Advertisement

ಕುಷ್ಟಗಿ: ಪುರಸಭೆ ಅಧೀನದಲ್ಲಿರುವ ಕಲ್ಯಾಣ ಮಂಟಪ ಜವಳಿ ಅಂಗಡಿಗೆ ಬಾಡಿಗೆ; ಸಾರ್ವಜನಿಕರ ಆಕ್ರೋಶ

02:39 PM Jan 29, 2022 | Team Udayavani |

ಕುಷ್ಟಗಿ: ಕುಷ್ಟಗಿ ಪಟ್ಟಣದ ಪುರಸಭೆ ಅಧೀನದ ಡಾ.ರಾಜಕುಮಾರ ಕಲ್ಯಾಣ ಮಂಟಪವನ್ನು ಖಾಸಗಿ ಜವಳಿ ಅಂಗಡಿಗೆ ದಿನಕ್ಕೆ 500 ರೂ. ನಂತೆ ಬಾಡಿಗೆ ನೀಡಿರುವುದು ಬೆಳಕಿಗೆ ಬಂದಿದೆ.

Advertisement

ಪಟ್ಟಣದ 6ನೇ ವಾರ್ಡ್ ನಲ್ಲಿರುವ ಡಾ.ರಾಜಕುಮಾರ ಕಲ್ಯಾಣ ಮಂಟಪ ಕೆ.ಶರಣಪ್ಪ‌ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಕಲ್ಯಾಣ ಮಂಟಪ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಅಡಿಯಲ್ಲಿ ನಿರ್ಮಿಸಲಾಗಿತ್ತು.12ನೇ ಏಪ್ರಿಲ್ 2006ರಲ್ಲಿ ಡಾ. ರಾಜಕುಮಾರ ನಿಧನದ ಹಿನ್ನೆಲೆಯಲ್ಲಿ ಸದರಿ ಕಲ್ಯಾಣ ಮಂಟಪಕ್ಕೆ ಡಾ.ರಾಜಕುಮಾರ ನಾಮಕರಣ ಮಾಡಲಾಗಿತ್ತು.ಇದಾದ ಬಳಿಕ ಸದರಿ ಕಲ್ಯಾಣ ಮಂಟಪದಲ್ಲಿ ಸಭೆ,ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು ನಂತರದ ದಿನಮಾನಗಳಲ್ಲಿ ನಿರ್ಲಕ್ಷೆ ಮುಂದುವರಿದಿದ್ದರಿಂದ ಅನೈತಿಕ ಚಟುವಟಿಕೆಗಳ ತಾಣ ಹಾಗೂ ನಿರಂತರ ಕುಡುಕರ ಅಡ್ಡೆಯಾಗಿ ಬದಲಾಗಿತ್ತು.

ಡಾ.ರಾಜಕುಮಾರ ಅಭಿಮಾನಿಗಳ‌‌ ಸಂಘ‌ ಸೇರಿದಂತೆ ದುರಸ್ಥಿ ಹಾಗೂ ಹಲವು ಸಂಘಟನೆಗಳು ಪ್ರತಿಭಟನೆಯಿಂದಾಗಿ ಎಚ್ಚೆತ್ತುಕೊಂಡ ಪುರಸಭೆ 8 ಲಕ್ಷ ರೂ. ಅನುದಾನ ದಲ್ಲಿ ದುರಸ್ಥಿಗೆ ಕ್ರಮ ಕೈಗೊಂಡಿದ್ದು ಈ ಅನುದಾನದಲ್ಲಿ ಕಲ್ಯಾಣ ಮಂಟಪ ದುರಸ್ಥಿಯ ಕನಸು ಕಂಡಿದ್ದವರಿಗೆ ಶಾಕ್ ಆಗಿದೆ.

ಕಲ್ಯಾಣ ಮಂಟಪದ ಹೆಸರು ಆಳಿಸಿ ಹಾಕಿದ್ದಾರೆ. ಸುಣ್ಣ ಬಣ್ಣ ಹಚ್ಚಿದ್ದು, ಬಟ್ಟೆ ಅಂಗಡಿಯ   ಪೀಠೋಪಕರಣಗಳ ಅಳವಡಿಸುವ ಕಾರ್ಯ ಭರದಿಂದ ನಡೆದಿದೆ. ಮೂಲಗಳ ಪ್ರಕಾರ ಗಜೇಂದ್ರಗಡ ಟೆಕ್ಸಟೈಲ್ಸ್ ಗೆ ಬಾಡಿಗೆ ನೀಡಿರುವುದು ಗೊತ್ತಾಗಿ, ಡಾ.ರಾಜಕುಮಾರ ಅಭಿಮಾನಿಗಳ ಸಂಘ, ಹೈದ್ರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಅಧ್ಯಕ್ಷ ಬಸವರಾಜ್ ಗಾಣಗೇರ ನೇತೃತ್ವದಲ್ಲಿ ಕಲಾವಿದರು.  ಶನಿವಾರ ದಿಢೀರ್  ಪುರಸಭೆಗೆ‌ ಮುತ್ತಿಗೆ ಹಾಕಿ ಪ್ರತಿಭಟಿಸಿ ಮುಖ್ಯಾಧಿಕಾರಿ ಉಮೇಶ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

Advertisement

ಅಲ್ಲಿಯೇ ಇದ್ದ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಇದರ ಬಗ್ಗೆ ಗಮನಕ್ಕೆ ಇಲ್ಲ ಎಂದು ತಿಳಿಸಿರುವುದು ಅಚ್ಚರಿಯಾಗಿದೆ. ಕಲಾವಿದರು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಮೀಸಲಾಗಿದ್ದ ಡಾ.ರಾಜಕುಮಾರ ಕಲ್ಯಾಣ ಮಂಟಪ ಖಾಸಗಿ ಬಟ್ಟೆ ಅಂಗಡಿಯವರಿಗೆ ವಹಿರುವುದು ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಕಲ್ಯಾಣ ಮಂಟಪ ಬಟ್ಟೆ ಅಂಗಡಿಗೆ ಬಾಡಿಗೆ ನೀಡಿರುವುದು ಗೊತ್ತಿಲ್ಲ. ಸದರಿ ಬಟ್ಟೆ ಅಂಗಡಿ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.

ಪುರಸಭೆ 6ನೇ ವಾರ್ಡ್ ಸದಸ್ಯ ರಾಮಣ್ಣ ಬಿನ್ನಾಳ ಪ್ರತಿಕ್ರಿಯಿಸಿ ಇದೇ ವಾರ್ಡಿನಲ್ಲಿದ್ದರೂ ನನ್ನ ಗಮನಕ್ಕೆ ತಂದಿಲ್ಲ. ಡಾ.ರಾಜಕುಮಾರ ಕಲ್ಯಾಣ ಮಂಟಪವನ್ನು ಬಟ್ಟೆ ಅಂಗಡಿಗೆ ನೀಡಿದ್ದು, ಜ.31 ರಂದು ನಡೆಯುವ ಪುರಸಭೆ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next