Advertisement
10 ಸಾವು, ಹಲವರಿಗೆ ಗಾಯ ಮಹಾನಗರದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಇದುವರೆಗೆ 10 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ವಿಕ್ರೋಲಿ ವರ್ಷಾ ನಗರದಲ್ಲಿ ಮಳೆಯಿಂದಾಗಿ ಕಟ್ಟಡ ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಕ್ರೋಲಿಯ ಸೂರ್ಯ ನಗರ್‌ದಲ್ಲಿ ಭೂಕುಸಿತದಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ಥಾಣೆಯಲ್ಲಿ ಮನೆ ಕುಸಿದು ಮಹಿಳೆ ಮತ್ತು ಬಾಲಕಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 25 ವರ್ಷದ ವಕೀಲರೊಬ್ಬರು ಕಾರಿನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿರುವ ಬಗ್ಗೆಯೂ ವರದಿಯಾಗಿದೆ.
ಮಂಗಳವಾರ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿನ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಸಚಿವ ವಿನೋದ್ ತಾಬ್ಡೆ ಹೇಳಿದರು.
Related Articles
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಫಡ್ನವೀಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ನೆರೆ ಸ್ಥಿತಿ ನಿಭಾಯಿಸಲು ಕೇಂದ್ರ ಸರಕಾರದಿಂದ ಎಲ್ಲ ಅಗತ್ಯ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
Advertisement
ಹೆಲ್ಪ್ ಲೈನ್ಸಂಚಾರ ಮಾಹಿತಿಗೆ ವಾಟ್ಸ್‌ಆ್ಯಪ್ ಸಂಖ್ಯೆ 8454999999
ಸೆಂಟ್ರಲ್ ರೈಲ್ವೇ ಕಂಟ್ರೋಲ್ ರೂಮ್ 022-22620173
ವೆಸ್ಟರ್ನ್ ರೈಲ್ವೇ ಕಂಟ್ರೋಲ್ ರೂಮ್ 022-23094064
ಬಿಎಂಸಿ ಹೆಲ್ಪ್ ಲೈನ್ 1916 2005ರ ಬಳಿಕ ಇದೇ ಮೊದಲ ಬಾರಿ ಮುಂಬಯಿಯಲ್ಲಿ ಮೂರೂ ರೈಲ್ವೇ ಲೈನ್‌ಗಳು, ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳು ಮುಳುಗಿ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ವೆಸ್ಟರ್ನ್ ಹಾಗೂ ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇಗಳು ಸೇರಿದಂತೆ ಎಲ್ಲ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ನೆರೆಹಾವಳಿ ಕಂಡುಬಂದ ಕಾರಣ ವಾಹನಗಳು ಚಲಿಸಲಿಲ್ಲ.