ಮುಂಬಯಿ: ಮುಂಬಯಿ ನಿಮ್ಮ ಭೂಗೋಳ. ಆದರೆ ಕರ್ನಾಟಕ ನಿಮ್ಮ ಚರಿತ್ರೆ. ಬಹುಶಃ ಕರ್ನಾಟಕದಲ್ಲಿ ಇರುವವರಿಗಿಂತ ಹೆಚ್ಚು ಕರ್ನಾಟಕದ ಚರಿತ್ರೆ ನಿಮ್ಮಲ್ಲಿದೆ. ಅದಕ್ಕೆ ನೀವು ದೂರ ಇರುವುದೇ ಕಾರಣ. ದೂರ ಎನ್ನುವುದು ಯಾವಾಗಲೂ ಸೆಳೆತವನ್ನು ಹೆಚ್ಚಿಸುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯನ್ನು ಜಾಗೃತಗೊಳಿಸುವಂತಹ ಕ್ರಿಯೆ ಇದೆಯಲ್ಲಾ ಅದು ಯಾರಿಗೆ ಇರುತ್ತೆ ಅವರು ಹೆಚ್ಚೆಚ್ಚು ಕನ್ನಡ ಭಾಷೆ, ಸಾಂಸ್ಕೃತಿಕ ವಿನ್ಯಾಸಗಳನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಾರೆ. ಆ ಕೆಲಸವನ್ನು ಮುಂಬಯಿವಾಸಿ ಕನ್ನಡಿಗರು ಬಹಳಷ್ಟು ಕ್ರೀಯಾಶೀಲ, ಪ್ರಾಮಾಣಿಕವಾಗಿ ಶಿಸ್ತುಬದ್ಧರಾಗಿ ನಿಭಾಯಿಸಿದ್ದಾರೆ ಎಂದು ಸಿನಿಮಾ ನಿರ್ದೇಶಕ, ಪ್ರಸಿದ್ಧ ಸಾಹಿತಿ ನಾಡೋಜ ಪ್ರೊ| ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಅ.27 ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿಯ ಜೆ. ಪಿ. ನಾಯಕ್ ಭವನದಲ್ಲಿ ನಡೆದ ಗೌರವಾರ್ಪಣೆ ಹಾಗೂ “ಕನ್ನಡ ಪ್ರಜ್ಞೆ ನಿನ್ನೆ ಇಂದು ನಾಳೆ’ ವಿಚಾರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮಂತವರಿಗೆ ಮುಂಬಯಿಗೆ ಬರುವುದೇ ಒಂದು ರೀತಿಯ ಸಂತಸ ತರುತ್ತದೆ. ಇತ್ತೀಚೆಗಂತೂ ಮುಂಬಯಿ ವಿವಿ ಕನ್ನಡ ವಿಭಾಗಕ್ಕೆ ಬರುವುದೆಂದರೆ ಆ ಅನುಭವವೇ ಬೇರೆ. ಇದೊಂದು ಸಮ್ಮಿಶ್ರ ಸಂಭ್ರಮ ಸಮಾರಂಭ. ಯಾವುದೋ ಸರಕಾರಕ್ಕೆ ಉಳಿಗಾಲ ಇರುತ್ತದೆಯೋ ಗೊತ್ತಿಲ್ಲ. ಆದರೆ ಇಂತಹ ಕಾರ್ಯಕ್ರಮಗಳಿಂದ ಕನ್ನಡವಂತೂ ಶತಮಾನಗಳತ್ತ ಮುನ್ನಡೆಯುವುದು ಸತ್ಯ. ಮುಂಬಯಿ ಜನತೆಯ ಪರಸ್ಪರ ಸ್ನೇಹತೆ ಮತ್ತು ಆದರ್ಶದಿಂದ ಇದೆಲ್ಲಾ ಸಾಧ್ಯ ಎಂದರು.
