Advertisement

ಹೈದರಾಬಾದ್‌ ಬೌಲಿಂಗಿಗೆ ಹೆದರಿದ ಮುಂಬೈ

11:48 PM Nov 03, 2020 | sudhir |

ಶಾರ್ಜಾ: ಪ್ಲೇ ಆಫ್ ಹಂತಕ್ಕೇರುವ ಕನಸಿನೊಂದಿಗೆ ಆಡಲಿಳಿದ ಸನ್‌ರೈಸರ್ ಹೈದರಾಬಾದ್‌ ತನ್ನ ಬಿಗು ಬೌಲಿಂಗ್‌ ದಾಳಿಯ ಮೂಲಕ ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು 149 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

Advertisement

ಅಮೋಘ ಆಟದ ಮೂಲಕ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿರುವ ಮತ್ತು ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಮುಂಬೈಯ ಆರಂಭ ತೀರಾ ನಿಧಾನಗತಿಯಿಂದ ಕೂಡಿತ್ತು. ನಾಯಕ ರೋಹಿತ್‌ ಶರ್ಮ (4) ಔಟಾದರೆ. ಡಿ ಕಾಕ್‌ ಸತತ ಸಿಕ್ಸರ್‌, ಬೌಂಡರಿ ಸಿಡಿಸುವ ಮೂಲಕ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಇವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ ಸಂದೀಪ್‌ ಶರ್ಮ ಇವರನ್ನು ಬೌಲ್ಡ್‌ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ಡಿ ಕಾಕ್‌ 13 ಎಸೆತಗಳಿಂದ 25 ರನ್‌ ಗಳಿಸಿದರು. ಆರಂಭಿಕರ ಎರಡೂ ವಿಕೆಟ್‌ ಸಂದೀಪ್‌ ಪಾಲಾದವು. ಪವರ್‌ ಪ್ಲೇ ವೇಳೆ ಮುಂಬೈ ಜೋಶ್‌ ತೋರಲೇ ಇಲ್ಲ. ಎರಡು ವಿಕೆಟಿಗೆ 48 ರನ್‌ ಮಾಡಿ ಸಂಕಷ್ಟಕ್ಕೆ ಸಿಲುಕಿತು.

ಸೂರ್ಯ-ಇಶಾನ್‌ ಆಸರೆ
ಆರಂಭಿಕ ವಿಕೆಟ್‌ಗಳೆರಡು ಬೇಗನೆ ಕಳೆದುಕೊಂಡು ಅಪಾಯದಂಚಿನಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಸೂರ್ಯಕುಮಾರ್‌ ಯಾದವ್‌ ಮತ್ತು ಇಶಾನ್‌ ಕಿಶಾನ್‌ ಎಚ್ಚರಿಕೆಯ ಆಟವಾಡುವ ಮೂಲಕ ಆಸರೆಯಾಗಿ ನಿಂತರು. ಓವರ್‌ಗೆ ಒಂದರಂತೆ ಸಿಕ್ಸರ್‌ ಮತ್ತು ಬೌಂಡರಿ ಬಾರಿಸುತ್ತ 10 ಓವರ್‌ ವೇಳೆ ತಂಡದ ಮೊತ್ತವನ್ನು 80 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆದರೆ 12ನೇ ಓವರ್‌ ಎಸೆಯಲು ಬಂದ ಶಾಬಾಜ್‌ ನದೀಮ್‌ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗಿಗೆ ಮುಂದಾದ ಸೂರ್ಯಕುಮಾರ್‌ ಅವರನ್ನು ಸ್ಟಂಪ್ಡ್ ಬಲೆಗೆ ಬೀಳಿಸಿದರೆ, ಡೇಂಜರಸ್‌ ಬ್ಯಾಟ್ಸ್‌ಮನ್‌ ಕೃಣಾಲ್‌ ಪಾಂಡ್ಯರನ್ನು ಖಾತೆ ತೆರೆಯುವ ಮುನ್ನವೇ ಔಟ್‌ ಮಾಡುವ ಮೂಲಕ ಒಂದೇ ಓವರ್‌ನಲ್ಲಿ ಎರಡು ದೊಡ್ಡ ವಿಕೆಟ್‌ ಬೇಟೆಯಾಡಿದರು. ಅನಂತರದಲ್ಲಿ ಕ್ರೀಸ್‌ಗಿಳಿದ ಸೌರಬ್‌ ತಿವಾರಿಯೂ ರಶೀದ್‌ ಖಾನ್‌ ಗೂಗ್ಲಿ ಬಲೆಗೆ ಬಿದ್ದರು. ಅಲ್ಲಿಗೆ ಹೈದರಾಬಾದ್‌ ಕೈ ಮೇಲಾಯಿತು.

