Advertisement

IPL 2020 : ಎಡವಿದ ಆರ್‌ಸಿಬಿ; ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಮುಂಬೈ

11:13 PM Oct 28, 2020 | mahesh |

ಅಬುಧಾಬಿ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 2020ರ ಐಪಿಎಲ್‌ ಕೂಟದ ಪ್ಲೇ ಆಫ್‌ ಸುತ್ತಿಗೆ ಅಧಿಕೃತವಾಗಿ ಲಗ್ಗೆ ಇರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬುಧವಾರದ ಪಂದ್ಯದಲ್ಲಿ ಅದು ಆರ್‌ಸಿಬಿಯನ್ನು 5 ವಿಕೆಟ್‌ಗಳಿಂದ ಸೋಲಿಸಿ ಈ ಸಾಧನೆಗೈದಿತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಕೊಹ್ಲಿ ಪಡೆ ಭರ್ಜರಿ ಆರಂಭದ ಬಳಿಕ ಕುಸಿತ ಅನುಭವಿಸಿ 6 ವಿಕೆಟಿಗೆ 164 ರನ್‌ ಮಾಡಿತು. ಇದರಲ್ಲಿ ಪಡಿಕ್ಕಲ್‌ ಕೊಡುಗೆ 74 ರನ್‌. ಬುಮ್ರಾ 14 ರನ್ನಿಗೆ 3 ವಿಕೆಟ್‌ ಕಿತ್ತರು. ಜವಾಬಿತ್ತ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್‌ ಬಾರಿಸಿತು.

ಇದು ಮುಂಬೈ ಸಾಧಿಸಿದ 8ನೇ ಗೆಲುವು. ವನ್‌ಡೌನ್‌ ಬ್ಯಾಟ್ಸ್‌ ಮನ್‌ ಸೂರ್ಯಕುಮಾರ್‌ ಯಾದವ್‌ ಹೊಡಿಬಡಿ ಬ್ಯಾಟಿಂಗ್‌ ಮೂಲಕ ಅಜೇಯ 79 ರನ್‌ ಬಾರಿಸಿ ಮುಂಬೈ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದರು. 43 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 10 ಫೋರ್‌, 3 ಸಿಕ್ಸರ್‌ ಒಳಗೊಂಡಿತ್ತು.

ಪಡಿಕ್ಕಲ್‌-ಫಿಲಿಪ್‌ ಜೋಶ್‌
ಆರನ್‌ ಫಿಂಚ್‌ ಅನುಪಸ್ಥಿತಿಯಲ್ಲಿ ದೇವದತ್ತ ಪಡಿಕ್ಕಲ್‌ ಜತೆ ಆಸ್ಟ್ರೇಲಿಯದ ಮತ್ತೋರ್ವ ಆಟಗಾರ ಜೋಶ್‌ ಫಿಲಿಪ್‌ ಇನ್ನಿಂಗ್ಸ್‌ ಆರಂಭಿಸಿದರು. ಇಬ್ಬರ ಆಟವೂ ಭಾರೀ ಜೋಶ್‌ನಲ್ಲಿತ್ತು. ಪವರ್‌ ಪ್ಲೇ ಅವಧಿಯಲ್ಲಿ ಇಬ್ಬರೂ ಸೇರಿ ಮುಂಬೈ ಬೌಲರ್‌ಗಳ ಮೇಲೆರಗಿ ಹೋದರು. ಪೈಪೋಟಿಗೆ ಬಿದ್ದವರಂತೆ ಬ್ಯಾಟ್‌ ಬೀಸತೊಡಗಿದರು. 6 ಓವರ್‌ಗಳಲ್ಲಿ 54 ರನ್‌ ಹರಿದು ಬಂತು. ಅಷ್ಟರಲ್ಲಾಗಲೇ 9 ಬೌಂಡರಿ, ಒಂದು ಸಿಕ್ಸರ್‌ ಸಿಡಿದಾಗಿತ್ತು.

ಪಡಿಕ್ಕಲ್‌-ಫಿಲಿಪ್‌ 7.5 ಓವರ್‌ ತನಕ ಆಡಿ 71 ರನ್‌ ಪೇರಿಸಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದು ಬರುತ್ತಿತ್ತು. ಆಗ ಚಹರ್‌ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋದ ಫಿಲಿಪ್‌ ಸ್ಟಂಪ್ಡ್ ಆದರು. ಆರ್‌ಸಿಬಿ ಆರಂಭಕಾರನ ಗಳಿಕೆ 24 ಎಸೆತಗಳಿಂದ 33 ರನ್‌ (4 ಫೋರ್‌, 1 ಸಿಕ್ಸರ್‌).

