Advertisement

700 ನಾಪತ್ತೆ ಪ್ರಕರಣ ಭೇದಿಸಿದ ಮಹಾ ಪೊಲೀಸ್‌

09:44 AM Dec 24, 2019 | mahesh |

ಮುಂಬಯಿ: ಮಕ್ಕಳು ಎಲ್ಲೇ ನಾಪತ್ತೆಯಾಗಲಿ, ಮುಂಬಯಿ ಪೊಲೀಸರಿಗೆ ನೆನಪಾಗುವುದು ಈ ಹೆಡ್‌ ಕಾನ್‌ಸ್ಟೇಬಲ್‌. ಮುಂಬಯಿಗರ ಪಾಲಿಗೆ “ಷರ್ಲಾಕ್‌ಹೋಮ್‌’ ಎಂದೇ ಕರೆಯಿಸಿಕೊಳ್ಳುತ್ತಿರುವ ರಾಜೇಶ್‌ ಪಾಂಡೆ ಈವರೆಗೆ 700 ನಾಪತ್ತೆ ಪ್ರಕರಣಗಳನ್ನು ಸುಲಲಿತವಾಗಿ ಭೇದಿಸಿದ್ದಾರೆ.
ಅವರ ಈ ಸಾಹಸ ಬಾಲಿವುಡ್‌ ನಿರ್ಮಾಪಕರ ಕಿವಿಗೂ ಬಿದ್ದು, ಪೊಲೀಸ್‌ ಇಲಾಖೆಯ ಅನುಮತಿ ಪಡೆದು ಕೊಂಡು ಸಿನೆಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

Advertisement

2011ರಲ್ಲಿ ನಡೆದಿದ್ದ ಪ್ರಕರಣ ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಪರಿತ್ಯಕ್ತ ತಂದೆಯೇ ಪುತ್ರನ ಅಪಹರಣ ಮಾಡಿದ್ದು ಸುದ್ದಿಯಾಗಿತ್ತು. ಅತ್ಯಂತ ಕುತೂಹಲ ಕೆರಳಿಸಿದ್ದ ಈ ಪ್ರಕರಣವನ್ನು ಭೇದಿಸಿದ ಬಳಿಕ ಪಾಂಡೆ ಫ‌ುಲ್‌ ಬ್ಯುಸಿ. ಅವರು ಡಾರ್ಜಿಲಿಂಗ್‌ ನಿಂದ ದಿಲ್ಲಿಯ ವರೆಗೆ ಅಂದರೆ ದೇಶದ ವಿವಿಧ ಭಾಗಗಳಲ್ಲಿನ ಪೊಲೀಸ್‌ ಠಾಣೆಗಳಿಗೆ ತಲೆ ನೋವಾ ಗಿರುವ ನಾಪತ್ತೆ ಪ್ರಕರಣಗಳನ್ನು ಬೆಣ್ಣೆ ಯಿಂದ ಕೂದಲು ತೆಗೆದ ರೀತಿಯಲ್ಲಿ ಪರಿಹರಿಸಿ ಕೊಟ್ಟಿದ್ದಾರೆ.

ನಾಪತ್ತೆ ಪ್ರಕರಣಗಳ ಪೈಕಿ ವಿಶೇಷವಾಗಿ ಬಾಲಕರು ಕಾಣೆಯಾಗಿರುವುದರ ಬಗ್ಗೆ ನಾನು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಪಾಂಡೆ ಹೇಳಿಕೊಳ್ಳುತ್ತಾರೆ. ಮುಂಬಯಿ ಪೊಲೀಸ್‌ ಆಯುಕ್ತರಾಗಿದ್ದ ದತ್ತಾ ಪದಸಾಲಿಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರ ತನಿಖಾ ಕಾರ್ಯವೈಖರಿಗೆ “ಪಾಂಡೆ ಮಾದರಿ’ ಎಂದು ಹೆಸರಿಟ್ಟಿದ್ದರು. ಜತೆಗೆ ನಾಪತ್ತೆ ಪ್ರಕರಣದ ನೇತೃತ್ವ ವಹಿಸಿಕೊಂಡವರು ಅದನ್ನೇ ಅನುಸರಿಸಬೇಕು ಎಂದು ಸೂಚಿಸಲಾಗಿತ್ತು.

26 ವರ್ಷಗಳ ಅನುಭವ
ಸದ್ಯ ರಾಜೇಶ್‌ ಅವರಿಗೆ 56 ವರ್ಷ. ಅವರು ಮುಂಬಯಿಯ ಮೂರು ಠಾಣೆಗಳಲ್ಲಿ ಕೆಲಸ ಮಾಡಿ 26 ವರ್ಷಗಳ ಅನುಭವ ಸಂಪಾದಿಸಿದ್ದಾರೆ. 2005ರ ಬಳಿಕ ಅವರು 700 ಪ್ರಕರಣಗಳನ್ನು ಪರಿಹರಿಸಿಕೊಟ್ಟಿದ್ದಾರೆ. ಈ ಪೈಕಿ ಒಂದರಲ್ಲಿ ಅವರು ಯಶಸ್ಸು ಕಂಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದರ ಜತೆಗೆ ಹಲವು ರೀತಿಯಲ್ಲಿ ಅಪರಾಧ ಪತ್ತೆ ಮಾಡುವ ಕೌಶಲವನ್ನೂ ಪಡೆದುಕೊಂಡಿದ್ದಾರೆ.

ಕೊರಿಯರ್‌ ಬಾಯ್‌ ವೇಷ !
ಐದು ವರ್ಷಗಳ ಹಿಂದೆ ಮುಂಬಯಿಯ ಮನೆ ಕೆಲಸದ ಯುವತಿಯನ್ನು ಅಪಹರಿಸಲಾಗಿತ್ತು. ಆಕೆ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತಾದರೂ ಸುಳಿವು ಸಿಗಲಿಲ್ಲ. ಸ್ವಲ್ಪ ದಿನ ಕಳೆದ ಬಳಿಕ ಮನೆಯ ಮಾಲಕರಿಗೆ ಆಕೆ ಫೋನ್‌ ಮಾಡಿದ್ದಳು. ಆ ನಂಬರ್‌ ಪಶ್ಚಿಮ ಬಂಗಾಲದ 24 ಪರಗಣ ಜಿಲ್ಲೆಗೆ ಸೇರಿದ್ದಾಗಿತ್ತು. ಮೊಬೈಲ್‌ ನಂಬರ್‌ಗೆ ಫೋನ್‌ ಮಾಡಿ, ತಾನೊಬ್ಬ ಕೊರಿಯರ್‌ ಬಾಯ್‌ ಆಗಿದ್ದು, ಪಾರ್ಸೆಲ್‌ ತಲುಪಿಸಲು ಸಂಪೂರ್ಣ ವಿಳಾಸ ನೀಡುವಂತೆ ಪುಸಲಾಯಿಸಲಾಯಿತು. ವಿಳಾಸ ಪತ್ತೆಹಚ್ಚಿ ಹೋದಾಗ ಆ ಯುವತಿ ಅಪಹರಣಕಾರರ ಬಂಧನದಲ್ಲಿ ಇದ್ದುದು ತಿಳಿಯಿತು. ಅನಂತರ ಅದರ ಆಧಾರದಲ್ಲಿ ಯುವತಿಯನ್ನು ಪಾರು ಮಾಡಿ ಮುಂಬಯಿಗೆ ಕರೆ ತರಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next