ಜಿ. ಎನ್. ಉಪಾಧ್ಯ ಅವರ ಸಾರಥ್ಯದಿಂದ ಮುಂಬಯಿ ವಿವಿ ಕನ್ನಡ ವಿಭಾಗಕ್ಕೆ ಸಾರ್ವಜನಿಕ ಮುಖ ಬಂದಿದೆ. ಇದೇ ವಿಶ್ವ ವಿದ್ಯಾಲಯಕ್ಕೆ ಬೇಕಾದದ್ದು. ವಿಶ್ವ ವಿದ್ಯಾಲಯಗಳು ಜನ ಸಂಪರ್ಕದಿಂದ ಕಡಿದು ಹೋಗಬಾರದು. ನಿರಂತರ ಸಂಪರ್ಕದಿಂದ ಸ್ನೇಹತೆಯನ್ನು ಸಿದ್ಧಿಸಿ ಕೊಳ್ಳಬೇಕು. ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಇಲ್ಲವಾದಲ್ಲಿ ಸಾಧಕರಿಗೆ ವೇದಿಕೆ ಮೇಲಿನ ಹೆಸರುಗಳು ಮಾತ್ರ ಇಂದು ಉಳಿದಿರುವುದು. ಸದ್ಯ ರಾಜಕೀಯ ಸ್ಥಿತಿಗತಿಗಳಿಂದ ಜಾತಿಗಳನ್ನು ಜೈಲುಗಳಲ್ಲಿ ಕೂಡು ಹಾಕುವ ಕಾರ್ಯ ನಡೆಯುತ್ತಿದೆ. ಇದರಿಂದ ನಮ್ಮಲ್ಲಿನ ಒಟ್ಟು ಸಾಹಿತ್ಯದ ವಿಭಜನೆವಾಗುತ್ತದೆ. ಆದ್ದರಿಂದ ಜನರಲ್ಲಿ ಹುಸಿ ವಿಚಾರಗಳನ್ನು ಬಿತ್ತದೆ ವಾಸ್ತವಗಳನ್ನು ಬಿತ್ತಿರಿ. ಎಲ್ಲೂ ಭಿನ್ನಾಭಿಪ್ರಾಯ ತಪ್ಪಲ್ಲ. ಆದರೆ ಭಿನ್ನಾಭಿಪ್ರಾಯಗಳು ಬೀದಿ ಜಗಳವಾಗಬಾರದು ಎಂದು ನುಡಿದರು.
ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಸುಮಾರು 20ಲಕ್ಷ ಕನ್ನಡಿಗರಿದ್ದು ಕನ್ನಡಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ ಕರ್ನಾಟಕ ಸರಕಾರಕ್ಕಾಗಲಿ, ಜನತೆಗೂ ಈ ಪ್ರಜ್ಞೆ ಇದೆಯೇ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ವಿಶ್ವ ವಿದ್ಯಾಲಯ ಜನರತ್ತ ಹೋಗಬೇಕು ಅನ್ನುವ ಕಾಯಕವನ್ನು ಡಾ| ಜಿ. ಎನ್. ಉಪಾಧ್ಯ ಮಾಡಿರುವುದು ಶ್ಲಾಘನೀಯ. ಮುಂಬಯಿ ಕನ್ನಡಿಗರ ಬಗ್ಗೆ ಒಳನಾಡ ಕರ್ನಾಟಕದವರಿಗೆ ಎಷ್ಟು ಜಾಗೃತಿಯಿದೆ ಎನ್ನುವುದನ್ನು ತಿಳಿಯಬೇಕು ಎಂದು ಎಚ್ಚರಿಸಿದರು.
ಅತಿಥಿಗಳಾಗಿ ಬರೋಡ ಉದ್ಯಮಿ ದಯಾನಂದ ಬೋಂಟ್ರಾ, ಬೆಂಗಳೂರಿನ ಪ್ರಾಧ್ಯಾಪಕಿ ಡಾ| ಮನೋನ್ಮನಿ ಉದಯ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಗೀತಾ ವಸಂತ, ಹಿರಿಯ ಸಾಹಿತಿ ಎಸ್. ಕೆ. ಹಳೆಯಂಗಡಿ ಬರೋಡ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‌ಕುಮಾರ್ ಪೊಲಿಪು, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು, ತುಮಕೂರು ಸಿದ್ದಗಂಗಾ ವಿದ್ಯಾಲಯದ ಪ್ರಾಚಾರ್ಯ ನಿರಂಜನ್ ಸಿ. ಎಸ್, ಕವಿ, ಲೇಖಕ ಗೋಪಾಲ ತ್ರಾಸಿ ಉಪಸ್ಥಿತರಿದ್ದರು.
