Advertisement

ಕೊನೆಗೂ ಬಂದ ಪೌರಾಯುಕ್ತರು: ಸದಸ್ಯರ ಆಕ್ರೋಶ

04:25 AM Nov 23, 2018 | Karthik A |

ಉಡುಪಿ: ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಅಹವಾಲು ಸ್ವೀಕರಿಸಿ ಪರಿಹಾರ ಕಂಡುಕೊಳ್ಳಲು ಶಾಸಕ ಕೆ.ರಘುಪತಿ ಭಟ್‌ ಅವರು ಗುರುವಾರ ನಗರಸಭೆಯಲ್ಲಿ ಕರೆದ ಸಭೆಗೆ ಪೌರಾಯುಕ್ತರು ಮೂರು ಗಂಟೆ ವಿಳಂಬವಾಗಿ ಆಗಮಿಸಿ ಶಾಸಕರು, ಸದಸ್ಯರ ಆಕ್ರೋಶಕ್ಕೆ ತುತ್ತಾದರು. ಬೆಳಗ್ಗೆ 10.30ಕ್ಕೆ ಸಭೆಯನ್ನು ಶಾಸಕರು ಕರೆದಿದ್ದರು. ಮೊದಲು ಫ‌ಲಾನುಭವಿಗಳಿಗೆ ಮಂಜೂರಾತಿ ಆದೇಶಪತ್ರವನ್ನು ವಿತರಿಸೋಣ, ಅಷ್ಟರಲ್ಲಿ ಅಧಿಕಾರಿಗಳು ಬರಬಹುದು ಎಂದು ಭಟ್‌ ತಿಳಿಸಿ ಆದೇಶ ಪತ್ರವನ್ನು ವಿತರಿಸಿದರು. ಆದರೆ ಪೌರಾಯುಕ್ತರು ಹತ್ತು ನಿಮಿಷಗಳಲ್ಲಿ ಬರುತ್ತಾರೆಂದು ಹಲವು ಬಾರಿ ಇತರ ಅಧಿಕಾರಿಗಳು ತಿಳಿಸಿದರೂ ಮಧ್ಯಾಹ್ನ 1.30ರವರೆಗೆ ಬರಲಿಲ್ಲ. ಏತನ್ಮಧ್ಯೆ ಮೆಸ್ಕಾಂ, ಕುಡ್ಸೆಂಪ್‌ ಯೋಜನೆಯ ಅಧಿಕಾರಿಗಳು ಸಭೆಗೆ ಬಂದ ಕಾರಣ ಅವರೊಂದಿಗೆ ಸದಸ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

Advertisement

ದಾರಿದೀಪ, ಒಳಚರಂಡಿ, ಕಸ ನಿರ್ವಹಣೆ, ನೀರಿನ ಪೂರೈಕೆ ಇತ್ಯಾದಿ ಸಮಸ್ಯೆಗಳನ್ನು ಜನರು ನಗರಸಭಾ ಸದಸ್ಯರಲ್ಲಿ ಹೇಳಿಕೊಳ್ಳುತ್ತಾರೆ. ಸದಸ್ಯರು ನನ್ನಲ್ಲಿ ಹೇಳುತ್ತಾರೆ. ಈ ಕಾರಣದಿಂದ ಇಂದು ಸಭೆ ಕರೆದಿದ್ದೇನೆ. ಬುಧವಾರ ರಾತ್ರಿ ವೇಳೆ ಪೌರಾಯುಕ್ತರು ನನ್ನ ಮನೆಗೆ ಬಂದು ‘ನಗರಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸದ ಕಾರಣ ಸಭೆ ನಡೆಸುವಂತಿಲ್ಲ.. ಸಭೆಯನ್ನು ಶಾಸಕರ ಸಭೆಯಲ್ಲಿ ಕರೆದುಕೊಳ್ಳಬಹುದು. ಶಾಸಕರಿಗೆ ಪ್ರಗತಿಪರಿಶೀಲನೆ ಸಭೆ ನಡೆಸಲು ಅಧಿಕಾರವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ’ ಎಂದು ರಘುಪತಿ ಭಟ್‌ ಹೇಳಿದರು.

