Advertisement

Mumbai: ಚೊಚ್ಚಲ ಟೆಸ್ಟ್‌ ಶತಕದ ಬೆನ್ನಲ್ಲೇ ಕನಸಿನ ಮನೆ ಖರೀದಿಸಿದ ಯಶಸ್ವಿ ಜೈಸ್ವಾಲ್‌

08:11 PM Jul 15, 2023 | Team Udayavani |

ಮುಂಬೈ: ಡೊಮಿನಿಕಾದ ವಿಂಡ್‌ಸರ್‌ ಪಾರ್ಕ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಇದೇ ವೇಳೆ ತನ್ನ ಪಾದಾರ್ಪಣಾ ಪಂದ್ಯದಲ್ಲೇ ವೆಸ್ಟ್‌ ಇಂಡೀಸ್‌ ವಿರುದ್ಧ ಶತಕ ಬಾರಿಸಿ ಮಿಂಚಿದ 21 ವರ್ಷದ ಯಶಸ್ವಿ ಜೈಸ್ವಾಲ್‌ ಭಾರತದ ಹೀರೋ ಆಗಿ ಮೂಡಿಬಂದಿದ್ದಾರೆ.

Advertisement

ತನ್ನ ಚೊಚ್ಚಲ ಶತಕವನ್ನು ಸಂಭ್ರಮಿಸುತ್ತಿರುವ ಜೈಸ್ವಾಲ್‌ ಮತ್ತೊಂದು ಸಂಭ್ರಮವನ್ನೂ ಆಚರಿಸುತ್ತಿದ್ದಾರೆ. ತಾನು ಬಾಲ್ಯದಿಂದಲೇ ಕಂಡಿರುವ ಬಹುದೊಡ್ಡ ಕನಸನ್ನು ನನಸು ಮಾಡಿಕೊಂಡಿರುವ ಜೈಸ್ವಾಲ್‌ ಮುಂಬೈನಲ್ಲಿ 5 ಬಿಎಚ್‌ಕೆ ಫ್ಲಾಟ್‌ ಒಂದನ್ನು ಖರೀದಿಸಿದ್ದಾರೆ.

ಭಾರತದ ಭರವಸೆಯ ಬ್ಯಾಟರ್‌ ಎಂದೇ ಕರೆಸಿಕೊಳ್ಳುತ್ತಿರುವ ಯಶಸ್ವಿ ಜೈಸ್ವಾಲ್‌ ಬಾಲ್ಯದಿಂದಲೇ ಕಷ್ಟಗಳನ್ನು ಕಂಡವರು.  ಟೆಂಟ್‌ಗಳಲ್ಲಿ ಮಲಗಿ, ರಸ್ತೆಗಳ ಬಳಿ ಪಾನಿಪುರಿ ಮಾರಿ, ಮರಗಳನ್ನು ಏರಿ IPL ಪಂದ್ಯಗಳನ್ನು ನೋಡುತ್ತಿದ್ದ ಈ ಹುಡುಗನಿಗೆ ಒಂದು ಬಾರಿ ಆಝಾದ್‌ ಮೈದಾನ್‌ನ ನೆಟ್‌ಗೂ ಪ್ರವೇಶ ನಿರಾಕರಿಸಲಾಗಿತ್ತು.

ತನ್ನ ಚೊಚ್ಚಲ ಪಂದ್ಯದ ಬಳಿಕ ಇಲ್ಲಿಯವರೆಗೆ ಮುಂಬೈನ ಸಾಂತಾ ಕ್ರೂಝ್‌ನಲ್ಲಿ ತಾನು ವಾಸಿಸುತ್ತಿದ್ದ ಎರಡು ಬೆಡ್‌ರೂಮ್‌ಗಳ ಬಾಡಿಗೆ ಮನೆಗೆ ಹೋಗಲಾರೆ ಎಂದು ಜೈಸ್ವಾಲ್‌ ನಿಶ್ಚಿಸಿದ್ದರು. ಹೀಗಾಗಿ ಜೈಸ್ವಾಲ್‌ ಡೊಮಿನಿಕಾದಲ್ಲಿ ತನ್ನ ಪಾದಾರ್ಪಣಾ ಪಂದ್ಯವನ್ನು ಆಡುತ್ತಿದ್ದಾಗಲೂ ಆತನ ಮನಸ್ಸು ಮುಂಬೈನ ತನ್ನ ಹೊಸ ಮನೆಯ ಬಗ್ಗೆಯೇ ಚಿಂತಿಸುತ್ತಿತ್ತಂತೆ.

