Advertisement

IPL T20: ಹೈದರಾಬಾದ್‌ ತಂಡವನ್ನು 14 ರನ್ನುಗಳಿಂದ ಮಣಿಸಿದ ಮುಂಬೈ

12:30 AM Apr 19, 2023 | Team Udayavani |

ಹೈದರಾಬಾದ್‌: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್‌ ತಂಡವು ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 14 ರನ್ನುಗಳಿಂದ ಸೋಲಿಸಿದೆ.

Advertisement

ಕ್ಯಾಮರಾನ್‌ ಗ್ರೀನ್‌ ಮತ್ತು ತಿಲಕ್‌ ವರ್ಮ ಅವರ ಉತ್ತಮ ಆಟದಿಂದಾಗಿ ಮುಂಬೈ ತಂಡವು 5 ವಿಕೆಟಿಗೆ 192 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಹೈದರಾಬಾದ್‌ ತಂಡವು 19.5 ಓವರ್‌ಗಳಲ್ಲಿ 178 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು.

ಮುಂಬೈಯ ನಿಖರ ದಾಳಿಯಿಂದಾಗಿ ಹೈದರಾಬಾದ್‌ ಆರಂಭದಲ್ಲಿಯೇ ಕುಸಿಯಿತು. ಈ ಕುಸಿತದಿಂದ ಚೇತರಿಸಿಕೊಳ್ಳಲು ಕೊನೆಯ ವರೆಗೂ ತಂಡದಿಂದ ಸಾಧ್ಯವಾಗಲೇ ಇಲ್ಲ. ಈ ಹಿಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಹ್ಯಾರಿ ಬ್ರೂಕ್‌ 9 ರನ್ನಿಗೆ ಔಟಾದರೆ ರಾಹುಲ್‌ ತ್ರಿಪಾಠಿ ನಾಯಕ ಐಡೆನ್‌ ಮಾರ್ಕ್‌ ರಮ್‌, ಅಭಿಷೇಕ್‌ ಶರ್ಮ ಉತ್ತಮವಾಗಿ ಆಡಲು ವಿಫ‌ಲರಾದರು.

ಕ್ರೀಸ್‌ನ ಒಂದು ಕಡೆ ಗಟ್ಟಿಯಾಗಿ ನಿಂತಿದ್ದ ಮಾಯಾಂಕ್‌ ಅಗರ್ವಾಲ್‌ ಆರನೆಯವರಾಗಿ ಔಟಾಗುವ ಮೊದಲು 48 ರನ್‌ ಗಳಿಸಿದ್ದರು. 41 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು. ಅವರು ಐದನೇ ವಿಕೆಟಿಗೆ ಹೆನ್ರಿಚ್‌ ಕ್ಲಾಸೆನ್‌ ಜತೆಗೆ 55 ರನ್‌ ಪೇರಿಸಿ ಕುಸಿದ ತಂಡವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದರು. ಕ್ಲಾಸೆನ್‌ 36 ರನ್‌ ಗಳಿಸಿ ಚಾವ್ಲಾಗೆ ವಿಕೆಟ್‌ ಒಪ್ಪಿಸಿದರು.

ಆಬಳಿಕ ಅಬ್ದುಲ್‌ ಸಮದ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಮಾರ್ಕೊ ಜಾನ್ಸೆನ್‌ ಅವರ ಆಟದಿಂದಾಗಿ ಹೈದರಾಬಾದ್‌ ಗೆಲುವಿನ ಸನಿಹಕ್ಕೆ ಬಂತು. ಅಂತಿಮ 6 ಎಸೆತಗಳಲ್ಲಿ 20 ರನ್‌ ಗಳಿಸುವ ಅವಕಾಶ ಪಡೆದಿತ್ತು. ಆದರೆ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಅಂತಿಮ ಓವರಿನ ಐದನೇ ಎಸೆತದಲ್ಲಿ ಮಾಯಾಂಕ್‌ ಮಾರ್ಕೆಂಡೆ ಅವರ ವಿಕೆಟನ್ನು ಹಾರಿಸಿದ್ದರಿಂದ ಹೈದರಾಬಾದ್‌ 178 ರನ್ನಿಗೆ ಆಲೌಟಾಯಿತು. ಈ ಮೊದಲು ಅಬ್ದುಲ್‌ ಸಮದ್‌ ರನೌಟ್‌ ಆಗಿದ್ದರು. ಇದು ಐಪಿಎಲ್‌ನಲ್ಲಿ ಅರ್ಜುನ್‌ಗೆ ಒಲಿದ ಮೊದಲ ವಿಕೆಟ್‌ ಆಗಿದೆ.