ಮಧ್ಯ ರೈಲ್ವೇ, ಪಶ್ಚಿಮ ರೈಲ್ವೇ ಹಾಗೂ ಹಾರ್ಬರ್ ಲೈನ್ ಈ ಮೂರೂ ರೈಲ್ವೇ ಮಾರ್ಗಗಳು ಮುಳುಗಿ, ಲೋಕಲ್ ರೈಲು ಸ್ಥಗಿತಗೊಂಡಿತು. ವಿಮಾನ ನಿಲ್ದಾಣದ ರನ್‌ವೇಯಲ್ಲಿ ನೀರು ತುಂಬಿದ ಕಾರಣ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ವಿಮಾನಗಳು ಹಾರದೆ ಸಮಸ್ಯೆಯಾಯಿತು. ಲೋವರ್ ಪರೇಲ್, ದಾದರ್, ಕುರ್ಲಾ, ಮಾಟುಂಗಾ, ಅಂಧೇರಿ, ಕಿಂಗ್ ಸರ್ಕರ್, ವರ್ಲಿ, ಸಾಕಿನಾಕ, ವಡಾಲಾ, ಪ್ರಭಾದೇವಿ, ಖಾರ್ ವೆಸ್ಟ್, ಘಾಟ್ ಕೋಪರ್, ಸಯನ್, ಹಿಂದ್ ಮಾತಾ ಸಹಿತ ಪ್ರತಿ ವರ್ಷ ಮಾಮೂಲಿಯಂತೆ ಮುಳುಗಡೆಯಾಗುವ ತಗ್ಗು ಪ್ರದೇಶಗಳಲ್ಲಿ ಸೊಂಟ ಮಟ್ಟಕ್ಕೆ ನೀರು ನಿಂತಿತ್ತು. ಮನೆಯಿಂದ ಹೊರ ಬಂದಿದ್ದವರೆಲ್ಲ ದಾರಿ ಮಧ್ಯೆ ಸಿಲುಕಿ ಅಲ್ಲೇ ಹಾಗೂ ಕಚೇರಿ ಸೇರಿದವರೆಲ್ಲ ಅಲ್ಲಿಯೇ ರಾತ್ರಿ ಕಳೆಯಬೇಕಾಯಿತು. ಮನೆಯಲ್ಲಿ ಉಳಿದವರೇ ಅದೃಷ್ಟವಂತರು ಎಂಬಂತಾಗಿತ್ತು. 50 ಸಾವಿರ ನೌಕರರು ಮನೆಗೆ ಮರಳಲು ಸಂಚಾರ ವ್ಯವಸ್ಥೆಯಿಲ್ಲದೆ ತಮ್ಮ ಕೆಲಸದ ಸ್ಥಳದಲ್ಲಿಯೇ ಉಳಿಯಬೇಕಾಯಿತು. ಸುಮಾರು 20ಕ್ಕೂ ಹೆಚ್ಚು ಮರಗಳು ಉರುಳಿ ಮನೆ ಹಾಗೂ ವಾಹನಗಳಿಗೆ ಹಾನಿಯಾಗಿದೆ. ಹಲವೆಡೆ ಶಾರ್ಟ್ ಸರ್‌ಕ್ಯೂಟ್ ಸಂಭವಿಸಿದೆ. 2005ರ ನೆನಪು
ಈ ಹಿಂದೆ 2005ರ ಜುಲೈ 26, 27ರಂದು ಸುರಿದಿದ್ದ ಭಾರೀ ಮಳೆಯಿಂದ (ಸುಮಾರು 90 ಸೆಂ.ಮೀ.) ಮೂರು ದಿನಗಳ ಕಾಲ ಕಚೇರಿಯಲ್ಲಿದ್ದ ಜನ ಕಚೇರಿಯಲ್ಲೇ ಉಳಿಯುವಂತಾಗಿತ್ತು, ಮನೆಯಲ್ಲಿ ದ್ದವರು ಹೊರಗೆ ಬರಲಾರದ ಸ್ಥಿತಿ ಇತ್ತು. ಈ ಬಾರಿಯೂ ಅದೇ ಸ್ಥಿತಿ ಪುನರಾವರ್ತನೆಯಾಗಿದೆ.
ನಾಲ್ಕು ದಿನಗಳಿಂದ ಮುಂಬಯಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿದ ಪರಿಣಾಮವಾಗಿ ಮುಂಬೈ ಅಕ್ಷರಶಃ ಜಲಾವೃತವಾಗಿದೆ. ಮೂರು ತಾಸಿನಲ್ಲೇ 6.5 ಸೆಂ.ಮೀ. ಮಳೆ ಸುರಿದ ಪರಿಣಾಮ ಇಷ್ಟೆಲ್ಲ ಅನಾಹುತ ಸಂಭವಿಸಿದೆ. 2009ರಲ್ಲಿ ಲೋಕಾರ್ಪಣೆಗೊಂಡ ಬಾಂದ್ರಾ ವರ್ಲಿ ಸೀ ಲಿಂಕ್ ಇದೇ ಮೊದಲ ಬಾರಿಗೆ ರಾತ್ರಿವರೆಗೂ ಸ್ಥಗಿತಗೊಂಡಿತು. ನಾಸಿಕ್, ವಿದರ್ಭ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. 2005ರಲ್ಲೂ ಇಂತಹದೇ ಸ್ಥಿತಿ ನಿರ್ಮಾಣವಾಗಿ 2000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿದ್ದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ ಎಂಬುದು ಮಂಗಳವಾರದ ಸ್ಥಿತಿಯಿಂದ ಮತ್ತೂಮ್ಮೆ ಸಾಬೀತಾಗಿದೆ. ಮನೆ ಹಾಗೂ ಕಚೇರಿಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ಜನ ಹರಸಾಹಸ ಪಟ್ಟರು.