ಸಮ್ಮಾನ
ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ಆಶಾ ಬಿ. ಶೆಟ್ಟಿ ದಂಪತಿಯನ್ನು ಹಾಗೂ ಸೃಜನಶೀಲ ಕಲಾವಿದ ಮೋಹನ್ ಮಾರ್ನಾಡ್ ಇವರನ್ನು ಪ್ರೊ| ರಾಮಚಂದ್ರಪ್ಪ ಅವರು ಶಾಲು ಹೊದೆಸಿ, ಸ್ವರ್ಣಪದಕ ಪ್ರದಾನಿಸಿ, ಗ್ರಂಥಗೌರವವನ್ನಿತ್ತು ಅಭಿನಂದಿಸಿ ಗೌರವಿಸಿದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಸ್ವಾಗತಿಸಿ ಪ್ರಸ್ತಾವನೆಗೈದು, ಕನ್ನಡದ ನಾಡುನುಡಿ ಸಾಹಿತ್ಯ ಸಂಸ್ಕೃತಿ ಇವೆಲ್ಲವನ್ನೂ ಒಳಗೊಂಡ ಈ ಕಾರ್ಯಕ್ರಮ ಇದಾಗಿದೆ. ಸಹೃದಯಿ ವಿಭೂತಿಗೆ ನಮೋ ಎನ್ನಲೇ ಬೇಕು. ಎಲ್ಲರಲ್ಲೂ ಕನ್ನಡದ ಡಿಂಡಿಮ ಬಾರಿಸಿ ಮನ ಪುಳಕಗೊಳ್ಳುವ ಸಂದರ್ಭ ಇದಾಗಿದೆ. ಇದು ದೀಪಾಳಿಯ ಮುನ್ನವಾದ ಕನ್ನಡದ ಹಬ್ಬವಾಗಿದೆ ಎಂದು ನುಡಿದು, ಅತಿಥಿ-ಗಣ್ಯರುಗಳನ್ನು ಶಾಲು ಹೊದಿಸಿ ಗ್ರಂಥಗೌರವ ನೀಡಿ ಗೌರವಿಸಿ ಅಭಿನಂದಿಸಿದರು. ಡಾ| ಶ್ಯಾಮಲಾ ಪ್ರಕಾಶ್ ಬಸವಣ್ಣರ ವಚನಗೈದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಶಿವರಾಜ್ ಎಂ. ಜಿ. ವಂದಿಸಿದರು.
ಮುಂಬಯಿಯಲ್ಲಿ ಕನ್ನಡದ ಉಸಿರಾಟ ನಿರಂತರವಾಗಿದ್ದು, ಕನ್ನಡದ ಸಾರ್ಥಕ ಸೇವೆ ನಡೆಯುತ್ತಿದೆ. ಸಂಶೋಧನಾ ವಿಷಯವು ಸಾಹಿತ್ಯಾಸಕ್ತರಿಗೆ ರೋಚಕ ಕ್ಷೇತ್ರವಾಗಿದ್ದು ಇದಕ್ಕೆ ಮುಂಬಯಿಯ ಕೊಡುಗೆ ಮತ್ತು ಅವೀನಾ ಭಾವ ಸಂಬಂಧವಿದೆ. ಸಂಶೋಧನಾ ಪರಂಪರೆ ಇಲ್ಲಿ ನಿರಂತರವಾಗಿ ಮುನ್ನಡೆ ಯುತ್ತಿದ್ದು, ಸಂಶೋಧನಾ ಕಾಯಕ ಯಜ್ಞ ಕಾರ್ಯದಂತೆ .
– ಡಾ| ಮನೋನ್ಮನಿ ಉದಯ, ಪ್ರಾಧ್ಯಾಪಕಿ ಬೆಂಗಳೂರು
ಚಿತ್ರ-ವರದಿ : ರೋನ್ಸ್ ಬಂಟ್ವಾಳ್