ಸೂರ್ಯಕುಮಾರ್‌ 29 ಎಸೆತಗಳಿಂದ 36 ರನ್‌ ಗಳಿಸಿದರು. ಸಿಡಿಸಿದ್ದು 5 ಬೌಂಡರಿ. ಇಶಾನ್‌ ಕಿಶನ್‌ ಗಳಿಕೆ 33 (ಒಂದು ಬೌಂಡರಿ, 2 ಸಿಕ್ಸರ್‌). 15 ಓವರ್‌ ಮುಕ್ತಾಯಕ್ಕೆ ತಂಡದ ಮೊತ್ತ ನೂರರ ಗಡಿ ದಾಟಲು ಪರದಾಡುತ್ತಿತ್ತು ಈ ವೇಳೆ ಬಿರುಸಿನ ಬ್ಯಾಟಿಂಗ್‌ ನಡೆಸಿದ ಪೊಲಾರ್ಡ್‌ 25 ಎಸೆತಗಳಿಂದ 41 ರನ್‌ ಪೇರಿಸುವ ಜತೆಗೆ ತಂಡದ ಮೊತ್ತವನ್ನು 150ರ ಸನಿಹಕ್ಕೆ ಏರಿಸುವಲ್ಲಿ ಸಹಕಾರಿಯಾದರು.

ಹೈದರಾಬಾದ್‌ ಪರ ಸಂದೀಪ್‌ ಶರ್ಮ 3, ಶಾಬಾಜ್‌ ನದೀಮ್‌ ಮತ್ತು ಜಾಸನ್‌ ಹೋಲ್ಡರ್‌ ತಲಾ 2 ವಿಕೆಟ್‌ ಕಿತ್ತು ಮಿಂಚಿದರು.
ರೋಹಿತ್‌ ಆಗಮನ ಸ್ನಾಯು ಸೆಳೆದಿಂದ ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್‌ ಶರ್ಮ ಈ ಪಂದ್ಯದ ಮೂಲಕ ಮತ್ತೆ ಆಡಲಿಳಿದರು. ಮುಂಬೈ ತಂಡ ಈ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಮತ್ತು ಕಿವೀಸ್‌ ವೇಗಿ ಟ್ರೆಂಟ್‌ ಬೌಲ್ಟ್ ಅವರಿಗೆ ವಿಶ್ರಾಂತಿ ನೀಡಿತು. ಇವರ ಸ್ಥಾನಕ್ಕೆ ಪ್ಯಾಟಿನ್ಸನ್‌ ಹಾಗೂ ಧವಳ್‌ ಕುಲಕರ್ಣಿ ಅವಕಾಶ ಪಡೆದರು. ಹೈದರಾಬಾದ್‌ ಒಂದು ಬದಲಾವಣೆ ಮಾಡಿಕೊಂಡಿತು. ಅಭಿಷೇಕ್‌ ಶರ್ಮ ಬದಲು ಪ್ರಿಯಂ ಗರ್ಗ್‌ ಅವರನ್ನು ಆಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next