Advertisement

ಚುನಾವಣೆ ಮುಂದೂಡಿಕೆ : ನಾಳೆಗೆ ನಿಗದಿಯಾಗಿದ್ದ ಮೇಯರ್‌ ಆಯ್ಕೆ

11:53 AM Mar 01, 2022 | Team Udayavani |

ಮಹಾನಗರ : ಮನಪಾ ಮೇಯರ್‌ ಹುದ್ದೆಗೆ ಮಾ. 2ರಂದು ನಿಗದಿ ಯಾಗಿದ್ದ ಬಹುನಿರೀಕ್ಷಿತ ಚುನಾವಣೆ ದಿಢೀರ್‌ ಮುಂದೂಡಿಕೆಯಾಗಿದೆ.

Advertisement

ಪಾಲಿಕೆಯ 23ನೇ ಅವಧಿಗೆ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗಾಗಿ ಮೇಯರ್‌ ಸ್ಥಾನವನ್ನು ಸಾಮಾನ್ಯ (ಜಿ) ಹಾಗೂ ಉಪಮೇಯರ್‌ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆ (ಬಿಸಿಎಡಬ್ಲ್ಯು) ವರ್ಗಕ್ಕೆ ಮೀಸಲಿರಿಸಿದ್ದು, ಅದರಂತೆ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯನ್ನು ಮಾ. 2ರಂದು ನಿಗದಿಪಡಿಸಿ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರು ಮಂಗಳೂರು ಪಾಲಿಕೆ ಆಯುಕ್ತರಿಗೆ ತಿಳಿಸಿದ್ದರು. ಅದರಂತೆ ಈಗಾಗಲೇ ಪಾಲಿಕೆಯ ಎಲ್ಲ ಸದಸ್ಯರಿಗೆ ತಿಳಿವಳಿಕೆ ಪತ್ರ ಜಾರಿ ಮಾಡಲಾಗಿತ್ತು.

ಯಾಕೆ ಮುಂದೂಡಿಕೆ?
ಮಹಾರಾಷ್ಟ್ರದ ರಾಹುಲ್‌ ರಮೇಶ್‌ ಅವರು ಸುಪ್ರಿಂಕೋರ್ಟ್‌ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿ ಆದೇಶ ನೀಡಿದೆ. ಹೀಗಾಗಿ, ನ್ಯಾಯಾ ಲಯದ ಈ ಆದೇಶದ ಬಗ್ಗೆ ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್‌, ಉಪ ಮೇಯರ್‌ ಹಾಗೂ 4 ಸ್ಥಾಯೀ ಸಮಿತಿ ಚುನಾವಣೆ ಮಾ. 2ರಂದು ನಿಗದಿಪಡಿಸಿರುವುದರಿಂದ ಈ ಚುನಾವಣೆಗೆ ಅನ್ವಯವಾಗುವುದೇ? ಎಂಬ ಬಗ್ಗೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಫೆ. 24ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಫೆ. 25ರಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದಲೂ ಪತ್ರ ಬರೆಯಲಾಗಿತ್ತು. ಆದರೆ ಈವರೆಗೂ ಸರಕಾರದಿಂದ ಯಾವುದೇ ಸ್ಪಷ್ಟೀಕರಣ ಸ್ವೀಕೃತವಾಗಿಲ್ಲ. ಹೀಗಾಗಿ ಮಾ. 2ರಂದು ನಿಗದಿಪಡಿಸಿದ ಮಂಗಳೂರು ಪಾಲಿಕೆಯ ಮೇಯರ್‌, ಉಪಮೇಯರ್‌, ಸ್ಥಾಯೀ ಸಮಿತಿ ಚುನಾವಣೆಯನ್ನು ಮುಂದೂಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : ಹದಗೆಟ್ಟ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ರಸ್ತೆ : ದುರಸ್ತಿಗೆ ಸಾರ್ವಜನಿಕರಿಂದ ಆಗ್ರಹ

