Advertisement
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು 6 ವಿಕೆಟಿಗೆ 125 ರನ್ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ಉತ್ತಮ ಆರಂಭದ ಹೊರತಾಗಿಯೂ ಬ್ಯಾಟಿಂಗ್ ಕುಸಿತಕ್ಕೆ ಒಳಗಾದರೂ ಅಂತಿಮವಾಗಿ 16.3 ಓವರ್‌ಗಳಲ್ಲಿ 129 ರನ್ ಗಳಿಸಿ ಜಯಭೇರಿ ಬಾರಿಸಿತು. ಹೀಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಮೊದಲ ವಿಕೆಟಿಗೆ 53 ರನ್ ಪೇರಿಸಿದ್ದರು. ಆಬಳಿಕ ಕೆಲವು ವಿಕೆಟ್ ಉರುಳಿದ್ದರೂ ಗೆಲುವಿನ ಮೊತ್ತ ಕಡಿಮೆ ಇದ್ದ ಕಾರಣ ಮುಂಬೈ ಜಯ ಸಾಧಿಸುವಂತಾಯಿತು.
ಈ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡವು ಅಮೆಲಿಯಾ ಕೆರ್ರ ಅವರ ಮಾರಕ ದಾಳಿಗೆ ಸಿಲುಕಿ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್‌ಗಳು ಮೇಲುಗೈ ಪಡೆಯಬಹುದೆಂಬ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಅವರ ನಿರೀಕ್ಷೆ ಸರಿಯಾಗಿಯೇ ಫಲ ನೀಡಿತು. ಕೆರ್ರ ಅವರು 22 ರನ್ ನೀಡಿ ಮೂರು ವಿಕೆಟ್ ಉರುಳಿಸಿ ಬೌಲಿಂಗ್‌ನಲ್ಲಿ ಅಗ್ರಸ್ಥಾನಿಯಾಗಿ ಮಿಂಚಿದರೆ ಹೀಲಿ ಮ್ಯಾಥ್ಯೂಸ್ ಮತ್ತು ಸೈಕಾ ಇಶಾಕಿ ಅವರು ಬ್ಯಾಟರ್‌ಗಳನ್ನು ಕಾಡುವಲ್ಲಿ ಯಶಸ್ವಿಯಾದರು. ಮಂಗಳವಾರದ ಈ ಸಾಧನೆಯೊಂದಿಗೆ ಕೆರ್ರ ಮತ್ತು ಇಶಾಕಿ ಅವರು ಯುಪಿಯ ಸೋಫಿ ಅವರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗರಿಷ್ಠ 13 ವಿಕೆಟ್ ಉರುಳಿಸಿದ ಸಾಧನೆಗೆ ಪಾತ್ರರಾದರು.
Related Articles
Advertisement
ಸ್ಮತಿ ಅವರು ಕೆರ್ರ ಅವರ ಸ್ಪಿನ್ ದಾಳಿಗೆ ಸಿಲುಕುವ ಮೊದಲು ಉತ್ತಮವಾಗಿ ಆಡಿ 25 ಎಸೆತಗಳನ್ನು ಎದುರಿಸಿ 24 ರನ್ ಸಂಪಾದಿಸಿದರು. ಇದರಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಎಲ್ಸಿ ಪೆರ್ರಿ ಅವರು ಆರಂಭದಲ್ಲಿ ಎಚ್ಚರಿಕೆಯಿಂದ ಆಟವಾಡಿದರು. ಅವರು 10ನೇ ಓವರ್‌ನಲ್ಲಷ್ಟೇ ಸತತ ಬೌಂಡರಿ ಸಿಡಿಸುವ ಮೂಲಕ ರನ್‌ರೇಟ್ ಏರಿಸಿಕೊಂಡರು. ಒಟ್ಟು 28 ಎಸೆತಗಳನ್ನು ಎದುರಿಸಿ 29 ರನ್ ಗಳಿಸಿದರು. ಅದರಲ್ಲಿ ಮೂರು ಬೌಂಡರಿಗಳಿದ್ದವು. ಅರ್ಧ ಇನ್ನಿಂಗ್ಸ್ ಮುಗಿದಾಗ ತಂಡ ಎರಡು ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಅವರು ಸ್ವಲ್ಪ ಸಿಡಿದ ಕಾರಣ ತಂಡ 100ರ ಗಡಿ ದಾಟಲು ಸಾಧ್ಯವಾಯಿತು. ರಿಚಾ ಅವರು ಕೇವಲ 13 ಎಸೆತಗಳಲ್ಲಿ 29 ರನ್ ಸಿಡಿಸಿದರು. ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಇದರಲ್ಲಿ ಸೇರಿತ್ತು.