ಮುಂಬಯಿ : ಮುಂಬಯಿ ಮಹಾನಗರಿಯಲ್ಲಿ ಜಡಿ ಮಳೆಯಾಗುತ್ತಿದ್ದು ವಾಡಾಲಾ ಪೂರ್ವದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಅಡಿಯ ನೆಲ ಕುಸಿದ ಕಾರಣ ಹಲವಾರು ಕಾರುಗಳು ಅದರಡಿ ಹೂತು ಹೋಗಿರುವುದು ವರದಿಯಾಗಿದೆ.
ಅವಶೇಷಗಳಡಿ ಸಿಲುಕಿದ ಎಲ್ಲ ವ್ಯಕ್ತಿಗಳನ್ನು ಜೀವ ಸಹಿತ ಪಾರುಗೊಳಿಸಲಾಗಿದೆ; ಯಾವುದೇ ಜೀವಹಾನಿ ಆಗಿರುವ ವರದಿಗಳು ಬಂದಿಲ್ಲವಾದರೂ ಮಳೆ ಸಂಬಂಧಿ ದುರಂತಗಳಿಂದ ವ್ಯಾಪಕ ನಾಶ ನಷ್ಟ ಉಂಟಾಗಿದೆ.
ಅಧಿಕಾರಿಗಳ ಪ್ರಕಾರ ವಡಾಲಾದ ಆ್ಯನ್ ಟಾಪ್ ಹಿಲ್‌ನಲ್ಲಿ ವಿದ್ಯಾಲಂಕಾರ ರಸ್ತೆಯಲ್ಲಿನ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕೆಳ ಭಾಗದ ಭೂಮಿಯು ಕುಸಿದ ದುರಂತದಲ್ಲಿ ಸುಮಾರು 7 ಕಾರುಗಳು ಹೂತು ಹೋಗಿವೆ. ರಕ್ಷಣಾ ಕಾರ್ಯ ಈಗಲೂ ಸಾಗಿದೆ. ಅವಶೇಷಗಳಡಿ ಸಿಲುಕಿದ ಎಲ್ಲರನ್ನೂ ಪಾರುಗೊಳಿಸಲಾಗಿದೆ.
ನಿನ್ನೆ ಭಾನುವಾರದ ಜಡಮಳೆಗೆ ಮುಂಬಯಿ ಮಹಾನಗರಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ಮೆಟ್ರೋ ಸಿನೇಮಾ ಸಮೀಪ ಮರವೊಂದು ಉರುಳಿ ಬಿದ್ದ ಕಾರಣ ಇಬ್ಬರು ಅಸುನೀಗಿದ್ದರು.
ಭಾರತೀಯ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯ ಪ್ರಕಾರ ಮುಂಬಯಿ ಮಹಾನಗರಿಯಲ್ಲಿ ಮುಂದಿನ 48 ತಾಸುಗಳಲ್ಲಿ ಭಾರೀ ಮಳೆ ಆಗಲಿದೆ. ಬೆಳಗ್ಗೆ ಸಮದ್ರದಲ್ಲಿ ಸುಮಾರು 4 ಮೀಟರ್ ಎತ್ತರದ ಅಲೆಗಳು ಏಳಲಿವೆ.
ಇಂದು ಭಾರೀ ಮಳೆಯಿಂದಾಗಿ ಮಹಾನಗರಿಯ ಹಲಾವರು ಜಂಕ್ಷನ್‌ಗಳು ಜಲಾವೃತವಾಗಿದ್ದು ಲೋಕಲ್ ಟ್ರೈನ್ ಸಂಚಾರ ತೀವ್ರವಾಗಿ ಬಾಧಿತವಾಗಿದೆ. ರಸ್ತೆ ತುಂಬ ನೀರು ನಿಂತಿರುವುದರಿಂದ ವಾಹನಗಳೆಲ್ಲ ನಿಧಾನಗತಿಯಲ್ಲಿ ಚಲಿಸುತ್ತಿವೆ ಎಂದು ವರದಿಗಳು ತಿಳಿಸಿವೆ.