Advertisement
ಮಂಗಳೂರು, ಮುಡಿಪು ಸಹಿತ ಜಿಲ್ಲೆಯ ಅಲ್ಲಲ್ಲಿ ಕೆಪ್ಪಟ್ರಾಯ ಕಂಡುಬಂದಿದೆ. ರೋಗ ನಿರೋಧಕ ಶಕ್ತಿ ಇಲ್ಲದವರಲ್ಲಿ ತೀವ್ರವಾಗಿ ಹರಡುತ್ತದೆ. ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. 10ರಿಂದ 15 ದಿನಗಳೊಳಗೆ ವೈರಸ್ ಹರಡಲು ಸಮಯ ತೆಗೆದುಕೊಳ್ಳುತ್ತದೆ.
ಈ ಕಾಯಿಲೆ ಆರಂಭಕ್ಕೂ ಮುನ್ನ ಜ್ವರ, ತಲೆನೋವು, ಗಂಟಲು ನೋವು ಇರುತ್ತದೆ. ಇದಾದ ಬಳಿಕ ಕಿವಿಯ ಗ್ರಂಥಿಯ ಬಳಿ ನೋವು ಉಂಟಾಗುತ್ತದೆ. ಕಿವಿಯ ಬಳಿ ಊತ ಕಂಡುಬರುತ್ತದೆ. ಸುಮಾರು ಐದು ದಿನ ದವಡೆ ದಪ್ಪವಾಗಿ ವಿಪರೀತ ನೋವಿನಿಂದ ಕೂಡಿರುತ್ತದೆ. ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ವೈರಸ್ ಹರಡುವಿಕೆಯಿಂದ ಗದ್ದಕಟ್ಟು ರೋಗ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೋಗ ಶಮನಕ್ಕೆ ವಿಶ್ರಾಂತಿಯೇ ಮುಖ್ಯ. ರೋಗ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ. ಜಿಲ್ಲೆಯ ಯಾವ ಕಡೆಗಳಲ್ಲಿ ಕೆಪ್ಪಟ್ರಾಯ ರೋಗ ಹೆಚ್ಚು ಇದೆ ಎಂಬ ಮಾಹಿತಿ ಪಡೆದು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡುತ್ತೇನೆ’ ಎಂದಿದ್ದಾರೆ.