ಹಾಲಿ ಮೇಯರ್‌-ಉಪಮೇಯರ್‌ ಮುಂದುವರಿಕೆ?
ಸದ್ಯ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ಮಾ. 2ರಂದು ಕೊನೆಗೊಳ್ಳುತ್ತದೆ. ಆದರೆ ಹೊಸ ಮೇಯರ್‌ ಚುನಾವಣೆ ಮುಂದೂಡಿಕೆ ಆದ ಕಾರಣದಿಂದ ಮುಂದೇನು? ಎಂಬ ಬಗ್ಗೆ ಕುತೂಹಲ ಶುರುವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಹಾಲಿ ಮೇಯರ್‌, ಉಪಮೇಯರ್‌, ಸ್ಥಾಯೀ ಸಮಿತಿ ಮುಂದಿನ ಚುನಾವಣೆಯವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಈ ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿ ಮೇಯರ್‌ ಆಗಿದ್ದ ಅಶ್ರಫ್‌ ಅವರು ಇಂತಹುದೇ ಸಂದಿಗ್ಧ ಕಾರಣದಿಂದ ಸುಮಾರು 2 ತಿಂಗಳು ಹೆಚ್ಚುವರಿಯಾಗಿ ಅಧಿಕಾರ ನಡೆಸಿದ್ದರು.

Advertisement

ಸಿದ್ಧತೆ ನಡೆಸಿದವರಿಗೆ ನಿರಾಶೆ!
ಮಾ. 2ರಂದು ಮೇಯರ್‌-ಉಪಮೇಯರ್‌ ಚುನಾವಣೆಗೆ ಪಾಲಿಕೆಯಲ್ಲಿ ಸಿದ್ಧತೆ ನಡೆದಿತ್ತು. ಯಾರು ಮುಂದಿನ ಮೇಯರ್‌ ಎಂಬ ಬಗ್ಗೆ ರಾಜಕೀಯ ಲೆಕ್ಕಾಚಾರ ಗರಿಗೆದರಿತ್ತು. ಮುಂದಿನ ಮೇಯರ್‌ ಗಾದಿ ಮಂಗಳೂರು ಉತ್ತರ/ದಕ್ಷಿಣಕ್ಕೆ ಸಿಗಬೇಕು ಎಂಬ ಬಗ್ಗೆ ಎರಡೂ ಕ್ಷೇತ್ರದಿಂದ ವ್ಯಾಪಕ ರಾಜಕೀಯ ಪೈಪೋಟಿಯೂ ಶುರುವಾಗಿತ್ತು. ಮಾ. 1ರಂದು ಸಂಜೆಯ ಬಳಿಕ ಈ ಕುತೂಹಲವು ಅಂತಿಮ ಘಟ್ಟಕ್ಕೆ ಬಂದು ಮುಂದಿನ ಮೇಯರ್‌ ಯಾರು ಎಂಬ ಬಗ್ಗೆ ಬಿಜೆಪಿಯಲ್ಲಿ ಅಂತಿಮ ತೀರ್ಮಾನ ನಡೆಯುವುದರಲ್ಲಿತ್ತು. ಇದಕ್ಕಾಗಿ ಹಲವು ಮಂದಿ ಅಪೇಕ್ಷಿತರು ಬೇರೆ ಬೇರೆ ನೆಲೆಯಲ್ಲಿ ರಾಜಕೀಯ ಲಾಬಿ ನಡೆಸಿದ್ದರು. “ಈ ಬಾರಿ ನಾವೇ’ ಎಂಬ ರೀತಿಯಲ್ಲಿ ತಯಾರಿ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಚುನಾವಣೆಯೇ ಮುಂದೂಡಿಕೆ ಎಂಬ ಸುದ್ದಿ ಅಪೇಕ್ಷಿತರನ್ನು ನಿರಾಶೆಗೊಳಿಸಿದೆ.

ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ
ಮಂಗಳೂರು ಪಾಲಿಕೆಯ 23ನೇ ಅವಧಿಗೆ ಮೇಯರ್‌, ಉಪಮೇಯರ್‌ ಚುನಾವಣೆಯನ್ನು ಮಾ. 2ರಂದು ನಿಗದಿಪಡಿಸಲಾಗಿತ್ತು. ಆದರೆ ಕಾನೂನಾತ್ಮಕ ಕಾರಣದಿಂದ ಇದೀಗ ಮುಂದೂಡಲಾಗಿದೆ. ಸರಕಾರದ ಮುಂದಿನ ಸೂಚನೆಯನ್ನು ಪಾಲಿಸಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
– ಅಕ್ಷಯ್‌ ಶ್ರೀಧರ್‌, ಆಯುಕ್ತರು ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next