಕ್ಕೆ ಕೃತಜ್ಞತೆಯ ರೂಪದಲ್ಲಿ ಭೀಮರಾಯನಿಗೆ ಕೊಪ್ಪಳದಲ್ಲಿ ತಹಶೀಲ್ದಾರ್‌ ಹುದ್ದೆಯನ್ನು ಆ ಆಂಗ್ಲ ಅಧಿಕಾರಿ ಕೊಡಿಸುತ್ತಾನೆ. ಮುಂದೆ ಜನಪರ ಕೆಲಸಗಳಿಂದ ಎಲ್ಲರ ವಿಶ್ವಾಸ ಗಳಿಸುವ ಭೀಮರಾವ್‌, ಮುಂದೆ ಬಳ್ಳಾರಿಯ ಮಾಮಲೇದಾರನಾಗಿ ಭಡ್ತಿ ಪಡೆಯುತ್ತಾನೆ.

ಹೀಗೆ ಆರಂಭದಲ್ಲಿ ಬ್ರಿಟಿಷರ ನೆಚ್ಚಿನ, ನಿಷ್ಠಾವಂತ ಅಧಿಕಾರಿಯಾಗಿದ್ದ ಮುಂಡರಗಿ ಭೀಮರಾವ್‌, ಅನಂತರ ಬ್ರಿಟಿಷರ ವಿರುದ್ಧವೇ ಯುದ್ಧ ಸಾರಲು ಕಾರಣವಾದ ಸಂದರ್ಭ ಒದಗಿ ಬಂದದ್ದು ಹೀಗೆ: ಆ ದಿನಗಳಲ್ಲಿ, ಭಾರತೀಯರನ್ನು ಕಂಡರೆ ಬ್ರಿಟಿಷ್‌ ಅಧಿಕಾರಿಗಳಿಗೆ ತಿರಸ್ಕಾರವಿತ್ತು. ಸಮಯ ಸಿಕ್ಕಾಗಲೆಲ್ಲ ಅವರು ಭಾರತೀಯರನ್ನು ಕಾಡುತ್ತಿದ್ದರು, ಅವಮಾನಿಸುತ್ತಿದ್ದರು, ಟೀಕಿಸುತ್ತಿದ್ದರು. ಇದನ್ನೆಲ್ಲ  ನೋಡುವಷ್ಟು ದಿನವೂ ನೋಡಿದ ಭೀಮರಾವ್‌, ಕಡೆಗೊಮ್ಮೆ ಬ್ರಿಟಿಷ್‌ ಅಧಿಕಾರಿಗಳ ವರ್ತನೆಯನ್ನು ಗಟ್ಟಿಯಾಗಿ ಆಕ್ಷೇಪಿಸತೊಡಗಿದ. ತಮ್ಮ ಕೈಕೆಳಗೆ ಕೆಲಸ ಮಾಡುವ ಭಾರತೀಯನೊಬ್ಬ ತಮ್ಮ ವಿರುದ್ಧ ಮಾತಾಡುವುದನ್ನು ಕಂಡು ಬ್ರಿಟಿಷ್‌ ಅಧಿಕಾರಿಗಳು ಸಿಟ್ಟಾದರು. ಭೀಮರಾಯನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅವನನ್ನು ಕೆಲಸದಿಂದ ತೆಗೆದುಹಾಕಿದರು.

ಸ್ವಾತಂತ್ರ್ಯ ಸಾಧನೆಗಾಗಿ ತಹತಹಿಸುತ್ತಿದ್ದ ಭೀಮರಾವ್‌, ಅಂದಿನಿಂದಲೇ ಬ್ರಿಟಿಷ್‌ ಆಡಳಿತವನ್ನು ನಿರ್ಮೂಲನೆ ಮಾಡಲು ಪಣತೊಟ್ಟ. ಬ್ರಿಟಿಷರ ವಿರುದ್ಧ ಹೋರಾಡಲು ಹವಣಿಸುತ್ತಿದ್ದ ಸೊರಟೂರು ದೇಸಾಯಿ, ಹಮ್ಮಿಗೆ ಕೆಂಚನಗೌಡ, ಡಂಬಳದ ದೇಶಮುಖ್‌, ಗೋವಿನಕೊಪ್ಪದ ದೇಸಾಯಿ-ಮುಂತಾದವರ ಸಂಪರ್ಕ ಸಾಧಿಸಿದ. ಆಯಕಟ್ಟಿನ ಜಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟ. ನಂಬಿಗಸ್ತರ ತಂಡ ಕಟ್ಟಿಕೊಂಡ.