Advertisement

ಅನಂತರ ಕ್ರೀಸ್‌ ಇಳಿದ ಕ್ಯಾಪ್ಟನ್‌ ಕೊಹ್ಲಿ ಕೇವಲ 9 ರನ್‌ ಮಾಡಿ ಬುಮ್ರಾ ಮೋಡಿಗೆ ಸಿಲುಕಿದರು. ಇದರೊಂದಿಗೆ ಬುಮ್ರಾ ಐಪಿಎಲ್‌ನಲ್ಲಿ 100 ವಿಕೆಟ್‌ ಉರುಳಿಸಿದ ಸಾಧನೆಗೈದರು. ಸ್ವಾರಸ್ಯವೆಂದರೆ, ಬುಮ್ರಾ ಅವರ ಮೊದಲ ಐಪಿಎಲ್‌ ವಿಕೆಟ್‌ ಕೂಡ ಕೊಹ್ಲಿಯದೇ ಆಗಿತ್ತು!

ಪಡಿಕ್ಕಲ್‌ ಅರ್ಧ ಶತಕ
ಈ ನಡುವೆ ಭರವಸೆಯ ಎಡಗೈ ಆರಂಭಕಾರ ಪಡಿಕ್ಕಲ್‌ ಅರ್ಧ ಶತಕದ ಮೂಲಕ ಮೆರೆದಾಡಿದರು. 17ನೇ ಓವರ್‌ ತನಕ ನಿಂತು 45 ಎಸೆತಗಳಿಂದ 74 ರನ್‌ ಹೊಡೆದರು. ಸಿಡಿಸಿದ್ದು 12 ಬೌಂಡರಿ ಹಾಗೂ ಒಂದು ಸಿಕ್ಸರ್‌. ಇದು ಈ ಕೂಟದಲ್ಲಿ ಅವರ 4ನೇ ಫಿಫ್ಟಿ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದ ಭಾರತದ ಆಟಗಾರನೊಬ್ಬ ಮೊದಲ ಐಪಿಎಲ್‌ ಋತುವಿನಲ್ಲೇ ಸರ್ವಾಧಿಕ 4 ಅರ್ಧ ಶತಕ ಹೊಡೆದ 3ನೇ ನಿದರ್ಶನ ಇದಾಗಿದೆ. ಡೆಲ್ಲಿಯ ಶಿಖರ್‌ ಧವನ್‌ (2008) ಮತ್ತು ಶ್ರೇಯಸ್‌ ಅಯ್ಯರ್‌ (2015) ಉಳಿದಿಬ್ಬರು. ಮುಂಬೈ ಎದುರಿನ ಹಿಂದಿನ 3 ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ ಎಬಿಡಿ ಇಲ್ಲಿ 15 ರನ್ನಿಗೆ ಆಟ ಮುಗಿಸಿದರು. 12 ಎಸೆತಗಳ ಈ ಚುಟುಕು ಇನ್ನಿಂಗ್ಸ್‌ ನಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು.

ಬುಮ್ರಾ ಘಾತಕ ದಾಳಿ
ದ್ವಿತೀಯ ಸ್ಪೆಲ್‌ ದಾಳಿಗಿಳಿದ ಬುಮ್ರಾ ಒಂದೇ ಓವರಿನಲ್ಲಿ ದುಬೆ ಮತ್ತು ಪಡಿಕ್ಕಲ್‌ ವಿಕೆಟ್‌ ಕಿತ್ತು ಮುಂಬೈಗೆ ಮೇಲುಗೈ ಒದಗಿಸಿದರು. “ಡಬಲ್‌ ವಿಕೆಟ್‌ ಮೇಡನ್‌’ ಮೂಲಕ ಬುಮ್ರಾ ಗಮನ ಸೆಳೆದರು. ಮುಂದಿನ ಓವರಿನಲ್ಲಿ ಮಾರಿಸ್‌ ವಿಕೆಟ್‌ ಬಿತ್ತು. ಅಲ್ಲಿಗೆ ಆರ್‌ಸಿಬಿಯ ದೊಡ್ಡ ಮೊತ್ತದ ಯೋಜನೆ ವಿಫ‌ಲವಾಯಿತು.

