Advertisement

ಮುಂಬಯಿ ಕನ್ನಡ ಸಂಘ: ಕನ್ನಡ ಸರ್ಟಿಫಿಕೇಟ್‌ ತರಗತಿಗೆ ಚಾಲನೆ

11:48 AM Jul 17, 2018 | Team Udayavani |

ಮುಂಬಯಿ: ಅತೀ ಹೆಚ್ಚು ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾದ ಕನ್ನಡಿಗರ ಭಾಷೆ ಭೌಗೋಳಿಕವಾಗಿಯೇ ಪಸರಿಸಿದೆ. ಭಾಷಾ ಪರಿಣತಿಯಿಂದ ಜಾಗತಿಕ ಜ್ಞಾನ ಹೆಚ್ಚುತ್ತದೆ ಮತ್ತು ಆಯಾ ಭಾಷೆಗಳಲ್ಲಿನ ಸಾಹಿತ್ಯ ಸಂಸ್ಕೃತಿಯ ಅರಿವಾಗುತ್ತದೆ.  ಆದುದರಿಂದ ಅವಕಾಶ ಒದಗಿದಾಗ ಅಧಿಕ ಭಾಷೆಗಳನ್ನು ಒಲಿಸಿಕೊಳ್ಳಬೇಕು. ಅದು ನಮ್ಮ ಭಾಗ್ಯವಾಗಿ ಪರಿಣಮಿಸಬಲ್ಲದು ಎಂದು ಹವ್ಯಕ ವೆಲ್ಫೆàರ್‌ ಟ್ರಸ್ಟ್‌ನ ಮುಖವಾಣಿ “ಹವ್ಯಕ ಸಂದೇಶ’ ಮಾಸಿಕದ ಸಂಪಾದಕಿ, ಕರ್ನಾಟಕ ಸಂಘ ಮುಂಬಯಿ ಇದರ  ಕಾನೂನು ಸಲಹಾಗಾರ್ತಿ ನ್ಯಾಯವಾದಿ ಅಮಿತಾ ಎಸ್‌. ಭಾಗÌತ್‌ ಅಭಿಪ್ರಾಯಪಟ್ಟರು.

Advertisement

ಜು. 15 ರಂದು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ತಳಮಹಡಿಯ ಸಭಾಗೃಹದಲ್ಲಿ ನಡೆದ ಮುಂಬಯಿ ಕನ್ನಡ ಸಂಘ ಶೈಕ್ಷಣಿಕ ಸಾಲಿನ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ ನ ಉದ್ಘಾಟನೆ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬಯಿ ನೆಲದಲ್ಲಿ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಬೆಳೆಸುತ್ತಾ ಕನ್ನಡದ ಎಲ್ಲಾ ಮನಸ್ಸುಗಳನ್ನು ಒಟ್ಟುಗೂಡಿಸುತ್ತಾ ಕನ್ನಡದ ಸಾಹಿತ್ಯ, ಅಭಿರುಚಿಯನ್ನು ಹುಟ್ಟುಹಾಕುತ್ತಾ ಅದಕ್ಕೆ ನೀರೆರೆದು ಪೋಷಿಸುತ್ತಾ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಈ ಸಂಘದ ಭಾಷಾಭಿಮಾನ ಸ್ತುತ್ಯರ್ಹ. ಭಾರತೀಯ ಎಲ್ಲಾ ಭಾಷೆಗಳೂ ಬೇರೆಯಾಗಿದ್ದರೂ ಸಂಸ್ಕೃತಿ ಮಾತ್ರ ಒಂದಾಗಿದೆ. ಎಲ್ಲಾ ಭಾಷೆಗಳೂ ಮೌಲ್ಯಯುತವಾಗಿವೆ ಎಂದು ನುಡಿದು ವಿವಿಧತೆಯಲ್ಲಿ ಕನ್ನಡದ ಹಿರಿಮೆಯನ್ನು ಕಾವ್ಯಾತ್ಮಕವಾಗಿ ಬಣ್ಣಿಸಿ ನೆರೆದ ಕನ್ನಡಾಭಿಮಾನಿಗಳಿಗೆ ಶುಭಹಾರೈಸಿದರು.