Advertisement

ಅಧಿಕಾರಿಯಾಗಿದ್ದ ದಿನದಿಂದಲೂ ಭೀಮರಾಯ ಜನರ ವಿಶ್ವಾಸ ಗಳಿಸಿದ್ದ. ಕೊಪ್ಪಳ ಸೀಮೆಯಲ್ಲಂತೂ ಇವನ ಪ್ರಭಾವ ಅಪಾರವಾಗಿತ್ತು. ಇದನ್ನು ಗಮನಿಸಿದ್ದ ಬ್ರಿಟಿಷರು, ಭೀಮರಾವ್‌ನ ಪ್ರಯತ್ನಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕಲು ಮುಂದಾದರು. ಡಂಬಳದಲ್ಲಿದ್ದ ಬ್ರಿಟಿಷ್‌ ಅಧಿಕಾರಿ, ಹಮ್ಮಿಗೆಯ ಕೆಂಚಿನ ಗೌಡನ ಮನೆಯನ್ನು ಮುತ್ತಿ, ಮದ್ದುಗುಂಡುಗಳನ್ನು ವಶಪಡಿಸಿಕೊಂಡ. ತನ್ನ ಗುಪ್ತಕಾರ್ಯ ಬೆಳಕಿಗೆ ಬಂದುದನ್ನು ಗಮನಿಸಿದ ಭೀಮರಾಯ, ನೇರ ಕಾರ್ಯಾಚರಣೆ ಆರಂಭಿಸಿದ, ರೈತ ಜನರಿಗೆ ಕ್ರಾಂತಿತಣ್ತೀ  ಸಾರಿದ. ಬ್ರಿಟಿಷ್‌ ಸರಕಾರಕ್ಕೆ ಕಂದಾಯ ಕೊಡಬೇಡಿರೆಂದು ಹೇಳಿದ. ನರಗುಂದದ ದೇಸಾಯಿ, ಆನೆಗೊಂದಿಯ ಅರಸರಿಗೆ ಪತ್ರ ಬರೆದು, ಬ್ರಿಟಿಷರ ವಿರುದ್ಧದ ತನ್ನ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡ. ಮೊದಲು ಭೀಮರಾಯ ಮತ್ತು ಕೆಂಚನಗೌಡ ಡಂಬಳವನ್ನು ಮುತ್ತಿ ಆ ನಗರವನ್ನು ಸೂರೆ ಮಾಡಿದರು. ಭೀಮರಾಯ ಅಲ್ಲಿಂದ ಗದಗಕ್ಕೆ, ಅನಂತರ ಕೊಪ್ಪಳಕ್ಕೆ ನಡೆದ.

ಈ ಸುದ್ದಿ ಬ್ರಿಟಿಷರಿಗೆ ಮುಟ್ಟಿತು. ಅವರೂ ಸಿದ್ಧರಾದರು. ಇದರ ಪರಿಣಾಮ ಧಾರವಾಡ, ಬಳ್ಳಾರಿ, ರಾಯಚೂರು ಕಡೆಗಳಿಂದ ಬ್ರಿಟಿಷ್‌ ಸೈನ್ಯಗಳು ಕೊಪ್ಪಳದ ಕಡೆ ಧಾವಿಸಿದವು. ಹೈದರಾಬಾದಿನಿಂದ ಟೇಲರ್‌ ಸಾಹೇಬನ ನೇತೃತ್ವದಲ್ಲಿ ಒಂದು ದಳ ಬಂತು. ಮೇಜರ್‌ ಹೋಗನ್‌ ನೇತೃತ್ವದಲ್ಲಿದ್ದ ಬ್ರಿಟಿಷ್‌ ಸೈನ್ಯ ಕೊಪ್ಪಳದ ಕೋಟೆ ಸುತ್ತುವರಿದು, ಶರಣಾ­ಗುವಂತೆ ಭೀಮರಾಯನಿಗೆ ಆಜ್ಞೆ ಮಾಡಿತು (31-5-1858). ಆದರೆ ಭೀಮರಾಯ ಯುದ್ದಕ್ಕೇ ಸಿದ್ಧನಾದ. ಉಭಯ ಸೈನ್ಯಗಳಿಗೂ ಘೋರ ಯುದ್ಧ­ವಾಯಿತು. ಕೆಲವು ವಂಚಕರ ಸಹಾಯದಿಂದ ಬ್ರಿಟಿಷ್‌ ಸೈನ್ಯ ಕೋಟೆಯೊಳಗೂ ನುಗ್ಗಿತು. ಭೀಮರಾಯ ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಅಸುನೀಗಿದ.

Advertisement

Udayavani is now on Telegram. Click here to join our channel and stay updated with the latest news.

Next