ಮುಂಬಯಿ : ವಹಿವಾಟುದಾರರು ಹಾಗೂ ಹೂಡಿಕೆದಾರರು ಶಾರ್ಟ್ ಕವರಿಂಗ್ ವಹಿವಾಟಿನಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 164.48 ಅಂಕಗಳ ಏರಿಕೆಯೊಂದಿಗೆ 29,332.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 55.85 ಅಂಕಗಳ ಏರಿಕೆಯನ್ನು ಸಾಧಿಸಿ ದಿನದ ವಹಿವಾಟನ್ನು 9,086.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ವಾರ 9,218.40 ಅಂಕಗಳ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿದ ಬಳಿಕ, ಸೆನ್ಸೆಕ್ಸ್ 200 ಅಂಕಗಳ ಪರಿಮಿತಿಯೊಳಗೆ ವ್ಯವಹರಿಸುತ್ತಿರುವುದು ಸ್ಪಷ್ಟವಾಗಿದೆ. ಮುಂದಿನ ತಿಂಗಳಲ್ಲಿ ಮಾರ್ಚ್ ತ್ತೈಮಾಸಿಕದ ಫಲಿತಾಂಶಗಳು ಹೊರಬೀಳುವ ತನಕವೂ ಈ ಪರಿಮಿತಿ ವಹಿವಾಟು ಹೀಗೇ ಮುಂದುವರಿಯಲಿದೆ ಎಂದು ತಜ್ಞರು ಹೇಳಿದ್ದಾರೆ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,689 ಶೇರುಗಳು ಮುನ್ನಡೆ ಸಾಧಿಸಿದವು; 1,121 ಶೇರುಗಳು ಹಿನ್ನಡೆಗೆ ಗುರಿಯಾದವು.
ಇಂದಿನ ಟಾಪ್ ಗೇನರ್‌ಗಳು : ಎಸ್ ಬ್ಯಾಂಕ್, ಟಾಟಾ ಮೋಟರ್, ಎನ್‌ಟಿಪಿಸಿ, ಗೇಲ್, ವಿಪ್ರೋ.
ಟಾಪ್ ಲೂಸರ್‌ಗಳು : ಐಟಿಸಿ, ಟಿಸಿಎಸ್, ಈಶರ್ ಮೋಟರ್, ಎಚ್‌ಯುಎಲ್, ಅಂಬುಜಾ ಸಿಮೆಂಟ್.