ಮುಖ್ಯ ಅತಿಥಿ ಅಮಿತಾ ಭಾಗÌತ್‌ ಅವರು  2017-2018 ನೇ ಶೈಕ್ಷಣಿಕ  ಸಾಲಿನ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.  ಉಪಾಧ್ಯಕ್ಷ ಡಾ| ಎಸ್‌. ಕೆ. ಭವಾನಿ ಪ್ರಸ್ತಾವನೆಗೈದು ಕನ್ನಡದ ಕೃಷಿಗೆ ಇದೊಂದು ಪೂರಕ ಕಾಯಕವಾಗಿದೆ. ಸಂಘವು ಸದಾ ಕ್ರೀಯಾಶೀಲವಾಗಿ ಈ ತರಗತಿಗಳನ್ನು ನಡೆಸುತ್ತಾ ಕನ್ನಡೇರರಲ್ಲೂ ಭಾಷೆಯನ್ನು ಪಸರಿಸುತ್ತಿದೆ. ಇಲ್ಲಿನ ಶಿಕ್ಷಕರಿಗೆ ಶಿಷ್ಯ ಇಚ್ಛೆಯೇ ಪ್ರೇರಣೆಯಾಗಿದೆ. ನನ್ನ ಸೌಭಾಗ್ಯವತಿಯೂ 15 ವರ್ಷ ತರಗತಿ ನಡೆಸಿ ಕನ್ನಡಾಂಭೆಯ ಸೇವೆಗೈದಿದ್ದರು. ಸುಮಾರು 25 ವರ್ಷಗಳಿಂದ ಹೊರನಾಡಿನಲ್ಲಿ ಭಾಷಾಭಿಮಾನ ಬೆಳೆಸಿ ಉಳಿಸಿ ಕಲಿಸಿ ಮುನ್ನಡೆಯುತ್ತಿರುವುದು ಸ್ವಾಭಿಮಾನವೇ ಸರಿ. ಯಾವ ಭಾಷೆಯನ್ನೂ ಯಾಕೆ ಕಲಿಯಬೇಕು ಎನ್ನುವುದಕ್ಕಿಂತ ಎಲ್ಲಾ ಭಾಷೆಗಳನ್ನು ಕಲಿತು ಬಹುಭಾಷಾ ಮೇಧಾವಿಗಳಾಗಬೇಕು ಎನ್ನುವ ಮನೋಭಾವ ದೊಡ್ಡದು. ಬಹುಭಾಷೆಗಳಿಂದ ಸಹೋದರತೆ ಬೆಳೆಯುತ್ತದೆ. ಆದ್ದರಿಂದಲೇ ಭಾಷಾ ಮಾಧ್ಯಮ ಸೌಹಾರ್ದತೆಗೆ ಪೂರಕವಾಗಿದೆ ಎಂದರು.

ಸಂಘದ ಕನ್ನಡ ತರಬೇತಿ ಶಿಕ್ಷಕಿ ಅರ್ಚನಾ ಪೂಜಾರಿ ಮಾತನಾಡಿ, ಮರಾಠಿ ನೆಲದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವುದು ನನ್ನ ಸೌಭಾಗ್ಯವೇ ಸರಿ. ಅವರಲ್ಲಿನ ಭಾಷಾಭಿಮಾನ ನನ್ನನ್ನು ಪ್ರೋತ್ಸಾಹಿಸಿದೆ ಎನ್ನುತ್ತಾ ಕನ್ನಡ ಅಧ್ಯಾಯನ ಮಾಡಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಇಂಡಿಯನ್‌ ವರ್ಚುವಲ್‌ ಯುನಿವರ್ಸಿಟಿ ಫಾರ್‌ ಪೀಸ್‌ ಆ್ಯಂಡ್‌ ಎಜ್ಯುಕೇಶನ್‌ ಬೆಂಗಳೂರು ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ಗೌರವ ಡಾಕ್ಟರೇಟ್‌ಗೆ ಪಾತ್ರರಾದ ಮತ್ತು ಇತ್ತೀಚೆಗೆ ಬೆಂಗಳೂರುರತ್ನ ಮಾಸಿಕದಿಂದ ಬೆಂಗಳೂರು ರತ್ನ-2018 ಪ್ರಶಸ್ತಿಗೆ ಭಾಜನರಾದ ಕನ್ನಡ ಸಂಘದ ಮಹಿಳಾ ವಿಭಾಗಧ್ಯಕ್ಷೆ ಡಾ| ರಜನಿ  ವಿ. ಪೈ ಅವರಿಗೆ ಸಂಘದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು. ಸಂಘದ ವಾಚನಾಲಯ ಮುಖ್ಯಸ್ಥ ಎಸ್‌. ಕೆ. ಪದ್ಮನಾಭ ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳೂ ತಮ್ಮ ಕನ್ನಡ ಭಾಷಾ ಕಲಿಕೆಯ ಅನುಭವ ಹಂಚಿಕೊಂಡರು. ಬಳಿಕ ನೂತನ ವಿದ್ಯಾರ್ಥಿಗಳ ಪರಿಚಯ ಮಾಡಿ, ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ಗೆ ಸ್ವಾಗತಿಸಲಾಯಿತು.

Advertisement

ರಜನಿ ವಿ. ಪೈ ಪ್ರಾರ್ಥನೆಗೈದರು. ಅಧ್ಯಕ್ಷ ಗುರುರಾಜ್‌ ಎಸ್‌. ನಾಯಕ್‌ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಗೌರವ  ಪ್ರಧಾನ   ಕಾರ್ಯದರ್ಶಿ ಸತೀಶ್‌ ಎನ್‌. ಬಂಗೇರ ನಗದು ಬಹುಮಾನ ಸ್ವೀಕೃತರ ಹಾಗೂ ಶಾರದಾ ಯು. ಅಂಬೆಸಂಗೆ ಪ್ರಮಾಣಪತ್ರ ಪುರಸ್ಕೃತರ ಪಟ್ಟಿ ವಾಚಿಸಿದರು. ಗೌರವ ಜೊತೆ ಕಾರ್ಯದರ್ಶಿ ಸೋಮನಾಥ್‌ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಸುಧಾಕರ್‌ ಸಿ. ಪೂಜಾರಿ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next