ಅಹ್ಮದಾಬಾದ್: ವಿಜಯ್ ಹಜಾರೆ ಟ್ರೋಫಿ ಲಿಸ್ಟ್ ಎ ಏಕದಿನ ಪಂದ್ಯಾವಳಿಯ ಶನಿವಾರದ(ಡಿ21) ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ನೀಡಿದ ಬೃಹತ್ ಸವಾಲನ್ನು ಸುಲಭವಾಗಿ ತಲುಪಿದ ಕರ್ನಾಟಕ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿತು.
ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆದ ಗ್ರೂಪ್ “ಸಿ’ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 114 ರನ್ ಕೊಡುಗೆ, ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ (78),ಹಾರ್ದಿಕ್ ತಮೋರೆ(84),ಸೂರ್ಯಕುಮಾರ್ ಯಾದವ್ (20) ಮತ್ತು ಶಿವಂ ದುಬೆ ಔಟಾಗದೆ (63) ರನ್ ಗಳ ಅಮೋಘ ಆಟದಿಂದ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಭರ್ಜರಿ ಮೊತ್ತ 382 ರನ್ ಗಳನ್ನು ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಕನ್ನಡಿಗರು ವಿಕೆಟ್ ಕೀಪರ್ ಬ್ಯಾಟರ್ ಕೃಷ್ಣನ್ ಶ್ರೀಜಿತ್ ಅವರ ಅಮೋಘ ಶತಕ ಮತ್ತು ಉಳಿದ ಆಟಗಾರರ ಬಲ ಪ್ರದರ್ಶನದಿಂದ 46.2 ಓವರ್ ಗಳಲ್ಲೇ 3 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಕೃಷ್ಣನ್ ಶ್ರೀಜಿತ್ ಅವರು ಸ್ಪೋಟಕ ಆಟವಾಡಿ 101 ಎಸೆತಗಳಲ್ಲಿ 150 ರನ್ ಗಳಿಸಿ ಅಜೇಯರಾಗಿ ಉಳಿದು ಸುಲಭ ಗೆಲುವಿಗೆ ಕಾರಣರಾದರು. ಬರೋಬ್ಬರಿ 20 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು.
ಆರಂಭಿಕ ಆಟಗಾರ ನಿಕಿನ್ ಜೋಸ್ 21, ನಾಯಕ ಮಾಯಾಂಕ್ ಅಗರ್ವಾಲ್ 47, ಅಮೋಘ ಆಟವಾಡಿದ ಕೆ.ವಿ. ಅನೀಶ್(82 ರನ್, 66 ಎಸೆತ), ಶ್ರೀಜಿತ್ ಅವರಿಗೆ ಕೊನೆಯಲ್ಲಿ ಸಾಥ್ ನೀಡಿದ ಪ್ರವೀಣ್ ದುಬೆ ಔಟಾಗದೆ 65 ರನ್ ಕೊಡುಗೆ ಸಲ್ಲಿಸಿದರು.