ಮುಂಬಯಿ : ನಗರದ ಲೋವರ್ ಪರೇಲ್ ನಲ್ಲಿರುವ ಕಮಲಾ ಮಿಲ್ಸ್ ಆವರಣದಲ್ಲಿನ ಎರಡು ರೆಸ್ಟೋರೆಂಟ್ – ಬಾರ್‌ನಲ್ಲಿ ಕಳೆದ ಡಿ.29ರಂದು ಸಂಭವಿಸಿದ್ದ ಭೀಕರ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ಗೆ ಇನ್ನಷ್ಟು ಹೆಸರುಗಳನ್ನು ಸೇರಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಈಗಲೂ ತಲೆಮರೆಸಿಕೊಂಡಿರುವ ಪಬ್ ಮಾಲಕರ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಇನಾಮು ಕೊಡಲಾಗುವುದು ಎಂದು ಹೇಳಿದ್ದಾರೆ.
ಮೋಜೋಸ್ ಬ್ರಿಸ್ಟೋದಲ್ಲಿ ಗಿರಾಕಿಗಳಿಗೆ ಅಕ್ರಮವಾಗಿ ಪೂರೈಸಲಾಗುತ್ತಿದ್ದ ಹುಕ್ಕಾದಿಂದ ಹಾರುತ್ತಿದ್ದ ಬೆಂಕಿಯ ಕಿಡಿಗಳೇ ಅಗ್ನಿ ಅವಘಡಕ್ಕೆ ಕಾರಣವಾಗಿದ್ದವು ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿರುವುದನ್ನು ಅನುಸರಿಸಿ ಈ ಪ್ರಕರಣದ ಎಫ್ಐಆರ್‌ಗೆ ಇನ್ನಷ್ಟು ಹೆಸರುಗಳನ್ನು ಸೇರಿಸಲಾಗುವುದೆಂದು ಮುಂಬಯಿ ಪೊಲೀಸರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಕಮಲಾ ಮಿಲ್ಸ್ ಬೆಂಕಿಯಲ್ಲಿ 14 ಅಮಾಯಕ ಜೀವಗಳು ಸುಟ್ಟು ಕರಕಲಾಗಿದ್ದವು. ಈ ಅನಾಹುತಕ್ಕೆ ವಿದ್ಯುತ್ ಶಾರ್ಟ್ ಸರ್‌ಕ್ಯೂಟ್ ಕಾರಣವೆಂದು ಮೊದಲಲ್ಲಿ ಶಂಕಿಸಲಾಗಿತ್ತು.
ಈ ಬೆಂಕಿ ಅವಘಡಕ್ಕೆ ಸಂಬಂಧಿಸಿದ ಎಫ್ಐಆರ್‌ನಲ್ಲಿ ಹೆಸರಿಸಲಾಗಿರುವ ಆರೋಪಿಗಳ ವಿರುದ್ಧ ಐಪಿಸಿಯ ಇನ್ನಷ್ಟು ಸೆಕ್ಷನ್‌ಗಳನ್ನು ಪ್ರಯೋಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ ಮುಂಬಯಿ ಪೊಲೀಸರು ಈಗಲೂ ತಲೆ ಮರೆಸಿಕೊಂಡಿರುವ ಕಮಲಾ ಮಿಲ್ಸ್ ಆವರಣದೊಳಗಿನ ಒನ್ ಅಬೌವ್ ಪಬ್‌ನ ಮಾಲಕರ ಬಗ್ಗೆ ಮಾಹಿತಿ ಕೊಟ್ಟವರಿಗೆ ಒಂದು ಲಕ್ಷ ಇನಾಮು ಕೊಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಡಿ.29ರಂದು ಕಮಲಾ ಮಿಲ್ಸ್ ಆವರಣದೊಳಗೆ ಬೆಂಕಿ ಅನಾಹುತ ಸಂಭವಿಸಿ 14 ಮಂದಿ ಮೃತಪಟ್ಟು ಇತರ 30 ಮಂದಿ ಗಾಯಗೊಂಡ ಬಳಿಕ ಪಬ್ ಮಾಲಕರಾಗಿರುವ ಕೃಪೇಶ್ ಮನ್‌ಸುಖ್‌ಲಾಲ್ ಸಾಂಗ್ವಿ , ಜಿಗರ್ ಸಾಂಗ್ವಿ ಮತ್ತು ಅಭಿಜೀತ್ ಮಾನ್‌ಕರ್ ತಲೆಮರೆಸಿಕೊಂಡಿದ್ದು ಅವರಿನ್ನೂ ಪತ್ತೆಯಾಗಿಲ್ಲ.