‘ನಾನು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿಲ್ಲ. ನಗರಸಭಾಧಿವೇಶನವನ್ನೂ ನಡೆಸುತ್ತಿಲ್ಲ. ನಿರ್ಣಯವನ್ನೂ ತಳೆಯುತ್ತಿಲ್ಲ. ನಾನು ನನ್ನ ಕಚೇರಿಯಿಂದ ಎಲ್ಲ ನಗರಸಭಾ ಸದಸ್ಯರಿಗೆ ನೊಟೀಸು ಕೊಟ್ಟು ಸಭೆ ಕರೆದಿದ್ದೇನೆ. ನಗರಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸದೆ ಹೋಗಿರಬಹುದು. ಇವರಿಗೆ ಚುನಾವಣಾಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಎಂದು ಪ್ರಮಾಣಪತ್ರ ವಿತರಿಸಿದ್ದಾರೆ. ನಗರದ ಸಮಸ್ಯೆಗಳನ್ನು ಯಾರು ಬಗೆಹರಿಸಬೇಕು? ಇವರು ತಮ್ಮ ವಾರ್ಡಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವಿಲ್ಲವೆ? ಪ್ರಮಾಣವಚನ ಸ್ವೀಕರಿಸದೆ ಹೋದರೆ ನಾಗರಿಕರಾಗಿ ಪರಿಗಣಿಸಬಹುದಲ್ಲ? ಇವರು ನಗರಸಭೆಯೊಳಗೆ ಪ್ರವೇಶ ಮಾಡಬಾರದು ಎಂದು ಇದೆಯೆ? ಇವರು ನಗರಸಭೆಗೆ ಅಸ್ಪೃಶ್ಯರೆ? ಹೊಸ ಸದಸ್ಯರಿಗೆ ಅಧಿಕಾರಿಗಳ ಪರಿಚಯವಾಗಲಿ ಎಂಬುದೂ ಸಭೆಯ ಉದ್ದೇಶವಾಗಿದೆ. ಬುಧವಾರ ಮಧ್ಯಾಹ್ನದವರೆಗೆ ಇದೇ ನಗರಸಭೆಯಲ್ಲಿ ನಾನು ಸಭೆ ನಡೆಸಿದ್ದೇನೆ. ಕೇವಲ ಕೆಲವೇ ಹೊತ್ತಿನಲ್ಲಿ ಜಿಲ್ಲಾಧಿಕಾರಿಗಳು ಪೌರಾಯುಕ್ತರ ಮೇಲೆ ಸಭೆಯಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರುತ್ತಿದ್ದಾರೆ. ನಾನು ಮುಂದೆ ವರ್ತಕರು, ಎಂಜಿನಿಯರುಗಳ ಸಭೆಯನ್ನೂ ಕರೆದು ಅಹವಾಲು ಸ್ವೀಕರಿಸುತ್ತೇನೆ’ ಎಂದು ಶಾಸಕರು ಹೇಳಿದರು.


‘ಒಂದೋ ಪೌರಾಯುಕ್ತರು ಅಥವ ಇನ್ನಿತರ ಯಾವುದೇ ಅಧಿಕಾರಿಗಳು ಶಾಸಕರಿಗೆ ಸಭೆ ನಡೆಸುವ ಅಧಿಕಾರವಿಲ್ಲ ಎಂದು ಲಿಖೀತವಾಗಿ ಪತ್ರ ಕೊಡಲಿ. ನಾನೂ ಕೂಡ ನನ್ನ ಹಕ್ಕಿನ ಬಗ್ಗೆ ವಿಧಾನಸಭಾಧ್ಯಕ್ಷರ ವೇದಿಕೆಯಲ್ಲಿ ನೋಡಿಕೊಳ್ಳುತ್ತೇನೆ. ಇಲ್ಲವೆ ಆಯುಕ್ತರು ಸಭೆಗೆ ಬರಲಿ. ಅಲ್ಲಿಯವರೆಗೆ ನಾನು ಕದಲುವುದಿಲ್ಲ. ಈ ನಗರಸಭೆಗೆ ಒಳ್ಳೆಯ ಇತಿಹಾಸವಿದೆ. ಇಂತಹವರಿಂದ ಕೆಟ್ಟ ಹೆಸರು ಬರುತ್ತಿದೆ’ ಎಂದು ಶಾಸಕರು ಕಡಕ್‌ ಎಚ್ಚರಿಕೆಯನ್ನು ರವಾನಿಸಿದರು. ಆ ಬಳಿಕ ಸುಮಾರು 1.30ರ ವೇಳೆ ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌ ಅವರು ಆಗಮಿಸಿದರು. 
ವಿಳಂಬವಾಗಿ ಆಗಮಿಸಿದ್ದಕ್ಕೆ ಶಾಸಕರು, ನಗರಸಭಾ ಸದಸ್ಯರು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ, ಸಮೀಕ್ಷೆ ಇದ್ದ ಕಾರಣ ಬರಲು ತಡವಾಯಿತು ಎಂದು ಆಯುಕ್ತರು ಸಮಜಾಯಿಸಿ ನೀಡಿದರು. ಸಭೆ ಇದ್ದರೆ ಹಿಂದಿನ ದಿನವೇ ಹೇಳಬೇಕಿತ್ತು. ನಮ್ಮ ಸಮಯವನ್ನು ಏಕೆ ಹಾಳು ಮಾಡಿದಿರಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಗರಸಭಾ ಸದಸ್ಯರನ್ನು ಪರಿಚಯ, ಅಧಿಕಾರಿಗಳ ಪರಿಚಯ ಮಾಡಿಕೊಟ್ಟ ಬಳಿಕ ಬೀದಿ ದೀಪ, ನೀರು, ಒಳಚರಂಡಿ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. “ಈಗ ಸಮಯ ಸಾಕಾಗುತ್ತಿಲ್ಲ. ಆದ್ದರಿಂದ ಇನ್ನೊಮ್ಮೆ ಸಭೆ ಕರೆಯುತ್ತೇನೆ’ ಎಂದು ಶಾಸಕರು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದರು. ಎಂಜಿನಿಯರ್‌ ಗಣೇಶ್‌, ಮೆನೇಜರ್‌ ವೆಂಕಟರಮಣ, ಕಂದಾಯ ಅಧಿಕಾರಿ ಧನಂಜಯ ಮೊದಲಾದವರು ಉಪಸ್ಥಿತರಿದ್ದರು. 

