Advertisement
ಎರಡೂ ತಂಡಗಳು 12 ಪಂದ್ಯಗಳನ್ನು ಪೂರೈಸಿವೆ. ಪಂಜಾಬ್ 6 ಜಯದೊಂದಿಗೆ 12 ಅಂಕ ಹಾಗೂ ಮುಂಬೈ 5 ಜಯದೊಂದಿಗೆ 10 ಅಂಕ ಹೊಂದಿವೆ. ಹೀಗಾಗಿ ಮುಂಬೈಗೆ ಗೆಲುವು ಅನಿವಾರ್ಯ. ಸೋತರೆ ಅದು ಕೂಟದಿಂದ ಹೊರಬೀಳಲಿದೆ; ಪಂಜಾಬ್ ಹಾದಿ ಸುಗಮಗೊಳ್ಳುತ್ತದೆ. ಆದರೆ “ಐಪಿಎಲ್ ಲೆಕ್ಕಾಚಾರ’ಗಳು ಏನಿವೆಯೋ ಬಲ್ಲವರಿಲ್ಲ!
ಎರಡೂ ತಂಡಗಳು ಹಿಂದಿನ ಪಂದ್ಯದ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಮುಂಬೈ ಇದೇ ಅಂಗಳದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಎಡವಿತ್ತು. ಮುಂಬೈ 6ಕ್ಕೆ 168 ರನ್ ಗಳಿಸಿದರೆ, ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿ ಗೆದ್ದು ಬಂದಿತ್ತು. ಇನ್ನೊಂದೆಡೆ ಪಂಜಾಬ್‌ನದ್ದು ಊಹೆಗೂ ನಿಲುಕದ ಸೋಲು. ಇಂದೋರ್ ಅಂಗಳದಲ್ಲಿ ಆರ್‌ಸಿಬಿ ವಿರುದ್ಧ ಶೋಚ ನೀಯ ಬ್ಯಾಟಿಂಗ್ ನಡೆಸಿ 88 ರನ್ನಿಗೆ ಕುಸಿದದ್ದು ಪಂಜಾಬ್ ಪಾಲಿಗೆ ದೊಡ್ಡ ಗಂಡಾಂತರ ತಂದೊಡ್ಡಿದೆ.
ಮುಂಬೈ ರನ್‌ರೇಟ್ ಉತ್ತಮ
ಮುಂಬೈ ಪಾಲಿನ ಪ್ಲಸ್ ಪಾಯಿಂಟ್ ಎಂದರೆ ರನ್ ರೇಟ್. ಇದು ಪಂಜಾಬ್‌ಗಿಂತ ಉತ್ತಮ ಮಟ್ಟದಲ್ಲಿದೆ. ಮುಂಬೈ ಲೀಗ್ ಹಂತದ ಪ್ರಥಮಾರ್ಧ ದಲ್ಲಿ ಎಡವಿ ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡರೆ, ಪಂಜಾಬ್ ಬಹಳ ಬೇಗ ಪ್ಲೇ-ಆಫ್ ಪ್ರವೇಶಿಸಲಿದೆ ಎಂಬ ಕನಸನ್ನು ಬಿತ್ತಿ ಈಗ ಹೊರಬೀಳಲು ಪೈಪೋಟಿ ನಡೆಸುವ ರೀತಿಯಲ್ಲಿ ಆಡುತ್ತಿದೆ!
Related Articles
ಎರಡೂ ತಂಡಗಳ ಬ್ಯಾಟಿಂಗ್ ವಿಭಾಗ ಒನ್ ಮ್ಯಾನ್ ಶೋ ಎಂಬಂತಿದೆ. ಮುಂಬೈ ಪರ ಸೂರ್ಯಕುಮಾರ್ ಯಾದವ್, ಪಂಜಾಬ್ ಪರ ಕೆ.ಎಲ್. ರಾಹುಲ್ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಆರಂಭದಲ್ಲಿ ಸಿಡಿದ ಕ್ರಿಸ್ ಗೇಲ್ ಈಗ ಮಂಕಾಗಿದ್ದಾರೆ. ಮುಂಬೈ ಕಪ್ತಾನ ರೋಹಿತ್ ಶರ್ಮ ಸೊನ್ನೆ ಸುತ್ತುವುದರಲ್ಲೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಎರಡೂ ತಂಡಗಳ ಬೌಲಿಂಗ್ ಘಾತಕವೇನಲ್ಲ.
ಇಂದೋರ್‌ನಲ್ಲಿ ನಡೆದ ಇತ್ತಂಡಗಳ ನಡುವಿನ ಮೊದಲ ಪಂದ್ಯವನ್ನೊಮ್ಮೆ ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಇದನ್ನು ಮುಂಬೈ 6 ವಿಕೆಟ್‌ಗಳಿಂದ ಜಯಿಸಿತ್ತು. ಪಂಜಾಬ್ 6ಕ್ಕೆ 174 ರನ್ ಗಳಿಸಿದರೆ, ಮುಂಬೈ 19 ಓವರ್‌ಗಳಲ್ಲಿ 4 ವಿಕೆಟಿಗೆ 176 ರನ್ ಮಾಡಿ ಗೆದ್ದು ಬಂದಿತ್ತು. 57 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ
ಗೌರವಕ್ಕೆ ಪಾತ್ರರಾಗಿದ್ದರು.
Advertisement