ಛತ್ರಪತಿ ಶಿವಾಜಿ ಟರ್ಮಿನಸ್. ಚರ್ಚ್ ಗೇಟ್, ದಾದರ್, ಬಾಂದ್ರಾ, ಅಂಧೇರಿ, ಬೊರಿವಿಲಿ ಸೇರಿದಂತೆ ಹಲವು ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲುಗಳ ಸಂಚಾರವಿಲ್ಲದೆ ವಿಪರೀತ ಜನಜಂಗುಳಿಯಿತ್ತು. ಇನ್ನೆರಡು ದಿನ ಭಾರೀ ಮುನ್ಸೂಚನೆ ಇದೆ. ಸುರಕ್ಷತಾ ಕ್ರಮಗಳು
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ವಿಕೋಪ ನಿಯಂತ್ರಣ ಕೊಠಡಿಗೆ ಖುದ್ದಾಗಿ ತೆರಳಿ, ಪರಿಸ್ಥಿತಿಯನ್ನು ಅವಲೋಕಿಸಿದರು. ನೆರೆ ಸ್ಥಿತಿ ನಿಭಾಯಿಸುವ ಕುರಿತು ಅಧಿಕಾರಿಗಳ ಸಭೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು. ಮಧ್ಯಾಹ್ನದ ಬಳಿಕ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹೆಲಿಕಾಪ್ಟರ್ ಮತ್ತು ನೌಕಾ ಪಡೆಯ ದೋಣಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ನಗರಪಾಲಿಕೆಯ ಪೌರಾಡಳಿತದ 30 ಸಾವಿರಕ್ಕೂ ಹೆಚ್ಚು ಸಿಬಂದಿ, ಪೊಲೀಸರು, ಅಗ್ನಿಶಾಮಕ ದಳ ಮುಂತಾದವುಗಳ ಸಾವಿರಾರು ಸಿಬಂದಿ ಹಗಲಿರುಳೆನ್ನದೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ನೀರೆತ್ತಲು ಬಿಎಂಸಿ 217 ಪಂಪ್‌ಗ್ಳನ್ನು ಬಳಸಿದೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ ಅತೀ ಹೆಚ್ಚು ಸಮಸ್ಯೆ ಎಲ್ಲಿ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದರಿಂದ ನೆರೆಯಲ್ಲಿ ಸಿಲುಕುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ಕುರ್ಲಾದಲ್ಲಿ 300 ಮಿ.ಮೀ. ಮಳೆ
ಮಂಗಳವಾರ ಸಂಜೆ ಮುಗಿದ ಕಳೆದ 24 ಗಂಟೆಗಳಲ್ಲಿ ಮುಂಬಯಿಯಲ್ಲಿ 152 ಮಿ.ಮೀ. ಮಳೆ ದಾಖಲಾಗಿದೆ ಎನ್ನಲಾಗಿದೆ. ಉಳಿದಂತೆ ಅಂಧೇರಿ-270, ಬಿಕೆಸಿ-204, ಬಾಂದ್ರಾ ಪಶ್ಚಿಮ-247, ಭಾಂಡುಪ್-251, ಚೆಂಬೂರ್-214, ಕಫ್ ಪರೇಡ್-123, ದಹಿಸರ್-190, ಘಾಟ್ಕೊàಪರ್ ಪೂರ್ವ-221, ಗೋರೆಗಾಂವ್-193, ಪರೇಲ್-285 ಮತ್ತು ಕುರ್ಲಾದಲ್ಲಿ ಅತ್ಯಧಿಕ 300 ಮಿ.ಮೀ. ಮಳೆ ದಾಖಲಾಗಿದೆ. ಸ್ಥಳೀಯರ, ಹೊಟೇಲ್ ಉದ್ಯಮಿಗಳ ಸಹಕಾರ
