ಮಹಾನಗರ: ಕೆಲವು ದಿನ ಗಳಲ್ಲಿಯೇ ಮಂಗಳೂರು ಮಹಾನಗರ ಪಾಲಿಕೆ ಬಜೆಟ್ ಘೋಷಣೆಯಾಗಲಿದ್ದು, ಈ ಬಾರಿಯ ಬಜೆಟ್ ಯಾವ ರೀತಿ ಇರಬೇಕು, ಯಾವೆಲ್ಲಾ ವಿಷಯಗಳನ್ನು ಸೇರ್ಪಡೆ ಮಾಡಬೇಕು ಎಂಬ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ “ನನ್ನ ನಗರ ನನ್ನ ಬಜೆಟ್’ ಎಂಬ ಅಭಿಯಾನ ಆರಂಭವಾಗಿದೆ.
ಜನಾಗ್ರಹ ಎಂಬ ಸಂಸ್ಥೆಯ ವತಿ ಯಿಂದ ನಡೆಯುವ ಈ ಅಭಿಯಾನಕ್ಕೆ ಪಾಲಿಕೆ ಕೂಡ ಕೈಜೋಡಿಸಿದೆ. ಈ ಬಾರಿಯ ಬಜೆಟ್ ಕುರಿತಂತೆ ಸಾರ್ವಜನಿಕರು www.janaagraha.org/mangaluru ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಜ. 22ರ ಒಳಗಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸ ಬಹುದಾಗಿದೆ. ಈ ಜಾಲತಾಣದಲ್ಲಿ ಹೋದ ಬಳಿಕ ನಿಮ್ಮ ಹೆಸರು, ದೂರ ವಾಣಿ ಸಂಖ್ಯೆ, ಇಮೇಲ್ ಐಡಿ, ನಿಮ್ಮ ವಾರ್ಡ್ ನಮೂದು ಮಾಡಬೇಕು. ಬಳಿಕ ರಸ್ತೆಗಳು, ತ್ಯಾಜ್ಯ ನಿರ್ವಹಣೆ, ಫುಟ್‌ಪಾತ್, ಒಳಚರಂಡಿ ಎಂಬ ಆಯ್ಕೆ ನೀಡಲಾಗಿದೆ. ನಿಮ್ಮ ಆದ್ಯತ ವಲಗಳನ್ನು ಆಯ್ಕೆ ಮಾಡಬಹುದಾಗಿದೆ. ಹೆಚ್ಚುವರಿ ಸಲಹೆಗಳಿದ್ದರೆ ಅದನ್ನು ನಮೂದಿಸಲು ಅವಕಾಶ ಇದ್ದು, ಕೊನೇಗೆ ಸಬ್‌ಮಿಟ್ ಆಯ್ಕೆ ಒತ್ತಬೇಕು. ಮುಂಬರುವ ಬಜೆಟ್ ಬಗ್ಗೆ ಸಾರ್ವಜನಿಕರಿಂದ ಬರುವ ಉತ್ತರಗಳನ್ನು ಕ್ರೋಡೀಕರಿಸಿ ಮನಪಾ ಆಯುಕ್ತರಿಗೆ ಈ ಸಂಘಟನೆ ನೀಡುತ್ತದೆ.
ಈ ಬಗ್ಗೆ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, “ಇನ್ನೇನು ಕೆಲವು ದಿನಗಳಲ್ಲೇ ಮನಪಾ ಬಜೆಟ್ ಬರುತ್ತಿದ್ದು, ಈ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಇತ್ತೀಚೆಗೆ ಪಾಲಿಕೆಯಲ್ಲಿ ಸಭೆ ಆಯೋಜಿಸಿದ್ದೆವು. ಆದರೆ ಸಾರ್ವಜನಿಕರು ಹೆಚ್ಚಾಗಿ ಪಾಲ್ಗೊಳ್ಳಲಿಲ್ಲ.ಇದೀಗ ಜನಾಗ್ರಹ ಎಂಬ ಖಾಸಗಿ ಸಂಸ್ಥೆ ಬಜೆಟ್ ಕುರಿತು ಆನ್‌ಲೈನ್ ಅಭಿಯಾನ ನಡೆಸುತ್ತಿದ್ದು, ಬಜೆಟ್ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ನನಗೆ ತಿಳಿಸುತ್ತಾರೆ. ಮುಂಬರುವ ಬಜೆಟ್ ವೇಳೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.