ಮುಂಬಯಿ: ನಗರದ ಖ್ಯಾತ ರಂಗಕರ್ಮಿ, ಲಿಮ್ಕಾ ಖ್ಯಾತಿಯ ಕಲಾಜಗತ್ತು ಡಾ| ವಿಜಯ ಕುಮಾರ್ ಶೆಟ್ಟಿ ತೋನ್ಸೆ ಅವರ ನಿರ್ದೇಶನ ಮತ್ತು ನಿರ್ಮಾಪಕತ್ವದ ಪತ್ತನಾಜೆ ತುಳು ಚಲನಚಿತ್ರದ ಪ್ರೀಮಿಯರ್ ಶೋ ಅ. 8ರಂದು ಸಯಾನ್ ರೂಪಂ ಸಿನೆಮಾ ಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಸಿಇಒ ಕನ್ನಡಿಗ ಶಶಿಕಿರಣ್ ಶೆಟ್ಟಿ ಅವರು ಚಿತ್ರಕ್ಕೆ ಶುಭ ಹಾರೈಸಿ ಮಾತನಾಡಿ, ಪತ್ತನಾಜೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಚಿತ್ರವಾಗಿದ್ದು, ನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳ ಪ್ರತಿಬಿಂಬವಾಗಿದೆ.ಮುಂಬಯಿಯ ತುಳು ಕನ್ನಡಿಗರು ನೋಡಲೇ ಬೇಕಾದ ಚಲನಚಿತ್ರ ಇದಾಗಿದೆ. ಪಾತ್ರಗಳ ಆಯ್ಕೆಯಿಂದ ಹಿಡಿದು, ಸಂಗೀತವಂತು ಅದ್ಭುತ ವಾಗಿ ಮೂಡಿಬಂದಿದೆ. ನಾಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಈ ಚಲನಚಿತ್ರವು ಯುವಪೀಳಿಗೆಗೆ ಹಲವು ವಿಷಯಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.
ಚಿತ್ರದ ರೂವಾರಿ ಕಲಾಜಗತ್ತು ಡಾ| ವಿಜಯಕುಮಾರ್ ಶೆಟ್ಟಿ ಅವರು ಚಲನಚಿತ್ರದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿ, ತುಳುಚಿತ್ರದಲ್ಲಿ ತುಳುವರಿಗೆ ಹೊಸತು ಏನನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಪತ್ತನಾಜೆ ಉತ್ತಮ ರೀತಿಯ ಮೂಡಿ ಬಂದಿದೆ. ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದೆ. ಮುಂಬಯಿಯಲ್ಲಿ ನನ್ನ ಎಲ್ಲಾ ಅಭಿಮಾನಿಗಳಿಗೆ ಪತ್ತನಾಜೆಯನ್ನು ವೀಕ್ಷಿಸಲು ಪ್ರೀಮಿಯರ್ ಶೋ ಮೂಲಕ ಅವಕಾಶ ನೀಡಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ನೀವೆಲ್ಲರೂಬಂದಿರುವುದು ಸಂತೋಷ ತಂದಿದೆ. ಪತ್ತನಾಜೆ ಚಿತ್ರವನ್ನು ಮುಂಬಯಿಯ ಎಲ್ಲಾ ಸಂಘ-ಸಂಸ್ಥೆಗಳು ಪ್ರದರ್ಶಿಸಲು ಮುಂದಾಗಬೇಕು. ಚಿತ್ರವನ್ನು ಗೆಲ್ಲಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ ನಮ್ಮನ್ನು ಹರಸುವಂತೆ ವಿನಂತಿಸಿದರು.
ಆರತಿ ಶಶಿಕಿರಣ್ ಶೆಟ್ಟಿ, ಮೂಲ್ಕಿ ವಿಜಯಾ ಕಾಲೇಜಿನ ಆಡಳಿತ ಸಮಿತಿಯ ಶಮೀನಾ ಆಳ್ವ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಜಯ ಕೃಷ್ಣ ಶೆಟ್ಟಿ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಪತ್ರಕರ್ತ ಏಳಿಂಜೆ ನಾಗೇಶ್, ಚಿತ್ರದ ಸಹ ನಿರ್ಮಾಪಕ ಮಂಜುನಾಥ ಬನ್ನೂರು, ಪ್ರೇಮ್ ಶೆಟ್ಟಿ ಸುರತ್ಕಲ…, ವಿಜಯ… ಕುಮಾರ್ ಕೊಡಿಯಾಲ್‌ಬೈಲ್, ಸಚಿನ್ ಎ. ಎಸ್. ಉಪ್ಪಿನಂಗಡಿ, ರಾಜೇಶ್ ಕುಡ್ವಾ, ಫ್ರಾಂಕ್ ಫೆರ್ನಾಂಡಿಸ್, ಸೂಜ್ ಪಾಂಡೇಶ್ವರ್, ಸುಜಿತ್ ನಾಯಕ್, ಗಣೇಶ್ ಶೆಟ್ಟಿ ಮಿಜಾರ್, ಕಲಾವಿದರಾದ ಸುರೇಂದ್ರ ಕುಮಾರ್ ಹೆಗ್ಡೆ, ರೇಷ್ಮಾ ಶೆಟ್ಟಿ, ಕಾಜಲ… ಕುಂದರ್ ಅಲ್ಲದೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿದೇಶದಿಂದ ಆಗಮಿಸಿದ ಗಣ್ಯರು, ಉದ್ಯಮಿಗಳು ಉಪಸ್ಥಿತರಿದ್ದರು.
ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ದಯಾ ಸಾಗರ ಚೌಟ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನೂರಾರು ಮಂದಿ ಕಲಾಪ್ರೇಮಿಗಳು ಉಪಸ್ಥಿತರಿದ್ದು ಚಿತ್ರವನ್ನು ವೀಕ್ಷಿಸಿ ಕಲಾಜಗತ್ತು ವಿಜಯಕುಮಾರ್ ಶೆಟ್ಟಿ ಹಾಗೂ ಕಲಾವಿದರನ್ನು ಅಭಿನಂದಿಸಿದರು.