ಮುಂಬಯಿ : ಹಾಲಿ ಹಣಕಾಸು ವರ್ಷದಲ್ಲಿ ದೇಶವು ಶೇ.7.1ರ ಆರ್ಥಿಕಾಭಿವೃದ್ಧಿಯನ್ನು ಕಾಣಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ಹೇಳಿರುವ ಕಾರಣ ಹಾಗೂ ಇಂದು ಪ್ರಕಟಗೊಳ್ಳುವ ರಿಲಯನ್ಸ್ ನಾಲ್ಕನೇ ತ್ತೈಮಾಸಿಕ ಮತ್ತು ವಾರ್ಷಿಕ ಆದಾಯ ಫಲಿತಾಂಶಗಳು ಉತ್ತಮ ಇರುವವೆಂಬ ನಿರೀಕ್ಷೆಯಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ಇಂದು ತೀವ್ರ ಸಂಚಲನ ಕಂಡು ಬಂತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 290.54 ಅಂಕಗಳ ಅಮೋಘ ರಾಲಿಯನ್ನು ದಾಖಲಿಸಿ ದಿನಾಂತ್ಯಕ್ಕೆ 29,665.84 ಅಂಕಗಳ ಮಟ್ಟವನ್ನು ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯು 98.55 ಅಂಶಕಗಳ ಸೊಗಸಾದ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,217.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿ ಕಳೆದ ಎಪ್ರಿಲ್ 12ರ ಬಳಿಕದಲ್ಲಿ 9,200 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಮರಳಿ ಸಂಪಾದಿಸಿತು. ಚುನಾವಣೆಗಳಿಂದ ಪ್ರೇರಿತವಾದ ಐರೋಪ್ಯ ಶೇರು ಮಾರುಕಟ್ಟೆಗಳಲ್ಲಿನ ರಾಲಿ ಕೂಡ ಇಂದು ಮುಂಬಯಿ ಶೇರು ಪೇಟೆಗೆ ಸ್ಫೂರ್ತಿ ನೀಡಿತು.
ಇಂದು ವಹಿವಾಟಿಗೆ ಒಳಪಟ್ಟ 3,098 ಶೇರುಗಳ ಪೈಕಿ 1,695 ಶೇರುಗಳು ಮುನ್ನಡೆ ಸಾಧಿಸಿದವು; 1,223 ಶೇರುಗಳು ಹಿನ್ನಡೆಗೆ ಗುರಿಯಾದವು; 180 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಎಕ್ಸಿಸ್ ಬ್ಯಾಂಕ್, ಗೇಲ್, ಲಾರ್ಸನ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ರಿಲಯನ್ಸ್.
ಟಾಪ್ ಲೂಸರ್‌ಗಳು : ಲೂಪಿನ್, ಸಿಪ್ಲಾ, ವಿಪ್ರೋ, ಪವರ್ ಗ್ರಿಡ್, ಇನ್‌ಫೋಸಿಸ್.