ನೆರೆಯಲ್ಲಿ ಸಿಲುಕಿದ ಜನರಿಗೆ, ಕಚೇರಿಯಲ್ಲಿ ಉಳಿದವರಿಗೆ ಸ್ಥಳೀಯರು ಆಹಾರ – ನೀರು ಹಾಗೂ ಮನೆಗಳಲ್ಲಿ ಆಶ್ರಯ ನೀಡಿದ್ದಾರೆ. ಕಚೇರಿಗಳಲ್ಲಿ, ಗುರುದ್ವಾರಗಳಲ್ಲಿ, ಹೊಟೇಲ್‌ಗಳಲ್ಲಿ ಸಂತ್ರಸ್ತರಿಗೆ ಆಹಾರ ಹಾಗೂ ಆಶ್ರಯ ಕೊಡಲಾಗಿದೆ. ಬಹುಸಂಖ್ಯೆಯಲ್ಲಿರುವ ತುಳು-ಕನ್ನಡಿಗರ ಹೊಟೇಲ್‌ಗಳಲ್ಲೂ ಆಸರೆ ಕಲ್ಪಿಸಿದ್ದರಿಂದ ನೆರೆಪೀಡಿತರಿಗೆ ಅನುಕೂಲವಾಯಿತು. ಹೈಟೈಡ್‌ನಿಂದ ಮತ್ತಷ್ಟು ಸಮಸ್ಯೆ
ಸಂಜೆ 4 ಗಂಟೆ ಬಳಿಕ ಕಡಲಿನಲ್ಲಿ ಹೈ ಟೈಡ್ ಇದ್ದ ಕಾರಣ ಚರಂಡಿ ಹಾಗೂ ನದಿಗಳ ನೀರು ಸಮುದ್ರ ಸೇರದೆ ಉಕ್ಕಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ಒಡಿಶಾ ಭಾಗದಲ್ಲಿ ಉಂಟಾದ ವಾಯುಭಾರ ಕುಸಿತವು ಪಶ್ಚಿಮ ಭಾರತದತ್ತ ಚಲಿಸಿದ್ದರಿಂದ ಮಹಾರಾಷ್ಟ್ರದ ಎಲ್ಲೆಡೆ ಭಾರೀ ಮಳೆಯಾಗಿದೆ. 5ನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆಗೆ ಮಳೆ ಅಡ್ಡಿಯಾಗಿದೆ. ಹಲವೆಡೆ ಪೆಂಡಾಲ್‌ಗಳಲ್ಲಿ ನೀರು ನುಗ್ಗಿ ಸಮಸ್ಯೆಯಾಗಿತ್ತು. ಸಯನ್ ಹಾಗೂ ಕೆಇಎಂ ಆಸ್ಪತ್ರೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಉಂಟು ಮಾಡಿತು. ರೋಗಿಗಳ ಪರದಾಟ ಹೆಚ್ಚಿಸಿದೆ. ಮೊಣಕಾಲ ಮಟ್ಟ ನೀರು ನಿಂತಿದ್ದರಿಂದ ನೆಲಮಟ್ಟದ ಅಂತಸ್ತಿನಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲಾಯಿತು. ಥಾಣೆಯಲ್ಲಿ ಇಬ್ಬರು ಮೃತಪಟ್ಟರೆ, ಗಿರ್ಗಾಂವ್‌ನಲ್ಲಿ ಕಟ್ಟಡವೊಂದರ ಟೆರೇಸ್ ಕುಸಿದು ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮುಂಬಯಿ ಮತ್ತು ದೇಶದ ಪಶ್ಚಿಮ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಅಲ್ಲಿನ ಕುಟುಂಬಗಳ ಮೇಲೆ ವಿಶೇಷವಾಗಿ ಮಕ್ಕಳ ಮೇಲೆ ಮಳೆಯ ಪ್ರಭಾವ ಉಂಟಾಗಿದೆ. ಮಳೆಯಿಂದಾದ ಸ್ಥಿತಿ ನಿಭಾಯಿಸಲು ಸರಕಾರ ಮತ್ತು ಸಾರ್ವಜನಿಕ ಸಂಸ್ಥೆಗಳು ಹಲವು ರಕ್ಷಣಾ ಕ್ರಮಗಳನ್ನು ಕೈಗೆತ್ತಿಕೊಂಡಿವೆ. ಮಳೆ ಸ್ಥಿತಿ ನಿಯಂತ್ರಣಕ್ಕೆ ಸ್ವಯಂಪ್ರೇರಿತ ಗುಂಪುಗಳು ಮತ್ತು ನಾಗರಿಕರು ಒಗ್ಗೂಡಿ ಮುಂದೆ ಬರುತ್ತಿದ್ದಾರೆ ಎಂಬುದು ಸಂತೋಷದಾಯಕ.
-ರಾಮನಾಥ್ ಕೋವಿಂದ್, ರಾಷ್ಟ್ರಪತಿ ಕೇಂದ್ರ ಸರಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಸಿಎಂ ಫಡ್ನವೀಸ್ ಅವರಿಗೆ ಭರವಸೆ ನೀಡಿದ್ದೇನೆ. ಪ್ರವಾಹದಲ್ಲಿ ಸಿಲುಕಿರುವ ನಾಗರಿಕರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ತಂಡಗಳು ಮುಂಬಯಿಗೆ ತೆರಳಿವೆ.
-ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