ಮುಂಬಯಿ : ಇದೇ ಶುಕ್ರವಾರ ಅಧಿಕಾರ ಗ್ರಹಣ ಮಾಡಲಿರುವ ಅಮೆರಿಕ ಅಧ್ಯಕ್ಷ ಡೊನಲ್ಡ್ ಟ್ರಂಪ್ ಅವರ ಆರ್ಥಿಕ ಹಾಗೂ ವಿದೇಶ ನೀತಿಗಳು ಹೇಗಿರುತ್ತವೆ ಎಂಬುದನ್ನು ಕಾತರದಿಂದ ಎದುರು ನೋಡುತ್ತಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಬುಧವಾರದ ವಹಿವಾಟನ್ನು 21.98 ಅಂಕಗಳ ಅತ್ಯಲ್ಪ ಗಳಿಕೆಯೊಂದಿಗೆ 27,257.64 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,417 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬಿಎಸ್‌ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಶೇರುಗಳು ಶೇ.0.5ರಷ್ಟು ಏರಿದವು. ತಜ್ಞರ ಪ್ರಕಾರ ಶೇರು ಮಾರುಕಟ್ಟೆಯ ಇನ್ನು ನಿಧಾನವಾಗಿ ಬಜೆಟ್ ಕಡೆಗೆ ಮುಖ ಮಾಡುತ್ತಾ ಏರು ಹಾದಿಯನ್ನು ಹಿಡಿಯಬಹುದು ಎನ್ನಲಾಗಿದೆ.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,494 ಶೇರುಗಳು ಮುನ್ನಡೆ ಸಾಧಿಸಿದರೆ 1,241 ಶೇರುಗಳು ಹಿನ್ನಡೆಗೆ ಗುರಿಯಾದವು. ಸರಕಾರದಿಂದ ಬಂಡವಾಳ ಮಾರಾಟದ ಘೋಷಣೆ ಹೊರಬಂದುದನ್ನು ಅನುಸರಿಸಿ ಐಸಿಐಸಿಐ ಪ್ರುಡೆನ್‌ಶಿಯಲ್ ಲೈಪ್ ಇನ್‌ಶುರೆನ್ಸ್ ಶೇರು ವೇ.2.5ರಷ್ಟು ಏರಿತು.
ಮೆಟಲ್ ರಂಗದ ಶೇರುಗಳು ಇಂದು ಶೇ.2ರಷ್ಟು ಏರಿರುವುದು ಗಮನಾರ್ಹವಾಗಿದೆ. ಟಾಟಾ ಸ್ಟೀಲ್, ನ್ಯಾಲ್ಕೋ, ಜಿಂದಾಲ್ ಸ್ಟೀಲ್, ಹಿಂಡಾಲ್ಕೊ ಮತ್ತು ವೇದಾಂತ ಶೇ.3ರಿಂದ ಶೇ.5ರಷ್ಟು ಏರಿದವು.