ಮುಂಬೈ : ನೀಲಿ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಪ್ರಕರಣದಡಿ ನಟಿ ಶಿಲ್ಪಾ ಶೆಟ್ಟಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಇದೇ ಪ್ರಕರಣದಡಿ ಈಗಾಗಲೇ ಬಂಧನಕ್ಕೊಳಗಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಸಮೇತ ಮುಂಬೈ ಜುಹುನಲ್ಲಿರುವ ಮನೆಗೆ ಧಾವಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರಂತೆ.
ಶಿಲ್ಪಾ ಶೆಟ್ಟಿಯವರು ‘ವಯಾನ್’ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಮುಂಬೈನ ಅಂಧೇರಿಯಲ್ಲಿರುವ ಈ ಕಂಪನಿ ಕಚೇರಿ ಮೇಲೆ ಇತ್ತೀಚಿಗೆ ದಾಳಿ ನಡೆಸಿದ್ದ ಕ್ರೈಂ ಬ್ರ್ಯಾಂಚ್ ನ ಅಧಿಕಾರಿಗಳು ಪೋರ್ನ್ ಮೂವಿಗಳ ಕುರಿತು ಸಾಕಷ್ಟು ಡಾಟಾ ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆ ಇಂದು ನಿವಾಸಕ್ಕೆ ಧಾವಿಸಿರುವ ಪೊಲೀಸ್ ಅಧಿಕಾರಿಗಳು ಶಿಲ್ಪಾ ಶೆಟ್ಟಿಯವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗುತ್ತಿದೆ.
ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆಬೇರೆ ಆಯಪ್ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಈಗ ಅವರನ್ನು ಜುಲೈ 27ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಅಪರಾಧ ವಿಭಾಗದ ಒಂದು ತಂಡ ಜುಹುದಲ್ಲಿರುವ ರಾಜ್ ಕುಂದ್ರಾ ಅವರ ಒಡೆತನದ ಬಂಗಲೆ ಮೇಲೆ ದಾಳಿ ನಡೆಸಿದೆ.
ರಾಜ್ ಕುಂದ್ರಾ ತನಿಖೆಗೆ ಸೂಕ್ತ ಸಹಕಾರ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ, ಪೊಲೀಸರಿಗೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಈ ಕಾರಣಕ್ಕೆ ಹೆಚ್ಚುವರಿಯಾಗಿ 7 ದಿನಗಳ ಕಾಲ ರಾಜ್ ಕುಂದ್ರಾ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಪೊಲೀಸರು ಅನುಮತಿ ಕೇಳಿದ್ದರು. ಅಂತಿಮವಾಗಿ ನ್ಯಾಯಾಲಯ ರಾಜ್ ಕುಂದ್ರಾ ಅವರನ್ನು ನಾಲ್ಕು ದಿನ ಮಾತ್ರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ನೀಡಿದೆ.