ಮುಂಬಯಿ:ಮುಂಬಯಿ ವಿಶ್ವ ವಿದ್ಯಾನಿಲಯವು ಈ ವರ್ಷದ ಮಾರ್ಚ್- ಎಪ್ರಿಲ್‌ನಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲು ಇನ್ನೂ ಹೆಣಗಾಡುತ್ತಿರುವಂತೆಯೇ ಈಗಾಗಲೇ ಪ್ರಕಟ ಗೊಂಡಿರುವ ಫಲಿತಾಂಶಗಳು ಸಂಪೂರ್ಣ ಗೊಂದಲಮಯವಾಗಿದ್ದು ವಿದ್ಯಾರ್ಥಿಗಳು ಮತ್ತಷ್ಟು ಸಂಕಷ್ಟಗಳನ್ನು ಅನುಭವಿಸುವಂತಾಗಿದೆ. ಪರೀಕ್ಷೆಗೆ ಹಾಜರಾಗಿದ್ದರೂ ಹಲವಾರು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಪರೀಕ್ಷೆಗೆ ಗೈರಾಗಿರುವುದಾಗಿ ನಮೂದಿಸಲಾಗಿದ್ದರೆ ಇನ್ನು ಕೆಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳೇ ನಾಪತ್ತೆಯಾಗಿದ್ದು ಈ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಮುಂಬಯಿ ವಿಶ್ವವಿದ್ಯಾನಿಲಯದ ದೂರ ಮತ್ತು ಮುಕ್ತ ಶಿಕ್ಷಣ ಸಂಸ್ಥೆಯು ನಡೆಸಿದ ಕಲಾ ಸ್ನಾತಕೋತ್ತರ ಪದವಿ ಕೋರ್ಸ್‌ನ ಸಮಾಜಶಾಸ್ತ್ರ ಭಾಗ-1ರ ಪರೀಕ್ಷೆಯಲ್ಲಿ 72 ವಿದ್ಯಾರ್ಥಿಗಳು ಶೂನ್ಯ ಅಂಕ ಸಂಪಾದಿಸಿದ್ದಾರೆ. ಅಷ್ಟೇ ಅಲ್ಲದೆ ಪರೀಕ್ಷೆಗೆ ಹಾಜರಾಗಿದ್ದ 462 ವಿದ್ಯಾರ್ಥಿಗಳ ಪೈಕಿ ಈ 72 ವಿದ್ಯಾರ್ಥಿಗಳ ಸಹಿತ ಶೇ.80ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದು ಇಡೀ ಮೌಲ್ಯಮಾಪನ ಪ್ರಕ್ರಿಯೆಯ ಸಾಚಾತನದ ಬಗೆಗೇ ಇದೀಗ ವಿದ್ಯಾರ್ಥಿಗಳು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದ ನಾವು ಅನುತ್ತೀರ್ಣರಾಗಿದ್ದು ವಿಶ್ವವಿದ್ಯಾನಿಲಯ ತನ್ನ ತಪ್ಪನ್ನು ಸರಿಪಡಿಸಿ ಫಲಿತಾಂಶವನ್ನು ಹೊಸದಾಗಿ ಪ್ರಕಟಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಆದರೆ ವಿಶ್ವವಿದ್ಯಾನಿಲಯ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎನ್ನುವ ಮೂಲಕ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ನಡೆಸಿದೆ.