ಆರ್‌ಸಿಬಿ: ಮೂರು ಬದಲಾವಣೆ
ಈ ಪಂದ್ಯಕ್ಕಾಗಿ ಆರ್‌ಸಿಬಿ ತಂಡದಲ್ಲಿ ಮೂರು ಬದಲಾವಣೆ ಸಂಭವಿಸಿತು. ಆರಂಭಕಾರ ಆರನ್‌ ಫಿಂಚ್‌, ಗಾಯಾಳು ನವದೀಪ್‌ ಸೈನಿ ಮತ್ತು ಆಲ್‌ರೌಂಡರ್‌ ಮೊಯಿನ್‌ ಅಲಿ ಅವರನ್ನು ಕೈಬಿಡಲಾಯಿತು. ಇವರ ಜಾಗಕ್ಕೆ ಜೋಶ್‌ ಫಿಲಿಪ್‌, ಶಿವಂ ದುಬೆ ಮತ್ತು ಡೇಲ್‌ ಸ್ಟೇನ್‌ ಅವರನ್ನು ಸೇರಿಸಿಕೊಳ್ಳಲಾಯಿತು. ಆದರೆ ಮುಂಬೈ ತಂಡದಲ್ಲಿ ಯಾವುದೇ ಪರಿವರ್ತನೆ ಕಂಡುಬರಲಿಲ್ಲ. ಗಾಯಾಳಾಗಿರುವ ರೋಹಿತ್‌ ಶರ್ಮ ಸತತ ಮೂರನೇ ಪಂದ್ಯದಿಂದಲೂ ಹೊರಗುಳಿದರು. ನಾಯಕತ್ವದ ಹೊಣೆಗಾರಿಕೆ ಮತ್ತೆ ಕೈರನ್‌ ಪೊಲಾರ್ಡ್‌ ಹೆಗಲೇರಿತು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
ಜೋಶ್‌ ಫಿಲಿಪ್‌ ಸ್ಟಂಪ್ಡ್ ಡಿ ಕಾಕ್‌ ಬಿ ಚಹರ್‌ 33
ದೇವದತ್ತ ಪಡಿಕ್ಕಲ್‌ ಸಿ ಬೌಲ್ಟ್ ಬಿ ಬುಮ್ರಾ 74
ವಿರಾಟ್‌ ಕೊಹ್ಲಿ ಸಿ ತಿವಾರಿ ಬಿ ಬುಮ್ರಾ 9
ಡಿ ವಿಲಿಯರ್ ಸಿ ಚಹರ್‌ ಬಿ ಪೊಲಾರ್ಡ್‌ 15
ಶಿವಂ ದುಬೆ ಸಿ ಸೂರ್ಯಕುಮಾರ್‌ ಬಿ ಬುಮ್ರಾ 2
ಕ್ರಿಸ್‌ ಮಾರಿಸ್‌ ಸಿ ಪ್ಯಾಟಿನ್ಸನ್‌ ಬಿ ಬೌಲ್ಟ್ 4
ಗುರುಕೀರತ್‌ ಔಟಾಗದೆ 14
ವಾಷಿಂಗ್ಟನ್‌ ಸುಂದರ್‌ ಔಟಾಗದೆ 10

ಇತರ 3
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 164
ವಿಕೆಟ್‌ ಪತನ: 1-71, 2-95, 3-131, 4-134, 5-134, 6-138.

ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-40-1
ಜಸ್‌ಪ್ರೀತ್‌ ಬುಮ್ರಾ 4-1-14-3
ಕೃಣಾಲ್‌ ಪಾಂಡ್ಯ 4-0-27-0
ಜೇಮ್ಸ್‌ ಪ್ಯಾಟಿನ್ಸನ್‌ 3-0-35-0
ರಾಹುಲ್‌ ಚಹರ್‌ 4-0-43-1
ಕೈರನ್‌ ಪೊಲಾರ್ಡ್‌ 1-0-5-1

ಮುಂಬೈ ಇಂಡಿಯನ್ಸ್‌
ಡಿ ಕಾಕ್‌ ಸಿ ಗುರುಕೀರತ್‌ ಬಿ ಸಿರಾಜ್‌ 18
ಇಶಾನ್‌ ಕಿಶನ್‌ ಸಿ ಮಾರಿಸ್‌ ಬಿ ಚಹಲ್‌ 25
ಸೂರ್ಯಕುಮಾರ್‌ ಔಟಾಗದೆ 79
ಸೌರಬ್‌ ತಿವಾರಿ ಸಿ ಪಡಿಕ್ಕಲ್‌ ಬಿ ಸಿರಾಜ್‌ 5
ಕೃಣಾಲ್‌ ಪಾಂಡ್ಯ ಸಿ ಮಾರಿಸ್‌ ಬಿ ಚಹಲ್‌ 10
ಪೊಲಾರ್ಡ್‌ ಔಟಾಗದೆ 4

ಇತರ 8
ಒಟ್ಟು(19.1 ಓವರ್‌ಗಳಲ್ಲಿ 5ವಿಕೆಟಿಗೆ) 166
ವಿಕೆಟ್‌ ಪತನ: 1-37, 2-52, 3-72, 4-107, 5-158.

ಬೌಲಿಂಗ್‌:
ಕ್ರಿಸ್‌ ಮಾರಿಸ್‌ 4-0-36-1
ಡೇಲ್‌ ಸ್ಟೇನ್‌ 4-0-43-0
ವಾಷಿಂಗ್ಟನ್‌ ಸುಂದರ್‌ 4-0-20-0
ಮೊಹಮ್ಮದ್‌ ಸಿರಾಜ್‌ 3.1-0-28-2
ಯಜುವೇಂದ್ರ ಚಹಲ್‌ 4-0-37-2

Advertisement

Udayavani is now on Telegram. Click here to join our channel and stay updated with the latest news.

Next