Advertisement

ಮುಂಬಯಿ: ಸಂಭ್ರಮವಿಲ್ಲದೆ ಗಣೇಶನಿಗೆ ವಿದಾಯ

01:56 PM Sep 03, 2020 | Nagendra Trasi |

ಮುಂಬಯಿ, ಸೆ. 3: ಕೊರೊನಾ ಮಹಾಮಾರಿ ಸಮರದ ಮಧ್ಯೆ ಮುಂಬಯಿ ಮಂಗಳವಾರ 11 ದಿನಗಳ ಗಣೇಶ ಉತ್ಸವದ ಅಂತ್ಯವನ್ನು ಸೂಚಿಸುವ ಅನಂತ
ಚತುರ್ದಶಿಯಂದು ಯಾವುದೇ ಗೌಜು ಗಮ್ಮತ್ತಿಲ್ಲದೆ ಹೆಚ್ಚು ಶಾಂತವಾದ ಆಚರಣೆಗೆ ಸಾಕ್ಷಿಯಾಯಿತು.

Advertisement

ಪ್ರತಿವರ್ಷದಂತೆಯೇ ಈ ವರ್ಷವೂ ಭಕ್ತರು ವಿಘ್ನ ವಿನಾಶಕನಿಗೆ ವಿದಾಯ ಹೇಳಿದರು ಆದರೆ ಬೀದಿಗಳಲ್ಲಿ ಮತ್ತು ಮುಖ್ಯ ರಸ್ತೆಗಳ ಮೂಲಕ ಯಾವುದೇ
ಮೆರವಣಿಗೆಗಳು, ಡೋಲು ಕುಣಿತ ಅಥವಾ ಹಾಡುಗಳನ್ನು ನುಡಿಸುವ ಡಿಜೆ ವ್ಯವಸ್ಥೆಗಳಾಗಲಿ ಯಾವುದೂ ಇರಲಿಲ್ಲ. ಮುಂಬಯಿಯ ಇತಿಹಾಸದಲ್ಲೇ ವಿರಳ ಎಂಬಂತೆ ಅತೀ ಸರಳ ಆಚರಣೆಯೊಂದಿಗೆ ಸಮುದ್ರ, ಸರೋವರಗಳು ಮತ್ತು ಮನಪಾ ನಿರ್ಮಿತ ಕೃತಕ ಕೊಳಗಳಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಯಿತು.

369 ಸಾರ್ವಜನಿಕ ಪೆಂಡಾಲ್‌ ಸೇರಿದಂತೆ ಒಟ್ಟು 6,015 ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಯಿತು ಎಂದು ನಾಗರಿಕ ಸಂಸ್ಥೆ ಮಾಹಿತಿ ನೀಡಿದೆ. ಗಣಪತಿ ಬಪ್ಪಾ ಮೋರ್ಯ, ಫುಡ್ಚ್ಯಾ ವರ್ಷಿ ಲವ್ಕರ್‌ ಯಾ ಎಂಬ ಘೋಷಗಳೊಂದಿಗೆ ವಿಗ್ರಹಗಳನ್ನು ಹೊತ್ತ ಭಕ್ತರು ಗಿರ್ಗಾಂವ್‌, ದಾದರ್‌, ಜುಹೂ, ಮಾರ್ವೆ ಮತ್ತು ಇತರ ಕರಾವಳಿ ವಿಸರ್ಜನಾ ಕೇಂದ್ರಗಳ ಕಡೆಗೆ ನಡೆದುಕೊಂಡು ಹೋಗಿ ತಮ್ಮ ವಿಗ್ರಹಗಳನ್ನು ವಿಸರ್ಜಿಸಿದರು.

ಪೊಲೀಸ್‌ ಭದ್ರತೆ
ನಗರಾದ್ಯಂತ 35,000ಕ್ಕೂ ಹೆಚ್ಚು ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಸುಮಾರು 5,000 ಸಿಸಿಟಿವಿ ಕೆಮೆರಾಗಳ ಸಹಾಯದಿಂದ ಪೊಲೀಸರು ಬೀದಿ ಮತ್ತು ಕಡಲತೀರಗಳ ಮೇಲೆ ನಿಗಾ ಇಟ್ಟರು. ಜನಸಂದಣಿ ತಪ್ಪಿಸಲು ಪೊಲೀಸರು ವಿಸರ್ಜನಾ ಸ್ಥಳಗಳ ಬದಲಿಗೆ ಮನೆಯಿಂದ ಹೊರಡುವ ಮೊದಲು ಅಂತಿಮ ಆರತಿ ಮತ್ತು ಪೂಜೆಯನ್ನು ಮಾಡಬೇಕೆಂದು ಜನರಿಗೆ ಮನವಿ ಮಾಡಿದ್ದರು.

ಕೊರೊನಾ ಸೋಂಕಿನ ದೃಷ್ಟಿಯಿಂದ ಗಣೇಶ ಉತ್ಸವವನ್ನು ಪೆಂಡಾಲ್‌ಗ‌ಳಲ್ಲಿ ಆಯೋಜಿಸುವ ಮಂಡಲಗಳು ಅಥವಾ ಗುಂಪುಗಳಿಗೆ ಸಾಮಾಜಿಕ
ಅಂತರದ ರೂಢಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next