ಮಾನವಶಾಸ್ತ್ರ ಪೇಪರ್‌ನಲ್ಲಿ ನನಗೆ ಶೂನ್ಯ ಅಂಕವನ್ನು ನೀಡಲಾಗಿದ್ದರೆ ಉಳಿದ ವಿಷಯಗಳಲ್ಲಿ ತೇರ್ಗಡೆಗೆ ಅಗತ್ಯವಿರುವಷ್ಟು ಅಂಕಗಳು ಮಾತ್ರವೇ ಲಭಿಸಿವೆ. ಮಾನವಶಾಸ್ತ್ರ ಸಹಿತ ಎಲ್ಲಾ ವಿಷಯಗಳ ಪರೀಕ್ಷೆಯನ್ನೂ ನಾನು ಉತ್ತಮ ರೀತಿಯಲ್ಲಿ ಎದುರಿಸಿದ್ದೆ. ಒಂದು ವೇಳೆ ಪರೀಕ್ಷೆಯಲ್ಲಿ ಸ್ವಲ್ವೇ ಬರೆದಿದ್ದರೂ ಶೂನ್ಯ ಅಂಕ ಲಭಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಮೊದಲ ವರ್ಷದ ವಿದ್ಯಾರ್ಥಿನಿಯಾಗಿರುವ ಶಹೀನಾ ದೂರಿದರು.
ಈ ಸಂಬಂಧ ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು ವಿಚಾರಿಸಿದಾಗ ನೀವು ಬಯಸಿದ್ದೇ ಆದಲ್ಲಿ ಸದ್ಯ ಫಲಿತಾಂಶವನ್ನು ತಡೆಹಿಡಿದು ಮರುಮೌಲ್ಯಮಾಪನದ ಬಳಿಕ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಫಲಿತಾಂಶ ಇನ್ನಷ್ಟು ವಿಳಂಬಗೊಂಡದ್ದೇ ಆದಲ್ಲಿ ಎರಡನೇ ವರ್ಷದ ಪ್ರವೇಶಕ್ಕೆ ತಡೆಯಾಗಲಿದೆ ಎಂದರು.
ವಿಶ್ವವಿದ್ಯಾನಿಲಯ ಇದೀಗ ಪ್ರಕಟಿಸಿರುವ ಫಲಿತಾಂಶದ ಪ್ರಕಾರ ಹಲವಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಕನಿಷ್ಠ ಅಂಕ ಗಳನ್ನೂ ಪಡೆದಿಲ್ಲ. ಈಗಾಗಲೇ ಫಲಿತಾಂಶ ಪ್ರಕಟನೆಯಲ್ಲಿ ಸಾಕಷ್ಟು ವಿಳಂಬವಾಗಿದ್ದು ಮರುಪರೀಕ್ಷೆ ಅಕ್ಟೋಬರ್‌ನಲ್ಲಿ ನಡೆಯಲಿದೆ. ನಾವು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಿರುವಾಗ ಮರು ಪರೀಕ್ಷೆಗೆ ಏಕೆ ಹಾಜರಾಗಬೇಕು ಎಂದು ಇನ್ನೋರ್ವ ವಿದ್ಯಾರ್ಥಿನಿ ಜಾನಕಿ .ಎಸ್ ಪ್ರಶ್ನಿಸಿದರು.
ವಿಶ್ವವಿದ್ಯಾನಿಲಯದ ಅಧಿಕಾರಿಗಳ ಪ್ರಕಾರ ಪರೀಕ್ಷೆಗೆ ಹಾಜರಾಗಬಯಸಿದ್ದ 687 ವಿದ್ಯಾರ್ಥಿಗಳ ಪೈಕಿ 225 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷೆಗೆ ಹಾಜರಾಗಿದ್ದ 462 ವಿದ್ಯಾರ್ಥಿಗಳಲ್ಲಿ 361 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಪೈಕಿ 72 ವಿದ್ಯಾರ್ಥಿಗಳು ವಿಷಯವೊಂದರಲ್ಲಿ ಶೂನ್ಯ ಅಂಕಗಳನ್ನು ಪಡೆದಿದ್ದಾರೆ. ಫಲಿತಾಂಶದಲ್ಲಿ ಎಲ್ಲಿ ತಪ್ಪಾಗಿದೆ? ಎಂದು ಪರಿಶೀಲನೆ ನಡೆಸಲಾಗುವುದು ಎಂದವರು ತಿಳಿಸಿದರು.