ಮುಂಬೈ: ಈ ಐಪಿಎಲ್‌ನಲ್ಲಿ ಸತತ 8 ಪಂದ್ಯ ಸೋತು ಹೀನಾಯ ಪರಿಸ್ಥಿತಿಯಲ್ಲಿದ್ದ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್, 9ನೇ ಪಂದ್ಯದಲ್ಲಿ ಗೆದ್ದಿದೆ.
ಐದು ಬಾರಿಯ ಚಾಂಪಿಯನ್ ಇದೇ ಮೊದಲ ಬಾರಿಗೆ ಇಂತಹದ್ದೊಂದು ದುಸ್ಥಿತಿ ಎದುರಿಸಿದೆ! ಹುಟ್ಟುಹಬ್ಬದ ದಿನವೇ ರೋಹಿತ್ ಗೆಲುವನ್ನು ಕಂಡು ನಿಟ್ಟುಸಿರುಬಿಟ್ಟರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟಿಗೆ 158 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು. ಇದನ್ನು ಬೆನ್ನತ್ತಿದ ಮುಂಬೈ 19.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 161 ರನ್ ಗಳಿಸಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ (51), ತಿಲಕ್ ವರ್ಮ (35), ಟಿಮ್ ಡೇವಿಡ್ (20) ಗೆಲುವಿನ ಬ್ಯಾಟಿಂಗ್ ಮಾಡಿದರು.
ರಾಜಸ್ಥಾನಕ್ಕೆ ಬಟ್ಲರ್ ಆಸರೆ: ರಾಜಸ್ಥಾನ ಪರ ಇನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ ಅರ್ಧಶತಕ ಬಾರಿಸಿದರು. ಇನ್ನೊಬ್ಬ ಆರಂಭಿಕ ದೇವದತ್ತ ಪಡಿಕ್ಕಲ್ 15 ರನ್ ತೆಗೆಯಲು ಅಷ್ಟೇ ಎಸೆತ ತೆಗೆದುಕೊಂಡಿದ್ದರು. ನಾಯಕ ಸ್ಯಾಮ್ಸನ್ ಕೂಡ ಮಿಂಚಲಿಲ್ಲ. ಈ ಐಪಿಎಲ್‌ನಲ್ಲಿ ಮೂರು ಶತಕ ಸಿಡಿಸಿರುವ ಜೋಸ್ ಬಟ್ಲರ್ ಇಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದರು. ಅವರ ಈ ಸಾಹಸದಿಂದಾಗಿ ರಾಜಸ್ಥಾನ ತುಸು ಉತ್ತಮ ಮೊತ್ತ ಗಳಿಸಿತು. 52 ಎಸೆತ ಎದುರಿಸಿದ ಜೋಸ್ 67 ರನ್ ಗಳಿಸಿದರು. 5 ಬೌಂಡರಿ, 4 ಸಿಕ್ಸರ್ ಸಿಡಿಸಿದರು.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ್ 20 ಓವರ್, 158/6 (ಜೋಸ್ ಬಟ್ಲರ್ 67, ರಿಲೇ ಮೆರೆಡಿಥ್ 24ಕ್ಕೆ 2). ಮುಂಬೈ 19.2 ಓವರ್, 161/5 (ಸೂರ್ಯಕುಮಾರ್ 51, ತಿಲಕ್ ವರ್ಮ 35, ಪ್ರಸಿದ್ಧಕೃಷ್ಣ 29ಕ್ಕೆ 1).