Advertisement

ಉತ್ತಮ ಆರಂಭ
ಗೆಲುವಿಗಾಗಿ ಹಾತೊರೆಯುತ್ತಿರುವ ಮುಂಬೈ ತಂಡವು ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್‌ ಶರ್ಮ ಮತ್ತು ಇಶಾನ್‌ ಕಿಶನ್‌ ಅವರು ಹೈದರಾಬಾದ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಓವರೊಂದಕ್ಕೆ 10 ರನ್‌ ಪೇರಿಸಿದ ಅವರಿಬ್ಬರು 4.4 ಓವರ್‌ಗಳಲ್ಲಿ 41 ರನ್‌ ಗಳಿಸಿ ಬೇರ್ಪಟ್ಟರು. ಮೊದಲಿಗರಾಗಿ ಔಟಾದ ರೋಹಿತ್‌ 18 ಎಸೆತಗಳಿಂದ 28 ರನ್‌ ಹೊಡೆದರು.

ಕಿಶನ್‌ ಆಬಳಿಕ ಗ್ರೀನ್‌ ಜತೆಗೂಡಿ ಮತ್ತೆ ಇನ್ನಿಂಗ್ಸ್‌ ಕಟ್ಟುವ ಪ್ರಯತ್ನ ಮುಂದುವರಿಸಿದರು. ದ್ವಿತೀಯ ವಿಕೆಟಿಗೆ ಅವರಿಬ್ಬರು 46 ರನ್‌ ಪೇರಿಸಿದರು. ಕಿಶನ್‌ 31 ಎಸೆತಗಳಿಂದ 38 ರನ್‌ ಗಳಿಸಿ ಜಾನ್ಸೆನ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ತಿಲಕ್‌ ವರ್ಮ ಕ್ರೀಸ್‌ಗೆ ಬಂದ ಬಳಿಕ ತಂಡದ ರನ್‌ವೇಗ ತೀವ್ರಗೊಂಡಿತು. 15ನೇ ಓವರ್‌ ಎಸೆದ ಜಾನ್ಸೆನ್‌ 21 ರನ್‌ ಬಿಟ್ಟುಕೊಟ್ಟರು. ಇದರಲ್ಲಿ ವರ್ಮ ಸತತ ಎರಡು ಸಿಕ್ಸರ್‌ ಬಾರಿಸಿದ್ದರು. ಗ್ರೀನ್‌ ಮತ್ತು ವರ್ಮ ನಾಲ್ಕನೇ ವಿಕೆಟಿಗೆ ತ್ವರಿತಗತಿಯಲ್ಲಿ 56 ರನ್‌ ಪೇರಿಸಿದ್ದರಿಂದ ತಂಡ ಉತ್ತಮ ಮೊತ್ತ ಪೇರಿಸುವಂತಾಯಿತು.

20ರ ಹರೆಯದ ವರ್ಮ ಕೇವಲ 17 ಎಸೆತಗಳಿಂದ 37 ರನ್‌ ಗಳಿಸಿದರು. 2 ಬೌಂಡರಿ ಮತ್ತು 4 ಸಿಕ್ಸರ್‌ ಬಾರಿಸಿದ್ದರು. ಆರಂಭದಲ್ಲಿ ರನ್‌ ಗಳಿಸಲು ಒದ್ದಾಡಿದ ಗ್ರೀನ್‌ ಅವರು ವರ್ಮ ಔಟಾದ ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ನಟರಾಜನ್‌ ಅವರ ಬೌಲಿಂಗ್‌ನಲ್ಲಿ ಮೂರು ಬೌಂಡರಿ ಬಾರಿಸಿದ ಅವರು ಅರ್ಧಶತಕ ಪೂರ್ತಿಗೊಳಿಸಿದರು. ನಟರಾಜನ್‌ ಆ ಓವರಿನಲ್ಲಿ 20 ರನ್‌ ಬಿಟ್ಟುಕೊಟ್ಟಿದ್ದರು. ಒಟ್ಟಾರೆ 40 ಎಸೆತ ಎದುರಿಸಿದ ಗ್ರೀನ್‌ 64 ರನ್‌ ಗಳಿಸಿ ಅಜೇಯರಾಗಿ ಉಳಿದರು. 6 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next