ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವ ಅವರ ಸೋದರ ಮುಮ್ತಾಜ್ ಆಲಿ ನಾಪತ್ತೆಯಾಗಿದ್ದು ನಗರದ ಕುಳೂರು ಸೇತುವೆಯಲ್ಲಿ ಕಾರು ಬಿಟ್ಟು ಕಾಣೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡ ಶಂಕೆ ಮೂಡಿದೆ.
ಕುಳೂರು ಸೇತುವೆಯಲ್ಲಿ ತನ್ನ ಬಿಎಂಡಬ್ಲ್ಯು ಕಾರನ್ನು ಅಪಘಾತಪಡಿಸಿದ ರೀತಿಯಲ್ಲಿ ಬಿಟ್ಟಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಸೇತುವೆ ಆಸುಪಾಸಿನಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಪೊಲೀಸರು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ನಸುಕಿನ ಮೂರು ಗಂಟೆ ವೇಳೆಗೆ ಮುಮ್ತಾಜ್ ಮನೆಯಿಂದ ಹೊರಟಿದ್ದು ಈ ವೇಳೆ ತನ್ನ ಮಗಳಿಗೆ ವಾಯ್ಸ್ ಮೆಸೇಜ್ ಹಾಕಿದ್ದರು. ನಾನು ಬದುಕುಳಿಯಲ್ಲ, ದೇವರ ಬಳಿಗೆ ಹೋಗುತ್ತಿದ್ದೇನೆ ಎಂದು ಬ್ಯಾರಿ ಭಾಷೆಯಲ್ಲಿ ವಾಯ್ಸ್ ಮೆಸೇಜ್ ಹಾಕಿದ್ದಾರೆ. ಹೀಗಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಮೊಯ್ದೀನ್ ಬಾವಾ ಮತ್ತು ಕುಟುಂಬಸ್ಥರು ಕುಳೂರು ಸೇತುವೆ ಬಳಿಗೆ ಆಗಮಿಸಿದ್ದಾರೆ. ಇವರ ಇನ್ನೊಬ್ಬ ಸೋದರ ಬಿ.ಎಂ. ಫಾರೂಕ್ ಅವರು ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿದ್ದು ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ.
ಮುಮ್ತಾಜ್ ಆಲಿ ಅವರೂ ಮಂಗಳೂರಿನಲ್ಲಿ ಸೋದರನ ಜೊತೆಗೆ ಉದ್ಯಮ ನೋಡಿಕೊಂಡಿದ್ದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಸಕ್ರಿಯರಾಗಿದ್ದರು. ದಿಢೀರ್ ಆಗಿ ಈ ರೀತಿಯ ನಿರ್ಧಾರಕ್ಕೆ ಬರಲು ಉದ್ಯಮದಲ್ಲಿ ನಷ್ಟಗೊಂಡಿದ್ದು ಕಾರಣವೇ ಗೊತ್ತಾಗಿಲ್ಲ. ಮೊಯ್ದೀನ್ ಬಾವ ಅವರು ನಾಲ್ಕು ವರ್ಷಗಳ ಹಿಂದೆ ಉದ್ಯಮದಲ್ಲಿ ಭಾರೀ ನಷ್ಟಕ್ಕೀಡಾಗಿದ್ದರು.
ಸೇತುವೆಯಿಂದ ಹಾರಿದ ಸಂಶಯ ; ಕಮಿಷನರ್
ಕುಳೂರು ಸೇತುವೆ ಬಳಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆಗಮಿಸಿದ್ದು ಪೊಲೀಸರ ಶೋಧಕ್ಕೆ ನೇತೃತ್ವ ನೀಡಿದ್ದಾರೆ. ಘಟನೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ಮುಂಜಾನೆ ಮೂರು ಗಂಟೆಗೆ ಮನೆಯಲ್ಲಿ ಕೆಲವು ಕಾರಣಗಳಿಂದ ಸಿಟ್ಟಾಗಿ ಬಿಎಂಡಬ್ಲೂ ಕಾರು ಚಲಾಯಿಸುತ್ತ ಬಂದಿದ್ದರು. ಕುಳೂರು ಸೇತುವೆಯಲ್ಲಿ ಕಾರು ಅಫಘಾತವಾಗಿ ಕಾಣೆಯಾಗಿದ್ದಾರೆ. ಈ ವಿಚಾರ ಮಗಳಿಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೇತುವೆಯಿಂದ ಕೆಳಗೆ ಹಾರಿರುವ ಬಗ್ಗೆ ಸಂಶಯ ಇದೆ. ವಿವಿಧ ತಂಡಗಳು ನದಿಯಲ್ಲಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಎಫ್ ಎಸ್ ಎಲ್ ಅಧಿಕಾರಿಗಳು ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದಿಂದ ಕೆಲವು ಮಾಹಿತಿಗಳನ್ನು ಪಡೆದಿದ್ದೇವೆ. ಘಟನೆ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.