ಬೆಂಗಳೂರು: ಪಾಲಿಕೆ ಪ್ರತಿ ವರ್ಷ ನಡೆಸುವ ನಾಡಪ್ರಭು ಕೆಂಪೇಗೌಡ ಜಯಂತಿ ಈ ಬಾರಿ ವರ್ಚುವಲ್ ಮೂಲಕ ನಡೆಯುವ ಸಾಧ್ಯತೆ ಇದೆ. ಸೆ.2ಕ್ಕೆ ಕೆಂಪೇಗೌಡ ಜಯಂತಿ ಆಚರಣೆ ಮಾಡುವುದು ಎಂದು ನಿರ್ಧರಿಸಲಾಗಿತ್ತು. ಆದರೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಹೀಗಾಗಿ, ಕೆಂಪೇಗೌಡ ಜಯಂತಿಯನ್ನು ಸೆ.10ಕ್ಕೆ ಪಾಲಿಕೆ ಮುಂದೂಡಿದೆ.
ಸೆ.10ಕ್ಕೆ ಮೇಯರ್ ಎಂ.ಗೌತಮ್‌ಕುಮಾರ್ ಸೇರಿದಂತೆ ಪಾಲಿಕೆಯ ಎಲ್ಲ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಲಿದೆ. ಇದರ ಒಳಗಾಗಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲು ಪಾಲಿಕೆಯ ಸದಸ್ಯರು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲು ಮೇಯರ್ ಎಂ.ಗೌತಮ್‌ಕುಮಾರ್ ಅವರ ನೇತೃತ್ವದ ಸಮಿತಿ ನಿರ್ಣಯ ತೆಗೆದುಕೊಂಡು 20 ಜನ ಕೋವಿಡ್ ವಾರಿಯರ್ಸ್‌ಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ಆನ್‌ಲೈನ್ ಮೂಲಕ ಕಾರ್ಯಕ್ರಮ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಹೆಚ್ಚು ಜನ ಸೇರಿ ಸಭೆ- ಸಮಾರಂಭ ನಡೆಸುವಂತಿಲ್ಲ. ಆನ್‌ಲಾಕ್ -4 ಸೆ.21ರ ನಂತರ ಸಡಿಲಿಕೆಯಾಗಲಿದೆ. ಆದರೆ, ಈ ವೇಳೆಗೆ ಪಾಲಿಕೆ ಸದಸ್ಯರ ಅಧಿಕಾರ ಇರುವುದಿಲ್ಲ. ಹೀಗಾಗಿ, ಹೆಚ್ಚು ಜನ ಸೇರದಂತೆ ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕ ಹಾಗೂ ಸಮಿತಿ ಅಧ್ಯಕ್ಷರು ಹಾಗೂ ಪ್ರಶಸ್ತಿ ಪುರಸ್ಕೃತರು ಮಾತ್ರ ಸಭೆಯಲ್ಲಿ ಹಾಜರಿದ್ದು, ಉಳಿದವರು ವರ್ಚವಲ್ ಮೂಲಕ ಹಾಜರಾಗಲಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಮೇಯರ್ ಎಂ. ಗೌತಮ್‌ಕುಮಾರ್, ಕೋವಿಡ್ ಭೀತಿಯಿಂದಾಗಿ ಹೆಚ್ಚು ಜನ ಸೇರದಂತೆ ಕೆಂಪೇಗೌಡ ಜಂಯತಿ ಸಮಾರಂಭ ಹಾಗೂ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ಆಯಾ ವಾರ್ಡ್‌ನಲ್ಲಿಯೇ ಉಪಸ್ಥಿತರಿದ್ದು, ವರ್ಚುವಲ್ ಮೂಲಕ ಸಹಭಾಗಿತ್ವ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೋವಿಡ್ ಕಾರಣದಿಂದ ಇದೇ ಮೊದಲ ಬಾರಿಗೆ ಪಾಲಿಕೆಯ ಬಜೆಟ್‌ಅನ್ನು ಆನ್‌ಲೈನ್‌ನ ಮೂಲಕ ಮಂಡನೆ ಮಾಡಲಾಗಿತ್ತು. ಅಲ್ಲದೆ, ಹಲವು ಪಾಲಿಕೆ ಸಭೆಯನ್ನೂ ಆನ್‌ಲೈನ್‌ನ ಮೂಲಕ ಮಾಡಲಾಗಿತ್ತು. ಇದೀಗ ಕೆಂಪೇಗೌಡ ಜಯಂತಿಯೂ ಆನ್‌ಲೈನ್(ವರ್ಚುವಲ್)ನ ಮೂಲಕವಾದರೆ ಹೊಸ ದಾಖಲೆ ಸೃಷ್ಟಿಯಾಗಲಿದೆ.
8ಕ್ಕೆ ಪಾಲಿಕೆಯ ಕೊನೆಯ ಕೌನ್ಸಿಲ್ : ಪಾಲಿಕೆಯ ಕೊನೆಯ ಕೌನ್ಸಿಲ್ ಸಭೆ ನಡೆಸಲು ಪಾಲಿಕೆ ನಿರ್ಧರಿಸಿದೆ. ಬಹುತೇಕ ಈ ಅವಧಿಯಲ್ಲಿ ಪ್ರಮುಖ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಪಾಲಿಕೆ ಸದಸ್ಯರ ಅಧಿಕಾರ ಅವಧಿಯೇ ಸೆ.10ಕ್ಕೆ ಮುಗಿಯಲಿದೆ. ಕೊನೆಯ ಸಭೆಯಲ್ಲಿ ಪ್ರಮುಖ ನಿರ್ಣಯ ತೆಗೆದುಕೊಂಡರೂ, ಅದನ್ನು ಅನುಷ್ಠಾನ ಮಾಡಲು ಪಾಲಿಕೆ ಸದಸ್ಯರಿಗೆ ಅಧಿಕಾರ ಇರುವುದಿಲ್ಲ. ಹೀಗಾಗಿ, ಪ್ರಮುಖ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.