ಮಹಾನಗರ : ಸುರತ್ಕಲ್‌ನ ಟೋಲ್ ಕೇಂದ್ರ ಅಕ್ರಮವಾಗಿದ್ದು, ಅದನ್ನು ಸ್ಥಗಿತಗೊಳಿಸಬೇಕು, ಕೂಳೂರು, ಪಣಂಬೂರು, ಬೈಕಂಪಾಡಿ, ಸುರತ್ಕಲ್ ಮೂಲಕ ಹಾದುಹೋಗುವ ಹೆದ್ದಾರಿಯನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ನಗರದಲ್ಲಿ ಇತ್ತೀಚೆಗೆ ಜಾಥಾ ನಡೆಯಿತು.
ಬಳಿಕ ಮಾತನಾಡಿದ ಅವರು, ಹೆದ್ದಾರಿ ನಿಯಮಗಳ ಪ್ರಕಾರ ಎರಡು ಟೋಲ್ ಗೇಟ್‌ಗಳ ನಡುವೆ ಕನಿಷ್ಠ 50 ಕಿ.ಮೀ. ಅಂತರ ಇರಬೇಕು. ಆದರೆ ಹೆಜಮಾಡಿ ಹಾಗೂ ಸುರತ್ಕಲ್‌ಗಳಲ್ಲಿ 10 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ಎರಡು ಟೋಲ್ ಗೇಟ್‌ಗಳು ಸುಂಕ ವಸೂಲಿ ಮಾಡುತ್ತಿವೆ. ಇಂಥ ಉದಾ ಹರಣೆ ಬೇರೆಲ್ಲೂ ಇಲ್ಲವಾಗಿದ್ದು, ಸುರತ್ಕಲ್‌ನ ಟೋಲ್ ಗೇಟನ್ನು ಕೂಡಲೇ ಮುಚ್ಚಬೇಕು ಎಂದರು.
ಹೆದ್ದಾರಿ ಪ್ರಾಧಿಕಾರ ದುಬಾರಿ ಸುಂಕ ವಸೂಲಿ ಮಾಡುತ್ತಿದ್ದರೂ ರಸ್ತೆಗಳ ದುರಸ್ತಿ ಬಗ್ಗೆ ಗಮನ ಹರಿಸಿಲ್ಲ. ಹೆದ್ದಾರಿಯಲ್ಲಿರುವ ಗುಂಡಿಗಳು ಅಪಾಯಕಾರಿಯಾಗಿದ್ದು, ಅವುಗಳನ್ನು ಆದಷ್ಟು ಬೇಗ ಮುಚ್ಚಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಕಾರ್ಪೊರೇಟರ್ ರೇವತಿ ಪುತ್ರನ್, ನಗರ ಪಾಲಿಕೆ ಸದಸ್ಯ ದಯಾ ನಂದ್ ಶೆಟ್ಟಿ, ಸ್ಥಳೀಯ ಮುಖಂಡ ರಾಜೇಶ್ ಪಡ್ರೆ, ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್, ಟೋಲ್ ವಿರೋಧಿ ಹೋರಾಟ ಸಮಿತಿಯ ಶ್ರೀನಾಥ್ ಕುಲಾಲ್, ಸ್ಥಳೀಯ ಮುಖಂಡರಾದ ಸಿಪ್ರಿಯನ್ ಡಿ’ಸೋಜಾ, ಮಹಾಬಲ ರೈ, ಸಲೀಂ ಶಾಡೊ, ಸಂತೋಷ್ ಬಜಾಲ್, ಬದ್ರುದ್ದೀನ್ ಹೆಜಮಾಡಿ, ವಿಶ್ವನಾಥ್ ಮುಕ್ಕ, ಪ್ರಮೋದ್ ಶೆಟ್ಟಿ, ರಶೀದ್ ಮುಕ್ಕ ಮೊದಲಾದವರು ಭಾಗವಹಿಸಿದ್ದರು.
ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಮೂಲಕ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ, 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ಕೋರಲಾಯಿತು.