Advertisement

ಪ್ಲೇ ಆಫ್ ನಿರೀಕ್ಷೆಯಲ್ಲಿ ಮುಂಬೈ

11:52 AM May 20, 2018 | Team Udayavani |

ಹೊಸದಿಲ್ಲಿ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ರವಿವಾರ ನಡೆಯುವ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ವನ್ನು ಎದುರಿಸಲಿದ್ದು ಗೆಲುವಿನ ನಿರೀಕ್ಷೆಯಲ್ಲಿದೆ. ಈ ಮೂಲಕ ಪ್ಲೇ ಆಫ್ಗೆ ತೇರ್ಗಡೆಯಾಗುವ ಕನಸು ಕಾಣುತ್ತಿದೆ.
 
ಅತ್ಯಂತ ಶ್ರೀಮಂತ ಲೀಗ್‌ ಆಗಿರುವ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಮಾತ್ರ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ಇನ್ನುಳಿದ 2 ಸ್ಥಾನಕ್ಕಾಗಿ 5 ತಂಡ ಗಳು ಸ್ಪರ್ಧೆಯಲ್ಲಿವೆ. ಡೆಲ್ಲಿ ಹೊರತುಪಡಿಸಿ ಉಳಿದ ಮುಂಬೈ, ಪಂಜಾಬ್‌, ರಾಜಸ್ಥಾನ್‌, ಬೆಂಗಳೂರು, ಕೋಲ್ಕತಾ ತಂಡಗಳಿಗೆ ಮುನ್ನಡೆಯುವ ಅವಕಾಶವಿದೆ. ಹಾಗಾಗಿ ಪ್ರತಿಯೊಂದು ಪಂದ್ಯವೂ ತೀವ್ರ ಪೈಪೋಟಿಯಿಂದ ಸಾಗಲಿದೆ.
 
ತಲಾ 12 ಅಂಕಗಳನ್ನು ನಾಲ್ಕು ತಂಡಗಳು ಹೊಂದಿವೆ. ಇದರಲ್ಲಿ ಮುಂಬೈ ಕೂಡ ಸೇರಿದೆ. ರನ್‌ಧಾರಣೆಯಲ್ಲಿ ಪ್ಲಸ್‌ನಲ್ಲಿರುವುದು ಮುಂಬೈಗೆ ವರವಾಗುವ ಸಾಧ್ಯತೆಯಿದೆ. ಹಾಗಾಗಿ ಭಾರೀ ಅಂತರದಿಂದ ಗೆದ್ದು ಪ್ಲೇ ಆಫ್ಗೆ ಹೋಗುವುದು ಮುಂಬೈಯ ಯೋಜನೆಯಾಗಿದೆ.

Advertisement

ರವಿವಾರದ ಇನ್ನೊಂದು ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ವನ್ನು ಎದುರಿಸಲಿದೆ. ಚೆನ್ನೈ ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆ ಯಾಗಿದೆ. ಆರಂಭದಲ್ಲಿ ಭರ್ಜರಿ ಆಟವಾಡಿ ಗೆಲ್ಲುವ ಫೇವರಿಟ್‌ ಆಗಿದ್ದ ಪಂಜಾಬ್‌ ಆಬಳಿಕ ಕೆಲವು ಪಂದ್ಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಅಂತಿಮ ಲೀಗ್‌ನಲ್ಲಿ ಭಾರೀ ಅಂತರದಿಂದ ಗೆದ್ದರೆ ಮುನ್ನಡೆಯುವ ಅವಕಾಶವಿದೆ.

ಆತ್ಮವಿಶ್ವಾಸದಲ್ಲಿ ಡೆಲ್ಲಿ
ರನ್‌ಧಾರಣೆ +0.384 ಇರುವ ಕಾರಣ ಮುಂಬೈ ಅಂತಿಮ ಲೀಗ್‌ನಲ್ಲಿ ಗೆದ್ದರೆ ಮುನ್ನಡೆಯುವ ಅವಕಾಶ ಪಡೆದಿದೆ. ಎದುರಾಳಿ ಡೆಲ್ಲಿ ತಂಡ ಇಷ್ಟರವರೆಗೆ ಆಡಿದ 13 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು ಕೇವಲ 8 ಅಂಕ ಗಳಿಸಿದೆ. ಆದರೆ ಡೆಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ತಂಡವನ್ನು 34 ರನ್ನುಗಳಿಂದ ಸೋಲಿಸಿರುವುದು ಅದಕ್ಕೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿದೆ. ಅದೇ ಉತ್ಸಾಹದಿಂದ ಮುಂಬೈ ವಿರುದ್ಧ ಆಡಿ ಗೆಲುವಿಗಾಗಿ ಪ್ರಯತ್ನಿಸುವ ಸಾಧ್ಯತೆಯೂ ಇದೆ. ಚೆನ್ನೈ ವಿರುದ್ಧ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರೂ ಆಬಳಿಕ ನಿಖರ ದಾಳಿ ಸಂಘಟಿಸಿ ಚೆನ್ನೈಯ ರನ್‌ ಓಟಕ್ಕೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಗಿದೆ. 

ಮುಂಬೈ ಮತ್ತು ಡೆಲ್ಲಿ ನಡುವೆ ಈ ಮೊದಲು ನಡೆದ ಪಂದ್ಯದಲ್ಲಿ ಡೆಲ್ಲಿ 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತ್ತು. ಅಂತಿಮ ಓವರಿನಲ್ಲಿ ಡೆಲ್ಲಿ ರೋಚಕ ಜಯ ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next