ಮುಂಬಯಿ: ಜಗತ್ತಿನಲ್ಲಿ ವಾಹನ ಚಾಲನೆಯ ವಿಚಾರದಲ್ಲಿ ಅತ್ಯಂತ ಹೆಚ್ಚು ಒತ್ತಡದ ನಗರ ಎಂಬ ಕುಖ್ಯಾತಿಗೆ ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ಪಾತ್ರವಾಗಿದೆ.
ಯುನೈಟೆಡ್ ಕಿಂಗ್‌ಡಮ್‌ನ “ಹಿಯಾಕಾರ್’ ಎಂಬ ಕಂಪೆನಿ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಜಗತ್ತಿನ ವಿವಿಧ ನಗರಗಳ ಪೈಕಿ ಮುಂಬಯಿ 36ನೇ ಅತ್ಯಂತ ಜನನಿಬಿಡ ನಗರವಾಗಿದ್ದು, ಇಲ್ಲಿ ವಾಹನ ಚಾಲನೆ ಮಾಡುವುದು ಸವಾಲಿನ ಕೆಲಸ ಎಂಬ ಅಪಖ್ಯಾತಿಗೂ ಪಾತ್ರವಾಗಿದೆ. ಕರ್ನಾ ಟಕದ ರಾಜಧಾನಿ ಬೆಂಗಳೂರು ಕೂಡ ಈ ಪಟ್ಟಿಯಲ್ಲಿದ್ದು, 11 ರ್‍ಯಾಂಕ್‌ನಲ್ಲಿದ್ದು 4.7 ಅಂಕ ಪಡೆದು ಕೊಂಡಿದೆ. ಮುಂಬಯಿ ಮತ್ತು ಹೊಸದಿಲ್ಲಿಗೆ ಹತ್ತು ಅಂಕಗಳ ಪೈಕಿ ಕ್ರಮವಾಗಿ 7.4 ಮತ್ತು 5.9 ಅಂಕ ದೊರೆತಿದೆ.
ಆಯಾ ನಗರದಲ್ಲಿ ಇರುವ ಕಾರುಗಳು, ಜನರ ಕಾರು ಖರೀದಿಯ ಸಾಮ ರ್ಥ್ಯ, ಸಂಚಾರ ದಟ್ಟಣೆ, ರಸ್ತೆ ಗಳ ಗುಣಮಟ್ಟ, ಸಾರ್ವಜನಿಕ ಸಾರಿಗೆಗೆ ಇರುವ ಅವಕಾಶ, ಪ್ರತೀ ವರ್ಷ ನಗರದಲ್ಲಿ ಉಂಟಾ ಗುವ ಅಪಘಾತಗಳು ಸೇರಿದಂತೆ ಹಲವು ಅಂಶಗಳನ್ನು ಗಮನಿಸಿ ಈ ರ್‍ಯಾಂಕಿಂಗ್ ನೀಡಲಾಗಿದೆ. ಜಗತ್ತಿನ ಇತರ ರಾಷ್ಟ್ರಗಳ ಶ್ರೇಯಾಂಕ ಗಮನಿಸುವುದಿದ್ದರೆ ಪೆರು ರಾಜಧಾನಿ ಲಿಮಾ 10ರಲ್ಲಿ 2.1 ಅಂಕ ಪಡೆಯುವ ಮೂಲಕ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಒತ್ತಡದಲ್ಲಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಪಾನ್‌ನ ಒಸಾಕಾ 4.9 ಅಂಕ ಲಭಿಸಿದೆ.