Advertisement

ಪಾಲಿಕೆ ಆಡಳಿತ ನಿಷ್ಕ್ರಿಯ: ಶೆಟ್ಟರ ಆರೋಪ

01:02 PM Jun 10, 2019 | Suhan S |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಆಡಳಿತ 2-3 ತಿಂಗಳಿನಿಂದ ನಿಷ್ಕ್ರಿಯವಾಗಿದ್ದು, ಪಾಲಿಕೆ ಆಯುಕ್ತರ ಸಹಿ ಆಗದೆ ಶಾಸಕರ, ಸಂಸದರ ಅನುದಾನದ 54 ಕಾಮಗಾರಿಗಳ ಫೈಲ್ಗಳು ಬಾಕಿ ಉಳಿದಿವೆ. ಹೀಗಾಗಿ ಅವಳಿ ನಗರದಲ್ಲಿ ರಸ್ತೆ, ಬೀದಿ ದೀಪ ಸೇರಿದಂತೆ ಯಾವುದೇ ಕಾಮಗಾರಿಗಳು ಆಗುತ್ತಿಲ್ಲವೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೇಸರ ವ್ಯಕ್ತಪಡಿಸಿದರು.

Advertisement

ಗೋಕುಲ ರಸ್ತೆ ಜಯಪ್ರಕಾಶ ನಗರದ ರಂಗಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಉತ್ತಮ ಕೆಲಸಗಳು ಆಗಲು ಸ್ಥಳೀಯ ಸಂಸ್ಥೆಯ ಮುಖ್ಯಸ್ಥ ಉತ್ತಮವಾಗಿರಬೇಕು. ಆದರೆ ಈಗಿನ ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ ಯಾವುದೇ ಕಾಮಗಾರಿಗಳ ಫೈಲ್ಗೆ ಸಹಿ ಮಾಡುತ್ತಿಲ್ಲ. ಯಾರಾದರೂ ಕೇಳಿದರೆ ನಾನು ಚುನಾವಣೆಗೆ ಮಾತ್ರ ಬಂದಿದ್ದೇನೆ. ಹೀಗಾಗಿ ಯಾವುದೇ ಫೈಲ್ಗೆ ಸಹಿ ಮಾಡಲ್ಲ, ಕೆಲಸ ಮಾಡಲ್ಲವೆಂದು ನಿಷ್ಕಾಳಜಿ ತೋರುತ್ತಿದ್ದಾರೆ. ಈಗ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡಿದೆ. ಆದರೂ ಅವಳಿ ನಗರದಲ್ಲಿ ಸಣ್ಣ-ಪುಟ್ಟ ಕೆಲಸ ಸೇರಿದಂತೆ ಯಾವುದೇ ಕಾಮಗಾರಿಗಳು ಆಗುತ್ತಿಲ್ಲ ಎಂದರು.

ಬೀದಿದೀಪ, ರಸ್ತೆ, ಒಳಚರಂಡಿ ಸೇರಿದಂತೆ ತುರ್ತಾಗಿ ಅವಶ್ಯವಿರುವ ಕೆಲಸಗಳಿದ್ದರೆ ಗಮನಕ್ಕೆ ತಂದರೆ 14ನೇ ಹಣಕಾಸು ಯೋಜನೆಯಡಿ ತಕ್ಷಣ ಅವನ್ನು ಕೈಗೆತ್ತಿಕೊಳ್ಳಲಾಗುವುದು. ಈ ರೀತಿಯ ಜನಸ್ಪಂದನ ಸಭೆಗಳನ್ನು ವಾರ್ಡ್‌ವಾರು ನಡೆಸಿದರೆ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳಲು. ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅವಳಿ ನಗರದಲ್ಲಿ ರಸ್ತೆಗಳು ಸಹಿತ ಸ್ಮಾರ್ಟ್‌ ರಸ್ತೆಗಳು ನಿರ್ಮಾಣವಾಗುತ್ತಿವೆ. ಸಿಆರ್‌ಎಫ್‌ ಅಡಿ ಆನಂದನಗರದಿಂದ ಆರ್‌.ಎನ್‌. ಶೆಟ್ಟಿ ರಸ್ತೆ, ರವಿನಗರ ಮಾರ್ಗವಾಗಿ ತೋಳನಕೆರೆ ವರೆಗಿನ ಸಿಸಿ ರಸ್ತೆಯ ನಿರ್ಮಾಣಕ್ಕೆ ಟೆಂಡರ್‌ ಅಂತಿಮಗೊಂಡಿದೆ. ಇನ್ನು 2 ತಿಂಗಳಲ್ಲಿ ಈ ಕಾಮಗಾರಿ ಆರಂಭಗೊಳ್ಳಲಿದೆ. ಆಗ ತುದಿಯಿಂದ ತುದಿಗೆ ರಸ್ತೆ, ಗಟಾರ, ಪಾದಚಾರಿ ಮಾರ್ಗ ಆಗಲಿದೆ. ಕೇಂದ್ರ ಸರಕಾರದಿಂದ ತರಬೇಕಾದ ಎಲ್ಲ ನೆರವನ್ನು ಅವಳಿ ನಗರಕ್ಕೆ ತರಲಾಗಿದೆ. ಇದರಿಂದ ಹು-ಧಾ ಉತ್ತಮ ಅಭಿವೃದ್ಧಿ ಆಗುತ್ತಿದೆ ಎಂದರು.

ಲೋಕೋಪಯೋಗಿ ಹಣದಲ್ಲಿ ನಗರದ ಒಳ ರಸ್ತೆಗಳನ್ನು ನಿರ್ಮಿಸಲಾಗುವುದು. ಇನ್ನಿತರೆ ಯೋಜನೆಗಳಡಿ ನಗರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುವುದು. ಇನ್ನು ಒಂದೆರಡು ವರ್ಷಗಳಲ್ಲಿ ನಗರದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ ಎಂದು ತಿಳಿಸಿದರು.

Advertisement

ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಯಪ್ರಕಾಶ ನಗರ, ಪತ್ರಾಜನಗರದ ಬಹುತೇಕರು ಬೀದಿದೀಪ, ರಸ್ತೆ, ಒಳಚರಂಡಿ ಸಮಸ್ಯೆ ಹೆಚ್ಚಾಗಿದೆ. ಕೆಲಸಗಳು ಆಗುತ್ತಿಲ್ಲ. ಪೊಲೀಸರು ದ್ವಿಚಕ್ರ ವಾಹನಗಳ ಸವಾರರ ಮೇಲೆ ಮಾತ್ರ ಇನ್ನಿಲ್ಲದ ನೆಪ ಹೇಳಿ ದಂಡ ಹಾಕುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ರಾಘವೇಂದ್ರ ರಾಮದುರ್ಗ, ಶಿವರುದ್ರಪ್ಪ ಬಡಿಗೇರ, ಜಿ.ಎನ್‌. ಹೂಗಾರ, ಸಿ.ಎಸ್‌. ಪೊಲೀಸ್‌ ಪಾಟೀಲ, ಶ್ರೀಮತಿ ಕಾಮತ, ಪಲ್ಲವಿ ಕುಲ್ಲೂರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next