ಜನರು ಡಿಸಿ ಬಳಿ ಹೋಗಲಿ
ನಗರದ ಮತದಾರರು ನಮ್ಮನ್ನು ಚುನಾಯಿಸಿದ್ದಾರೆ. ಅವರು ನಮ್ಮ ಬಳಿ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಾವು ಪ್ರಮಾಣವಚನ ಸ್ವೀಕರಿಸದೆ ಇದ್ದಿರಬಹುದು. ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರಲ್ಲ? ಜಿಲ್ಲಾಧಿಕಾರಿಯವರೇ ಪರಮಾಧಿಕಾರ ಉಳ್ಳವರು ಎಂಬುದು ಈಗ ಗೊತ್ತಾಯಿತು. ಜನರು ಅವರ ಬಳಿ ಹೋಗಿ ಸಮಸ್ಯೆಗಳನ್ನು ಹೇಳಿಕೊಳ್ಳಲಿ.
– ಕೃಷ್ಣರಾವ್‌ ಕೊಡಂಚ, ನಗರಸಭಾ ಸದಸ್ಯರು

Advertisement

ಡಿಸಿ ಕಾರಿನಿಂದ ಇಳಿದು ನೋಡಲಿ
ಜಿಲ್ಲಾಧಿಕಾರಿಗಳು ನಿತ್ಯ ಕಡಿಯಾಳಿ ಎಂಜಿಎಂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಅವರು ಕಾರಿನಿಂದ ಇಳಿದು ನೋಡಲಿ. ಜನರಿಗೆ ಮೊದಲು ಜಿಲ್ಲಾಧಿಕಾರಿಗಳು ಉತ್ತರಿಸಲಿ. ನೀರು ಕೊಡಲಿ. ಇದುವರೆಗೆ ನಾವು ಐದು ಶಾಸಕರಿದ್ದಾರೆಂದು ಕೊಡಿದ್ದೆವು. ಈಗ ಆರನೆಯ ಶಾಸಕರಂತೆ ಡಿಸಿ ವರ್ತಿಸುತ್ತಿದ್ದಾರೆ. ಪೊನ್ನುರಾಜರಂತಹ ಜಿಲ್ಲಾಧಿಕಾರಿಗಳಿದ್ದರು. ಇಂತಹ ಜಿಲ್ಲಾಧಿಕಾರಿಯವರನ್ನು ನೋಡಲಿಲ್ಲ. ನಗರಸಭೆ ಎದುರು ಕುಳಿತುಕೊಳ್ಳೋಣ. 35 ಚುನಾಯಿತ ಸದಸ್ಯರಿಗೆ ಬೆಲೆ ಇಲ್ಲವೆ?
– ಗಿರೀಶ್‌ ಅಂಚನ್‌, ಪ್ರಭಾಕರ ಪೂಜಾರಿ, ಗೀತಾ ಶೇಟ್‌, ಬಾಲಕೃಷ್ಣ ಶೆಟ್ಟಿ, ಎಡ್ಲಿನ್‌ ಕರ್ಕಡ ನಗರ ಸಭಾ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next