Advertisement

ಈ ಬಗ್ಗೆ ಮಾತನಾಡಿದ ಯಶಸ್ವಿ ಜೈಸ್ವಾಲ್‌ ಅವರ ಸಹೋದರ ತೇಜಸ್ವಿ ಜೈಸ್ವಾಲ್‌, ʻಟೆಸ್ಟ್‌ ಪಂದ್ಯಕ್ಕಾಗಿ ಡೊಮಿನಿಕಾಗೆ ಹೋಗಿದ್ದ ಯಶಸ್ವಿ ಪ್ರತಿ ಬಾರಿ ಕರೆ ಮಾಡಿದಾಗಲೂ ನಾವು ಮನೆಯನ್ನು ಶಿಫ್ಟ್‌ ಮಾಡುವಂತೆ ಒತ್ತಾಯಿಸುತ್ತಿದ್ದ. ನಾನು ಸರಣಿ ಮುಗಿಸಿ ಬರುವ ವೇಳೆಗೆ ಹೊಸ ಮನೆಯಲ್ಲಿ ಇರಬೇಕು ಎಂದು ಹೇಳಿದ್ದ. ಅವನ ಬಯಕೆ ಒಂದೇ ಆಗಿತ್ತು. ನಾವು ಹೊಸ ಮನೆಯಲ್ಲಿ ಜೀವಿಸುವುದು. ಇಷ್ಟು ಕಷ್ಟದ ಬಾಲ್ಯವನ್ನು ಕಂಡ ಬಳಿಕ ಮುಂಬೈಯಲ್ಲಿ ಮನೆ ಖರೀದಿಸುವುದು ಅವನ ಜೀವನದ ಒಂದೇ ಒಂದು ದೊಡ್ಡ ಕನಸಾಗಿತ್ತುʼ ಎಂದು ಹೇಳಿದ್ದಾರೆ.

ʻಡೊಮಿನಿಕಾದಲ್ಲಿ ಯಶಸ್ವಿ ಬಾರಿಸಿದ ಶತಕ ಆತನ ಶ್ರಮದ ಬೆವರಿಗೆ ಸಂದ ಪ್ರಶಸ್ತಿ. ನಮ್ಮ ಕುಟುಂಬಕ್ಕೆ ಅದು ದೊಡ್ಡ ಹೆಮ್ಮೆ ತರಿಸಿದೆ. ನಮ್ಮ ತಂದೆ ಕಾನ್ವಾರ್‌ ಯಾತ್ರೆಗೆ ತೆರಳಿದ್ದು ಯಶಸ್ವಿಯ ಯಶಸ್ಸಿನ ಬಗ್ಗೆ ಪ್ರಾರ್ಥಿಸಲಿದ್ದಾರೆʼ ಎಂದು ತೇಜಸ್ವಿ ಜೈಸ್ವಾಲ್‌ ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್‌ಗೆ 12 ನೇ ವರ್ಷ ವಯಸ್ಸಿದ್ದಾಗಲೇ ಜೈಸ್ವಾಲ್‌ ಕುಟುಂಬ ಉತ್ತರ ಪ್ರದೇಶದ ಬದೋಹಿಯಿಂದ ಮುಂಬೈಗೆ ಶಿಫ್ಟ್‌ ಆಗಿತ್ತು. ಕ್ರಿಕೆಟ್‌ ಆಡುವ ಬಯಕೆಯಿಂದ ಕೋಚ್‌ ಜ್ವಾಲಾ ಸಿಂಗ್‌ ಅಕಾಡಮಿಯನ್ನು ಸೇರಿಕೊಂಡಿದ್ದ ಯಶಸ್ವಿ ಜೊತೆಗೆ ಯಾರೂ ಗಾಡ್‌ಫಾದರ್‌ಗಳು ಇರದೆಯೂ ಸ್ವಂತ ಪರಿಶ್ರಮದಿಂದ ಮೇಲೆದ್ದು ಬಂದವರು. ಇಂದು ಅವರು ಕಂಡಿದ್ದ ದೊಡ್ಡ ಕನಸಿಗೆ ಸ್ವತಃ ನೀರೆರೆದು ಪೋಷಿಸಿ ಕನಸನ್ನು ನನಸು ಮಾಡಿ ಮಾದರಿಯಾಗಿದ್ದಾರೆ.

ಇದನ್ನೂ ಓದಿ: INDvsWI ಒಂದೇ ಪಂದ್ಯದಲ್ಲಿ ಹಲವು ದಾಖಲೆ: ಇದು ರವಿ ಅಶ್ವಿನ್ ಸಾಧನೆ

Advertisement

Udayavani is now on Telegram. Click here to join our channel and stay updated with the latest news.

Next